ಶಕ್ತಿನಗರ ಮಂಜಡ್ಕ ಮಕ್ಕಳ ಉದ್ಯಾನವನ ನಿರ್ನಾಮಕ್ಕೆ ಹುನ್ನಾರ ಏಕೈಕ ಪಾರ್ಕ್ ಶಾಶ್ವತವಾಗಿ ಉಳಿಸಲು ಸ್ಥಳೀಯರ ಹೋರಾಟ

mng--8 April Manjadka parl
Published on

ಮಂಗಳೂರು: ಶಕ್ತಿನಗರ ಮಂಜಡ್ಕ ಒಂದನೇ ಅಡ್ಡರಸ್ತೆಯಲ್ಲಿರುವ ಮಕ್ಕಳ ಉದ್ಯಾನವನವನ್ನು ಖಾಸಗಿ ಬಡಾವಣೆಗೆ ರಸ್ತೆ ನಿರ್ಮಾಣದ ಉದ್ದೇಶದಿಂದ ನಿರ್ನಾಮ ಮಾಡಲು ಹುನ್ನಾರ ನಡೆದಿದ್ದು, ಸ್ಥಳೀಯರು ವ್ಯಾಪಕ ಆಕ್ಷೇಪ ವ್ಯಕ್ತಪಡಿಸಿ, ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.

ಕರ್ನಾಟಕ ಗೃಹ ಮಂಡಳಿಯ ಹೆಸರಿನಲ್ಲಿರುವ ಜಾಗದಲ್ಲಿರುವ ಸುಮಾರು 15 ಸೆಂಟ್ಸ್‌ನಲ್ಲಿ ಮಹಾನಗರ ಪಾಲಿಕೆ ಮಕ್ಕಳ ಉದ್ಯಾನವನ ನಿರ್ಮಾಣ ಮಾಡಿದೆ. 2019-20ರಲ್ಲಿ ವಠಾರದ ಜನರ ಪ್ರಯತ್ನದ ಫಲವಾಗಿ ಉದ್ಯಾನವನ ಮಂಜೂರುಗೊಂಡು 2022 ಡಿ.1ರಂದು ಉದ್ಘಾಟನೆಗೊಂಡಿತ್ತು. ಉದ್ಯಾನವನಕ್ಕೆ 13.86 ಲಕ್ಷ ರೂ. ಪಾಲಿಕೆಯಿಂದ ವೆಚ್ಚ ಮಾಡಲಾಗಿದೆ. ಇದರ ಸಮೀಪದಲ್ಲೇ ಪೊಲೀಸ್ ವಸತಿಗೃಹ, ಗೃಹ ಮಂಡಳಿಯ ವಸತಿ ಸಮುಚ್ಛಯಗಳಿದ್ದು, ಈ ಭಾಗದ ಮಕ್ಕಳಿಗೆ ಆಟವಾಡಲು ಇದು ಏಕೈಕ ಪಾರ್ಕ್ ಆಗಿದೆ.

ಪ್ರಸ್ತುತ ಉದ್ಯಾನವನದ 200 ಮೀಟರ್ ಕೆಳಭಾಗದಲ್ಲಿರುವ ಖಾಸಗಿ ಬಡಾವಣೆಗೆ 40 ಅಡಿ ರಸ್ತೆ ಪಾರ್ಕ್ ಮೂಲಕ ನಿರ್ಮಿಸಲು ಹುನ್ನಾರ ನಡೆದಿದ್ದು, ಇದರಿಂದ ಪಾರ್ಕ್ ನಿರ್ವಹಣೆ ಮಾಡುತ್ತಿರುವ ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಖಾಸಗಿ ಬಡಾವಣೆಗೆ ಈಗಾಗಲೇ ಬೇರೆ ಎರಡು ರಸ್ತೆಗಳಿದ್ದರೂ ಹಾಗೂ ಹತ್ತಿರದಲ್ಲಿ ಯಾರಿಗೂ ತೊಂದರೆ ಆಗದಂತೆ ಇನ್ನೊಂದು ರಸ್ತೆ ನಿರ್ಮಾಣಕ್ಕೆ ಅವಕಾಶವಿದ್ದರೂ ಪಾರ್ಕ್ ನಡುವೆ ರಸ್ತೆ ನಿರ್ಮಾಣದ ಅಗತ್ಯತೆ ಏನು ಎಂದು ಪ್ರಶ್ನಿಸಿದ್ದಾರೆ.

ಕರ್ನಾಟಕ ಪಾರ್ಕ್ ಆ್ಯಂಡ್ ಓಪನ್ ಸ್ಪೇಸ್ ಆ್ಯಕ್ಟ್ 1985 ಪ್ರಕಾರ ಉದ್ಯಾನವನದ ಯಾವುದೇ ಜಾಗವನ್ನು ಯಾವುದೇ ಕಾರಣಕ್ಕೂ ಬೇರೆ ಉದ್ದೇಶಕ್ಕೆ ಮುಟ್ಟುವಂತಿಲ್ಲ ಎಂಬ ನಿಯಮವಿದೆ. ಆದರೂ ನಿಯಮ ಉಲ್ಲಂಘಿಸಿ, 40 ಅಡಿ ರಸ್ತೆ ಖಾಸಗಿ ಸಂಸ್ಥೆಗೆ ರಸ್ತೆ ನಿರ್ಮಾಣಕ್ಕೆ ನೀಡಲು ಹುನ್ನಾರ ನಡೆಸಿರುವುದು ಸಮಂಜಸವಲ್ಲ ಎಂದು ಸ್ಥಳೀಯ ನಿವಾಸಿ ಥೋಮಸ್ ಡಿಸೋಜ ವಿಜಯವಾಣಿಗೆ ತಿಳಿಸಿದ್ದಾರೆ.

ಮಂಜಡ್ಕ ಒಂದನೇ ಅಡ್ಡ ರಸ್ತೆಯಲ್ಲಿರುವ ಉದ್ಯಾನವನವನ್ನು ಮಹಾನಗರ ಪಾಲಿಕೆಯಲ್ಲಿ ನೋಂದಣಿಯಾದ ಬಗ್ಗೆ ದೃಢೀಕೃತ ಪತ್ರ, ನೋಂದಣಿ ಸಂಖ್ಯೆ, ದಿನಾಂಕ ಹಾಗೂ ಉದ್ಯಾನವನಕ್ಕೆ ತಗಲಿದ ಖರ್ಚು, ವೆಚ್ಚ, ಉದ್ಯಾನವನದ ವಿಸ್ತೀರ್ಣದ ಮಾಹಿತಿ ನೀಡುವಂತೆ ಸ್ಥಳೀಯ ನಿವಾಸಿ ಐ.ಪ್ರಭಾಕರ ಅವರು ಮಾಹಿತಿ ಹಕ್ಕಿನಲ್ಲಿ ಕೇಳಿದ್ದು, ಪಾಲಿಕೆಯಿಂದ ಉದ್ಯಾನವನ ಕಾಮಗಾರಿಗೆ 13,60,968 ರೂ. ಖರ್ಚಾಗಿದೆ. ಉಳಿದ ಮಾಹಿತಿ ಲಭ್ಯವಿಲ್ಲ ಎಂದು ಉತ್ತರಿಸಿದ್ದಾರೆ. ಪಾಲಿಕೆಯಿಂದ ನಿರ್ಮಾಣ ಮಾಡಿದ ಮಕ್ಕಳ ಉದ್ಯಾನವನ ನಾಲ್ಕೇ ವರ್ಷಗಳಲ್ಲಿ ನಾಶ ಮಾಡಿ ಅದರಲ್ಲಿ ರಸ್ತೆ ನಿರ್ಮಾಣ ಮಾಡುವುದಾದರೆ ಸಾರ್ವಜನಿಕರ ತೆರಿಗೆ ಹಣ ದುಂದು ವೆಚ್ಚ ಮಾಡಿದಂತಾಗಿಲ್ಲವೇ? ಈ ಬಗ್ಗೆ ಪಾಲಿಕೆಗೆ ಲಾಯರ್ ನೋಟಿಸ್ ಕಳುಹಿಸಿದರೂ ಉತ್ತರ ನೀಡಿಲ್ಲ ಎಂದು ಸ್ಥಳೀಯ ನಿವಾಸಿ ಐ.ಪ್ರಭಾಕರ ತಿಳಿಸಿದ್ದಾರೆ.

ಮಂಜಡ್ಕ ಒಂದನೇ ಅಡ್ಡ ರಸ್ತೆಯಲ್ಲಿ ಮಕ್ಕಳ ಉದ್ಯಾನವನ ನಿರ್ಮಾಣಕ್ಕೆ ಸಾಕಷ್ಟು ಶ್ರಮ ವಹಿಸಿದ್ದೆವು. ಸ್ವತಃ ಖರ್ಚು ಮಾಡಿ ಹುಲ್ಲು ತೆಗೆದು, ಗಿಡಗಳಿಗೆ ನೀರು ಹಾಕಿ ಉದ್ಯಾನವನ ನಿರ್ವಹಣೆ ಮಾಡುತ್ತಿದ್ದೇವೆ. ಪ್ರತಿದಿನ 60ರಷ್ಟು ಮಕ್ಕಳು ಬಂದು ಆಟವಾಡುತ್ತಾರೆ. ಸಾರ್ವಜನಿಕರು ವಾಕಿಂಗ್ ಮಾಡುತ್ತಾರೆ. ಪಾರ್ಕ್ ಶಾಶ್ವತವಾಗಿ ಉಳಿಯಬೇಕು ಎಂಬುದು ನಮ್ಮ ಆಶಯ.

ಐ.ಪ್ರಭಾಕರ

ಸ್ಥಳೀಯ ನಿವಾಸಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net