

ಬೆಂಗಳೂರು: ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತವಾಗಿ ಇಂದು ರೈಲೊಂದು ಮಹಿಳೆಯರಿಂದ ಚಾಲನೆಯಾಗಿದ್ದಷ್ಟೇ ಅಲ್ಲದೆ, ಸಂಪೂರ್ಣವಾಗಿ ಮಹಿಳಾ ಸಿಬ್ಬಂದಿಯಿಂದಲೇ ನಿರ್ವಹಣೆಗೊಂಡಿದೆ. ನೈಋತ್ಯ ರೈಲ್ವೆಯ ಬೆಂಗಳೂರು ವಿಭಾಗವು ಅಂತಾರಾಷ್ಟ್ರೀಯ ಮಹಿಳಾ ದಿನವನ್ನು ಹೀಗೆ ವಿಶೇಷವಾಗಿ ಆಚರಣೆ ಮಾಡಿದೆ. ಬೆಂಗಳೂರು-ಮೈಸೂರು ರಾಜ್ಯರಾಣಿ ಎಕ್ಸ್ಪ್ರೆಸ್ ರೈಲು ಇಂದು ಇದಕ್ಕೆ ಸಾಕ್ಷಿಯಾಗಿದೆ.
ಇಂದು ಈ ರೈಲಿಗೆ ಮಹಿಳಾ ಪಾಯಿಂಟ್ಸ್ಮ್ಯಾನ್ ಲೀಲಾವತಿ ಮತ್ತು ಕವಿತಾ ಚಾಲನೆ ನೀಡಿದರು. ಈ ರೈಲನ್ನು ಲೋಕೋ ಪೈಲಟ್ ಅಶ್ವಿನಿಯರಸಿ, ಸಹಾಯಕ ಪೈಲಟ್ ಮೇಘಾ ಡ್ರಾಲಿ ಸತ್ಯಂ ಚಾಲನೆ ಮಾಡಿದರು. ರಿಚಾಮಣಿ ತ್ರಿಪಾಠಿ ಗಾರ್ಡ್ ಆಗಿ ಕಾರ್ಯನಿರ್ವಹಿಸಿದರು. ರೈಲ್ವೆ ಸಂರಕ್ಷಣಾ ಪಡೆಯ ಶಕ್ತಿ ತಂಡ-1ರ ಪ್ರಭಾರಿ ತನುಜಾ ಅವರೊಂದಿಗೆ ಯುವರಾಣಿ, ಗೀತಾ ರಾಣಿ, ಮೀನಾ ಮತ್ತು ದೀಪಾ ರೈಲಿಗೆ ಬೆಂಗಾವಲು ನೀಡಿದರು. ಪ್ರಯಾಣಿಕ ಟಿಕೆಟ್ ಪರಿವೀಕ್ಷಕರಾದ ಸಿ.ಎಸ್. ಭಾರತಿ, ಜಿ. ಜಯಂತಿ, ವಿ.ಜೆ. ಸೋನಾ, ಅನಿಲ ಜಕರಿಯಾ, ಎಸ್. ಗೋಮತಿ ಅವರು ರೈಲಿನಲ್ಲಿ ಟಿಕೆಟ್ ತಪಾಸಣೆ ನಡೆಸಿದರು.
ಇದನ್ನೂ ಓದಿ: ಒಂದೇ ಮರದಲ್ಲಿ ನೇತಾಡುತ್ತಿದ್ದವು ಎರಡು ಶವಗಳು!
ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಶ್ಯಾಮ್ ಸಿಂಗ್, ಹೆಚ್ಚುವರಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕಿ (ನಿರ್ವಹಣೆ) ಕುಸುಮಾ ಹರಿಪ್ರಸಾದ್, ಹಿರಿಯ ವಿಭಾಗೀಯ ಸಿಬ್ಬಂದಿ ಅಧಿಕಾರಿ ಉಮಾ ಶರ್ಮಾ, ಹಿರಿಯ ವಿಭಾಗೀಯ ಭದ್ರತಾ ಅಧಿಕಾರಿ ದೇಬಶ್ಮಿತಾ ಭಟ್ಟಾಚಾರ್ಯ ಬ್ಯಾನರ್ಜಿ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದು ವಿಭಾಗದ ಎಲ್ಲ ಮಹಿಳಾ ಸಿಬ್ಬಂದಿಗೆ ಶುಭಾಶಯ ಕೋರಿದರು.