

ಬೆಂಗಳೂರು: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮತ್ತು ಅವರ ಪತ್ನಿ ಚನ್ನಮ್ಮ ವಿರುದ್ಧ ಮಾನಹಾನಿಕಾರ ಸುದ್ದಿ ಪ್ರಸಾರ ಮಾಡುತ್ತಿರುವುದನ್ನೂ ತಕ್ಷಣ ನಿಲ್ಲಿಸಬೇಕು. ಇಲ್ಲದಿದ್ದರೆ ಮುಂದೆ ಆಗುವ ಪರಿಣಾಮ ಎದುರಿಸಬೇಕಾಗುತ್ತದೆಂದು ರಾಜ್ಯ ಒಕ್ಕಲಿಗರ ಸಂಘವು ಪವರ್ ಟಿವಿಗೆ ಖಡಕ್ ಎಚ್ಚರಿಕೆ ನೀಡಿದೆ.
ಸಂಘದ ಅಧ್ಯಕ್ಷ ಸಿ.ಎಸ್.ಬಾಲಕೃಷ್ಣ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ದೇಶ ಮತ್ತು ರಾಜ್ಯಕ್ಕೆ ತನ್ನದೆ ಆದ ಕೊಡುಗೆ ಕೊಟ್ಟಿರುವ ಎಚ್ಡಿಡಿ ಅವರನ್ನು ಪಾತೀತವಾಗಿ ಎಲ್ಲ ಸಮುದಾಯದವರು ಗೌರವಿಸುತ್ತಾರೆ. ಇಳಿವಯಸ್ಸಿನಲ್ಲೂ ರಾಜ್ಯದ ಹಿತಾಸಕ್ತಿಗೆ ಧ್ವನಿ ಎತ್ತುತ್ತಿದ್ದಾರೆ. ಹೀಗಿರುವಾಗ, ನಮ್ಮ ಸಮುದಾಯದ ಪರಮೋಚ್ಛ ನಾಯಕ ದೇವೇಗೌಡರ ಕುರಿತು ಪವರ್ ಟಿವಿ ಎಂಡಿ ರಾಕೇಶ್ ಶೆಟ್ಟಿ ಕೀಳುಮಟ್ಟದಲ್ಲಿ ಮಾತನಾಡುತ್ತಿರುವುದು ಸರಿಯಲ್ಲ. ಎಚ್ಡಿಡಿ ಬಗ್ಗೆ ಇಲ್ಲಸಲ್ಲದ ಸುದ್ದಿ ಪ್ರಸಾರ ಮಾಡುತ್ತಿರುವುದು, ಅಸಂಬದ್ಧವಾಗಿ ಮಾತನಾಡುವ ಮೂಲಕ ಸಮುದಾಯದ ಜನತೆಗೆ ನೋವು ಉಂಟು ಮಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಸಮಾಜದ ಪ್ರಮುಖ ಮುಖಂಡರನ್ನು ಭೇಟಿ ಮಾಡಿ ಚರ್ಚಿಸಲಾಗುವುದು. ರಾಜ್ಯಮಟ್ಟದ ಸಭೆ ನಡೆಸಿ ಮುಂದಿನ ತೀರ್ಮಾನ ತೆಗೆದುಕೊಳ್ಳಲಾಗುವುದು. ಮಾಧ್ಯಮದ ಇತಿಹಾಸದಲ್ಲಿ ಇಂತಹ ಮಾನಹಾನಿಕಾರ ಸುದ್ದಿಯನ್ನು ಯಾವ ಮಾಧ್ಯಮಗಳು ಪ್ರಸಾರ ಮಾಡಿಲ್ಲ. ಸಮಾಜದ ಅಂಕುಡೊಂಕು ತಿದ್ದುವ ಕೆಲಸದಲ್ಲಿ ಮಾಧ್ಯಮಗಳು ಕಾರ್ಯನಿರ್ವಹಿಸುತ್ತಿವೆ. ಆದರೆ, ಪವರ್ ಟಿವಿಯವರು ಯಾರದ್ದೂ ಮಾತು ಕೇಳಿಕೊಂಡು ಸುದ್ದಿ ಪ್ರಸಾರ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸುದ್ದಿಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ರಾಘವೇಂದ್ರ, ಪ್ರಧಾನ ಕಾರ್ಯದರ್ಶಿ ಸಿ.ದೇವರಾಜು, ಸಹಾಯಕ ಕಾರ್ಯದರ್ಶಿ ಆರ್.ಹನುಮಂತರಾಯಪ್ಪ ಸೇರಿ ವಿವಿಧ ಸಂಟನೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಬ್ಲಾಕ್ ಮೇಲರ್ ರಾಕೇಶ್ ಶೆಟ್ಟಿ?:
ಸಂಘದ ಉಪಾಧ್ಯಕ್ಷ ಆರ್.ಪ್ರಕಾಶ್ ಮಾತನಾಡಿ, ನಮ್ಮ ಸಂಘ ಬರೀ ಆಸ್ಪತ್ರೆ, ವೈದ್ಯಕಿಯ ಕಾಲೇಜು ನಡೆಸುತ್ತಿಲ್ಲ. ಸಮುದಾಯಕ್ಕೆ ಧಕ್ಕೆಯಾದರೆ ಧ್ವನಿ ಎತ್ತುವ ಕೆಲಸ ಮಾಡುತ್ತಿವೆ. ಪವರ್ಟವಿ ಚಾನೆಲ್ ಮುಖ್ಯಸ್ಥ ಕೊಚ್ಚೆ ಇದ್ದಂತೆ. ಇವನೊಬ್ಬ ಬ್ಲಾಕ್ ಮೇಲರ್. ಎಚ್ಡಿಡಿ ವಿರುದ್ಧ ತೇಜೋವಧೆ ಮಾಡುತ್ತಿರುವುದನ್ನು ತಕ್ಷಣ ನಿಲ್ಲಿಸಿ ಚಾನೆಲ್ನವರು ಕ್ಷಮೆ ಕೇಳಬೇಕು. ಯಾವುದೇ ಕಾರಣಕ್ಕೂ ನಮ್ಮ ತಾಳ್ಮೆ ಪರೀಕ್ಷಿಸಬಾರದು. ಸಮುದಾಯದ ಜನರು ಬೀದಿಗೆ ಇಳಿದರೆ ಮುಂದೆ ಆಗುವ ಅನಾಹುತಕ್ಕೆ ನೀನೇ ಹೊರಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಎಚ್.ಡಿ.ದೇವೇಗೌಡರ ಮಾಡಿರುವ ಜನಪ್ರಿಯ ಕೆಲಸಗಳ ಬಗ್ಗೆ ನಾಡಿನ ಜನರಿಗೆ ಗೊತ್ತಿದೆ. ನೀರಾವರಿ ಕ್ಷೇತ್ರದಲ್ಲಿ ಅಭೂತಪೂರ್ವ ಕೊಡುಗೆ ಕೊಟ್ಟಿದ್ದಾರೆ.ರಾಜಕೀಯ ಮುತ್ಸದ್ಧಿತನ ಹೊಂದಿರುವ ಎಚ್ಡಿಡಿ ಬಗ್ಗೆ ಪವರ್ ಟಿವಿ ಮಾನಹಾನಿಕಾರ ಸುದ್ದಿ ಪ್ರಸಾರ ಮಾಡಬಾರದು. ಈ ಸಂಬಂಧ ಸಮುದಾಯದ ಮುಂಚೂಣಿಯಲ್ಲಿರುವ ಸ್ವಾಮೀಜಿಯವರು ನೀಡುವ ಸಲಹೆ ಮೇರೆಗೆ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು.
|ಕೆ.ವಿ.ಶ್ರೀಧರ್. ಕಾರ್ಯಾಧ್ಯಕ್ಷ. ರಾಜ್ಯ ಒಕ್ಕಲಿಗರ ಸಂಘ.