

ಬೀದರ್: ಸದಾ ಎಲ್ಲರನ್ನೂ ನಗಿಸುತ್ತ ನಗುತ್ತ ಬಾಳಿ ಬದುಕಿದ ಬಾಲಿವುಡ್ ನಟ, ಸ್ಟ್ಯಾಂಡ್ ಅಪ್ ಕಾಮೆಡಿಯನ್ ರಾಜು ಶ್ರೀವಾಸ್ತವ್ ಇಂದು ನಮ್ಮನ್ನು ಅಗಲಿದ್ದಾರೆ. ಹೃದಯಾಘಾತವಾಗಿ ಕಳೆದ 42 ದಿನಗಳಿಂದ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಇಂದು ನಿಧನರಾಗಿದ್ದಾರೆ.
ಬಾಲಿವುಡ್‌ನ ಹಾಸ್ಯನಟ ರಾಜು ಶ್ರೀವಾಸ್ತವ್‌ಗೂ ರಾಜ್ಯದ ಗಡಿ ಜಿಲ್ಲೆ ಬೀದರ್ಗೂ ಸಂಬಂಧ ಇತ್ತು. ಬೀದರ್ನ ಭಾಲ್ಕಿ ಪಟ್ಟಣದ ವೈದ್ಯ ಡಾ. ಶಿವಕುಮಾರ್ ಮಂಡಿ ಎಂಬುವವರು ನಿರ್ಮಿಸುತ್ತಿರುವ ಹಿಂದಿ ಚಿತ್ರದಲ್ಲಿ ರಾಜು ಶ್ರೀವಾಸ್ತವ್ ಮುಖ್ಯಪಾತ್ರದಲ್ಲಿ ನಟಿಸುತ್ತಿದ್ದರು.
ಹೀಗಾಗಿ 10 ತಿಂಗಳ ಹಿಂದೆ ಬೀದರ್, ಭಾಲ್ಕಿ ಮುಂತಾದೆಡೆ 15 ದಿನಗಳ ಕಾಲ ಠಿಕಾಣಿ ಹೂಡಿ ಹಲವು ಕಡೆ ಚಿತ್ರಿಕರಣದಲ್ಲಿ ಪಾಲ್ಗೊಂಡಿದ್ದರು. ಡಾ.ಶಿವಕುಮಾರ್ ಮಂಡಿ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ನಿರ್ಮಿಸುತ್ತಿರುವ 'ಜೀನತ್' ಸಿನಿಮಾದಲ್ಲಿ ನಟಿಸುತ್ತಿದ್ದ ರಾಜು ಶ್ರೀವಾಸ್ತವ್ ಇನ್ನಿಲ್ಲ ಎಂಬುದು ಗಡಿ ಭಾಗದ ಅಭಿಮಾನಿಗಳಿಗೆ ದುಃಖ ತಂದಿದೆ.