ರಾಜಸ್ಥಾನ ರಾಯಲ್ಸ್ ತಂಡ ಚಾಂಪಿಯನ್

ರಾಜಸ್ಥಾನ ರಾಯಲ್ಸ್ ತಂಡ ಚಾಂಪಿಯನ್
Published on

ಗೋಣಿಕೊಪ್ಪಲು: ಪೊನ್ನಂಪೇಟೆಯ ಹಿರಿಯ ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಮೂರು ದಿನಗಳ ಕಾಲ ನಡೆದ ಪೊನ್ನಂಪೇಟೆ ಪ್ರೀಮಿಯರ್ ಲೀಗ್ ಸೀಸನ್-4 ಕ್ರಿಕೆಟ್ ಪಂದ್ಯ ಮಂಗವಾರ ವರ್ಣರಂಜಿತ ತೆರೆಕಂಡಿತು.

ಮೂರು ದಿನಗಳ ಕಾಲ ನಡೆದ ಪಿಪಿಎಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಹತ್ತು ತಂಡಗಳು ಪಾಲ್ಗೊಂಡು ಗೆಲುವಿಗಾಗಿ ತೀವ್ರ ಹಣಾಹಣಿ ನಡೆಸುವುದರ ಜತೆಗೆ ಕ್ರೀಡಾಭಿಮಾನಿಗಳಿಗೆ ಕ್ರಿಕೆಟ್ ಆಟದ ರಸದೌತಣ ಉಣಬಡಿಸಿದವು.

ಪೊನ್ನಂಪೇಟೆ ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ಆಲೀರ ರಶೀದ್ ಅವರ ಬೌಲಿಂಗ್‌ಗೆ ಹಿರಿಯ ಮುಖಂಡ ಎರ್ಮುಹಾಜಿ ಬ್ಯಾಟ್ ಮಾಡುವ ಮೂಲಕ ಫೈನಲ್ ಪಂದ್ಯಾವಳಿಗೆ ಚಾಲನೆ ನೀಡಿದರು.

ಫೈನಲ್‌ನಲ್ಲಿ ರಾಜಸ್ಥಾನ ರಾಯಲ್ಸ್ ತಂಡವು ಕೊಲ್ಕತ್ತ ನೈಟ್‌ರೈಡರ್ಸ್‌ ತಂಡವನ್ನು ಸೋಲಿಸುವ ಮೂಲಕ ಗೆಲುವಿನ ನಗೆ ಬೀರಿತು. ಕೋಲ್ಕತ್ತಾ ನೈಟ್ ರೈಡರ್ಸ್ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. ಪಂಜಾಬ್ ಕಿಂಗ್ಸ್ ತೃತೀಯ ಸ್ಥಾನ ಹಾಗೂ ಮುಂಬೈ ಇಂಡಿಯನ್ಸ್ ನಾಲ್ಕನೇ ಸ್ಥಾನ ಪಡೆದುಕೊಂಡವು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಎರ್ಮುಹಾಜಿ, ಕ್ರಿಕೆಟ್ ಆಟದ ಬಗ್ಗೆ ಯುವ ಸಮುದಾಯಕ್ಕೆ ಸ್ಫೂರ್ತಿ ನೀಡುವ ಉದ್ದೇಶದಿಂದ ಪೊನ್ನಂಪೇಟೆಯಲ್ಲಿ ಹಲವು ವರ್ಷಗಳಿಂದ ಕ್ರಿಕೆಟ್ ಪಂದ್ಯ ಆಯೋಜಿಸಿಕೊಂಡು ಬರಲಾಗುತ್ತಿದೆ. ಪ್ರೀತಿ, ವಿಶ್ವಾಸ, ಸಾಮರಸ್ಯ ಬೆಸೆಯಲು ಕ್ರೀಡಾಕೂಟಗಳು ಸಹಕಾರಿಯಾಗಿವೆ ಎಂದರು.

ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ಆಲೀರ ರಶೀದ್ ಮಾತನಾಡಿ, ಮಾನಸಿಕ ಹಾಗೂ ದೈಹಿಕ ಬೆಳವಣಿಗೆಗೆ ಕ್ರೀಡೆಗಳು ಸಹಕಾರಿಯಾಗಿದ್ದು, ಈ ನಿಟ್ಟಿನಲ್ಲಿ ಯುವ ಸಮುದಾಯ ಕ್ರೀಡಾ ಚಟುವಟಿಕೆಗಳಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳುವಂತೆ ಸಲಹೆ ನೀಡಿದರು.

ಎ.ಎಂ.ರಶೀದ್ ಮಾತನಾಡಿ, ಯುವ ಜನತೆ ದುಶ್ಚಟಗಳಿಂದ ದೂರವಿದ್ದು, ಕ್ರೀಡಾಕೂಟಗಳಲ್ಲಿ ಭಾಗವಹಿಸುವಂತೆ ಕರೆ ನೀಡಿದರು.

ವರ್ತಕ ರಿಜ್ವಾನ್, ಲಕ್ಷ್ಮೀರೆಡ್ಡಿ, ಕಾರ್ತಿಕ್, ಮತ್ರಂಡ ಪ್ರವೀಣ್, ಡಾ.ಬೋಪಣ್ಣ, ಪಂದ್ಯಾವಳಿ ಆಯೋಜನ ಸಮಿತಿ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net