ರೈತ ಸಂಪರ್ಕ ಕೇಂದ್ರ ಮರೀಚಿಕೆ, ಅಜೆಕಾರು ವ್ಯಾಪ್ತಿಯಲ್ಲಿಯೆ ಕಾರ್ಯಾಚರಣೆ ಸ್ಥಾಪನೆಗೆ ಒತ್ತಡ

Raitha samparka kendra
ಅಜೆಕಾರ್ ರೈತ ಸಂಪರ್ಕ ಕೇಂದ್ರ
Published on

ನರೇಂದ್ರ ಎಸ್.ಮರಸಣಿಗೆ

ಹೆಬ್ರಿ ತಾಲೂಕು ರಚನೆಯಾಗಿ 5 ವರ್ಷ ಆಗಿದೆ. ಹೆಬ್ರಿ ಹೋಬಳಿಯನ್ನೂ ಮಾಡಲಾಗಿದೆ. ಆದರೆ ಪ್ರತಿ ಹೋಬಳಿಯೊಂದಕ್ಕಿರುವ ರೈತ ಸಂಪರ್ಕ ಕೇಂದ್ರ ಮಾತ್ರ ಹೆಬ್ರಿ ತಾಲೂಕಿಗೆ ಇನ್ನೂ ಮರೀಚಿಕೆಯಾಗಿದೆ.

ಕಾರ್ಕಳ ತಾಲೂಕಿನಲ್ಲಿ ಕಾರ್ಕಳ ಹಾಗೂ ಅಜೆಕಾರು ಒಟ್ಟು ಎರಡು ಹೋಬಳಿಗಳಿದ್ದು, ಎರಡು ರೈತ ಸಂಪರ್ಕ ಕೇಂದ್ರಗಳಿವೆ. ಆದರೆ ಈಗ ಹೆಬ್ರಿಯು ಅಜೆಕಾರು ರೈತ ಸಂಪರ್ಕ ಕೇಂದ್ರ ವ್ಯಾಪ್ತಿಯಲ್ಲಿಯೆ ಕಾರ್ಯಾಚರಿಸುತ್ತಿದೆ. ಹೆಬ್ರಿ ತಾಲೂಕು ರಚನೆಯಾಗುವ ಮೊದಲು ಹೆಬ್ರಿ ಸೇರಿದಂತೆ 12 ಗ್ರಾಮಗಳು ಅಜೆಕಾರು ಹೋಬಳಿಯಲ್ಲೆ ಬರುತ್ತಿದ್ದವು.

ಅಜೆಕಾರು ರೈತ ಸಂಪರ್ಕ ಕೇಂದ್ರದ ವ್ಯಾಪ್ತಿ

ಅಜೆಕಾರು ರೈತ ಸಂಪರ್ಕ ಕೇಂದ್ರ ಕಾರ್ಕಳ ತಾಲೂಕಿನ 7 ಹಾಗೂ ಹೆಬ್ರಿ ತಾಲೂಕುಗಳ 14 ಗ್ರಾಮಗಳು ಅಜೆಕಾರು ರೈತ ಸಂಪರ್ಕ ಕೇಂದ್ರದ ವ್ಯಾಪ್ತಿ ಬರುತ್ತವೆ. ಕಾರ್ಕಳ ತಾಲೂಕಿನ ಮರ್ಣೆ ಗ್ರಾಮ, ಶಿರ್ಲಾಲು, ಮಾಳ, ಹಿರ್ಗಾನ, ಎರ್ಲಪಾಡಿ ಕಡ್ತಲ, ಹೆಬ್ರಿ ತಾಲೂಕಿನ ಹೆಬ್ರಿ ವರಂಗ, ನಾಡ್ಪಾಲು, ಬೆಳಂಜೆ, ಚಾರ, ಶಿವಪುರ ಮುದ್ರಾಡಿ ಗ್ರಾಮಗಳು ಅಜೆಕಾರು ರೈತ ಸಂಪರ್ಕ ಕೇಂದ್ರ ವ್ಯಾಪ್ತಿಯಲ್ಲಿ ಬರುತ್ತದೆ. ಅದರಲ್ಲೂ ಹೆಬ್ರಿ ತಾಲೂಕಿನ ಗ್ರಾಮಗಳದ ಬೆಳ್ವೆ ಅಲ್ಬಾಡಿ, ಮಡಾಮಕ್ಕಿ, ಶೇಡಿಮನೆ, ಗ್ರಾಮಗಳು ಕುಂದಾಪುರ ಹೋಬಳಿಯ ರೈತ ಸಂಪರ್ಕ ಕೇಂದ್ರ ಆಶ್ರಯಿಸಿವೆ.

ಸೌಲಭ್ಯ ಪಡೆಯಲು ಕಷ್ಟ

ಹೆಬ್ರಿ ತಾಲೂಕಿನ ಹೆಬ್ರಿ, ನಾಡ್ಪಾಲು, ಬೆಳಂಜೆ, ಚಾರ ಶಿವಪುರ ಗ್ರಾಮಗಳು ಅಜೆಕಾರು ರೈತ ಸಂಪರ್ಕ ಕೇಂದ್ರದಿಂದ ಸುಮಾರು 20-27 ಕಿಮೀ ವ್ಯಾಪ್ತಿ ದೂರದಲ್ಲಿದೆ. ಅದರಲ್ಲೂ ಕುಂದಾಪುರ ಹೋಬಳಿ ಹೊಂದಿರುವ ಗ್ರಾಮಗಳಾದ ಬೆಳ್ವೆ ಅಲ್ಬಾಡಿ, ಮಡಾಮಕ್ಕಿ, ಶೇಡಿಮನೆ, ಗ್ರಾಮಗಳು ಕುಂದಾಪುರದಿಂದ ಸುಮಾರು 35 ಕಿ.ಮೀ ದೂರದಲ್ಲಿದೆ ಇದರಿಂದಾಗಿ ರೈತರು ರೈತ ಸಂಪರ್ಕ ಕೇಂದ್ರಗಳ ಸೇವೆ ಪಡೆಯಲು ಕಷ್ಟವಾಗುತ್ತದೆ. ಹೆಬ್ರಿ ತಾಲೂಕಿನಲ್ಲಿ 1100 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಕೃಷಿ ಭೂಮಿಯಿದೆ. ಅಜೆಕಾರು ರೈತ ಸಂಪರ್ಕ ಕೇಂದ್ರದಲ್ಲಿ 9115 ರೈತರಿದ್ದಾರೆ. ಅದರಲ್ಲಿ ಶೇ.64 ರೈತರು ಹೆಬ್ರಿ ಭಾಗದವರು. ಹೆಬ್ರಿ ರೈತ ಸಂಪರ್ಕ ಕೇಂದ್ರ ನಿರ್ಮಾಣವಾದರೆ ಹೆಬ್ರಿ ತಾಲೂಕು ವ್ಯಾಪ್ತಿಯ 18ಗ್ರಾಮಗಳ ರೈತರಿಗೆ ಪ್ರಯೋಜನವಾಗಲಿದೆ.

ಹೆಬ್ರಿ ತಾಲೂಕಿನಲ್ಲಿ ರೈತ ಸಂಪರ್ಕ ಕೇಂದ್ರ ನಿರ್ಮಾಣವಾದರೆ ಸ್ಥಳೀಯ ಮಟ್ಟದಲ್ಲಿ ರೈತರಿಗೆ ಎಲ್ಲ ಸೇವೆ ದೊರೆಯಲಿವೆ ಮತ್ತು ಹೆಚ್ಚು ರೈತರು ರೈತ ಸಂಪರ್ಕ ಕೇಂದ್ರಗಳಲ್ಲಿ ಮಾಹಿತಿ ಪಡೆದು ಆಧುನಿಕ ಕೃಷಿಯಂತ್ರಗಳು ಹಾಗೂ ಹೊಸ ತಂತ್ರಜ್ಞಾನದ ಭತ್ತ ಬೀಜಗಳು, ಎಲ್ಲವೂ ದೊರೆಯಲಿವೆ. ಉತ್ತಮ ಬೆಳೆ ಪಡೆಯಲು ಸಾಧ್ಯವಿದೆ. ಬೆಳೆಗಳಿಗೆ ಬರುವ ರೋಗಗಳಿಗೆ ಮಾಹಿತಿ ಪಡೆಯಲು ಕೂಡ ಅನುಕೂಲವಾಗಲಿದೆ.-ಗೋವಿಂದ ನಾಯ್ಕ ಸಹಾಯ ಕೃಷಿ ನಿರ್ದೇಶಕರು ಕಾರ್ಕಳ

ತಾಲೂಕು ಮಟ್ಟದಲ್ಲಿ ರೈತರಿಗೆ ಎಲ್ಲ ಸೇವೆ ದೊರಕಬೇಕು. ಆದರೆ ಅಜೆಕಾರು 25 ಕಿ.ಮೀ ದೂರವಿದೆ. ನಾಡ್ಪಾಲು ಭಾಗದಿಂದ ರೈತರು ಭತ್ತದ ಬಿತ್ತನೆ ಬೀಜ ಪಡೆಯಲು ತುಂಬಾ ದೂರ ಸಾಗಬೇಕು. ವಾಹನಗಳ ಬಾಡಿಗೆ ಹೆಚ್ಚು.-ದಿನೇಶ್ ಹೆಗ್ಡೆ, ಗ್ರಾಪಂ ಸದಸ್ಯರು ನಾಡ್ಪಾಲು

ಅಂತರ ಪ್ರಮಾಣಪತ್ರ ಪಡೆಯಬೇಕಾದರೆ ಕಾರ್ಕಳಕ್ಕೆ ಹೋಗಬೇಕು. ತಾತ್ಕಾಲಿಕವಾಗಿ ಹೆಬ್ರಿಯಲ್ಲಿ ಒಂದು ದಿನವಾದರೂ ಎಲ್ಲ ಕಚೇರಿಗಳು ಕೆಲಸ ನಿರ್ವಹಿಸಿದರೆ ಜನರ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಕೆಲವೊಮ್ಮೆ ವಿದ್ಯುತ್ ಇಲ್ಲದಿದ್ದರೆ ಆ ದಿನಪೂರ್ತಿ ವ್ಯಯವಾಗುತ್ತದೆ. ಶೀಘ್ರದಲ್ಲಿ ಹೆಬ್ರಿಗೆ ಎಲ್ಲ ಇಲಾಖೆಗಳು ಬರಲಿ. ಇದು ಶಿಕ್ಷಣ ಇಲಾಖೆ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ.-ಚೇತನ್, ವಿದ್ಯಾರ್ಥಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net