ನೆಗಡಿ-ಕೆಮ್ಮಿನಿಂದ ಆತಂಕ: ಫೀವರ್ ಕ್ಲಿನಿಕ್​ಗಳಲ್ಲಿ ಹೆಚ್ಚಿದ ಕೋವಿಡ್ ಪರೀಕ್ಷೆ ಸಂಖ್ಯೆ

woman_cough 23 APR 20
Published on

ಬೆಂಗಳೂರು: ಕೋವಿಡ್ ಎರಡನೇ ಅಲೆ ಭೀತಿಯ ಬೆನ್ನಲ್ಲೇ ಶೀತ ಸಂಬಂಧಿ ರೋಗಗಳು ಜನರನ್ನು ಕಾಡಲಾರಂಭಿಸಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗಳತ್ತ ಮುಖ ಮಾಡುವವರ ಸಂಖ್ಯೆ ಏರಿಕೆಯಾಗಿದೆ. ಕಳೆದ ಎರಡು ವಾರಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆ ಹಾಗೂ ಚಳಿ ಹೆಚ್ಚಳದಿಂದಾಗಿ ಕೆಮ್ಮು, ನೆಗಡಿ, ಗಂಟಲು ಕೆರೆತ, ತಲೆನೋವು, ಜ್ವರ, ಉಸಿರಾಟದ ತೊಂದರೆ ಸಮಸ್ಯೆಗಳುಳ್ಳ ಪ್ರಕರಣಗಳು ಹೆಚ್ಚಾಗಿವೆ. ಇದರಿಂದ ಜನರಲ್ಲಿ ಕೋವಿಡ್ ಎರಡನೇ ಅಲೆಯ ಭೀತಿ ಎದುರಾಗಿದೆ. ಐರೋಪ್ಯ ದೇಶಗಳನ್ನು ಆಧರಿಸಿ ಕೋವಿಡ್ 2ನೇ ಅಲೆಬಗ್ಗೆ ತಜ್ಞರು ಎಚ್ಚರಿಕೆ ಮಾತುಗಳು ಒಂದೆಡೆಯಾದರೆ, ಮತ್ತೊಂದೆಡೆ ಹವಾಮಾನ ಬದಲಾವಣೆಯಿಂದ ಶೀತ ಸಂಬಂಧಿ ಪ್ರಕರಣಗಳು ಹೆಚ್ಚು ವರದಿಯಾಗುತ್ತಿರು ವುದರಿಂದ ಸೋಂಕು ಲಕ್ಷಣ ಹೊಂದಿರುವ ಎಲ್ಲರನ್ನೂ ಪರೀಕ್ಷೆ ಒಳಪಡಿಸುವುದು ಅನಿವಾರ್ಯವಾಗಿದೆ ಎನ್ನುತ್ತಾರೆ ವೈದ್ಯರು.

ಹೆಚ್ಚಿದ ಪರೀಕ್ಷೆ: ಹವಾಮಾನ ಬದಲಾವಣೆಯಿಂದ ಶೀತ ಸಂಬಂಧಿ ಸಮಸ್ಯೆಗಳು ಕೊಂಚ ಏರಿಕೆಯಾಗಿವೆ. ಜತೆಗೆ ಅಸ್ತಮಾ ಹಾಗೂ ಉಸಿರಾಟದ ತೊಂದರೆ ಇರುವವರಲ್ಲಿ ಸಮಸ್ಯೆ ಉಲ್ಬಣಿಸುತ್ತಿದೆ. ಹಾಗಾಗಿ ಕೋವಿಡ್ ಭೀತಿಯಲ್ಲಿರುವ ಜನರು ಸ್ವಯಂ ಪ್ರೇರಿತವಾಗಿ ಫೀವರ್ ಕ್ಲಿನಿಕ್​ಗಳಲ್ಲಿ ತಪಾಸಣೆ ಮಾಡಿಸಿಕೊಳ್ಳುತ್ತಿದ್ದಾರೆ. ಚಳಿಗಾಲದಲ್ಲಿ ವೈರಾಣು ಸೋಂಕು ಹೆಚ್ಚುವುದಲ್ಲದೆ, ಗಾಳಿಯಲ್ಲಿ ವೇಗವಾಗಿ ಹರಡುತ್ತದೆ. ಇದರಿಂದ ಒಬ್ಬರಿಗೆ ಶೀತ ಕಾಣಿಸಿಕೊಂಡರೆ ಮನೆ ಮಂದಿಯನ್ನೆಲ್ಲಾ ಕಾಡುತ್ತದೆ. ತಣ್ಣನೆ ವಾತಾವರಣದಿಂದ ಮನುಷ್ಯನ ದೇಹದಲ್ಲಿ ರೋಗನಿರೋಧಕ ಶಕ್ತಿ ಕುಗ್ಗುತ್ತದೆ. ಇದರಿಂದ ಶೀತ ಹಾಗೂ ಜ್ವರ ಬೇಗನೇ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ.

ವೈದ್ಯರ ಸಲಹೆ ಏನು?

  • ಸಾಮಾಜಿಕ ಅಂತರ, ಮಾಸ್ಕ್ ಧಾರಣೆ, ಸ್ವಚ್ಛತೆಗೆ ಆದ್ಯತೆ ನೀಡಿ.
  • ಮಕ್ಕಳು, ವೃದ್ಧರನ್ನು ಬೆಚ್ಚಗೆ ಇರಿಸಬೇಕು.
  • ಎಣ್ಣೆಯಲ್ಲಿ ಕರಿದ, ಮಸಾಲೆ ಪದಾರ್ಥಗಳ ಮಿತ ಬಳಕೆ ಮಾಡಿ.
  • ತಾಜಾ ಹಣ್ಣಿನ ರಸ ಸೇವಿಸಬೇಕು.
  • ಜನದಟ್ಟಣೆ, ಜಾತ್ರೆಗಳಿಂದ ದೂರ ಇರಿ

ಚಳಿಗಾಲದಲ್ಲಿ ಶೀತ ಸಂಬಂಧಿ ಸಮಸ್ಯೆಗಳು ಸಾಮಾನ್ಯ. ಕೋವಿಡ್ ಹಿನ್ನೆಲೆಯಲ್ಲಿ ಜನ ಜಾಗರೂಕತೆ ವಹಿಸುತ್ತಿದ್ದಾರೆ. | ಡಾ. ನಿಜಗುಣ ಮಕ್ಕಳ ತಜ್ಞ, ಇಂದಿರಾಗಾಂಧಿ ಆಸ್ಪತ್ರೆ ಹವಾಮಾನ ಬದಲಾವಣೆಯಿಂದ ಅಸ್ತಮಾ ರೋಗಿಗಳಿಗೆ ಸಮಸ್ಯೆ ಆಗಿದ್ದು ಚಿಕಿತ್ಸೆಗೆ ಬರುವವರ ಸಂಖ್ಯೆ ಹೆಚ್ಚಾಗಿದೆ. | ಡಾ. ನಾಗರಾಜ್ ನಿರ್ದೇಶಕ, ರಾಜೀವ್ ಗಾಂಧಿ ಎದೆ ರೋಗಗಳ ಆಸ್ಪತ್ರೆ

1280 ಹೊಸ ಕೇಸ್ ಪತ್ತೆ

ರಾಜ್ಯದಲ್ಲಿ ಮಂಗಳವಾರ 1,280 ಪ್ರಕರಣ ವರದಿಯಾಗಿದ್ದು, ಸೋಂಕಿತರ ಸಂಖ್ಯೆ 8.95 ಲಕ್ಷ ತಲುಪಿದೆ. 1,060 ಸೋಂಕಿತರು ಬಿಡುಗಡೆ ಹೊಂದಿದ್ದು, ಗುಣಮುಖರ ಸಂಖ್ಯೆ 8.58 ಲಕ್ಷಕ್ಕೆ ಏರಿಕೆಯಾಗಿದೆ. ಚಿಕಿತ್ಸೆ ಫಲಿಸದೆ 13 ಮಂದಿ ಮೃತಪಟ್ಟಿದ್ದು, ಸಾವಿನ ಸಂಖ್ಯೆ 11,880ಕ್ಕೇರಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net