

ಕೊಳ್ಳೇಗಾಲ: ಕೊಳ್ಳೇಗಾಲ ಪಟ್ಟಣದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಗುರುವಾರ ವಿಸ್ಡಮ್ ಎಜುಕೇಷನ್ ಸ್ಕೂಲ್ ವಿದ್ಯಾರ್ಥಿಗಳು ಪರಿಸರ ಜಾಗೃತಿ ಜಾಥಾ ನಡೆಸುವ ಜತೆಗೆ ಸಾರ್ವಜನಿಕರಿಗೆ ಸಸಿಗಳನ್ನು ನೀಡುವ ಮೂಲಕ ಅರಿವು ಮೂಡಿಸಿದರು.
ಇದಕ್ಕೂ ಮುನ್ನ ಪಟ್ಟಣದ ಪೊಲೀಸ್ ಠಾಣೆಯ ಮುಂಭಾಗ ವಿಸ್ಡಮ್ ಎಜುಕೇಷನ್ ಸ್ಕೂಲ್ ಆಡಳಿತ ಮಂಡಳಿ, ಶಿಕ್ಷಕ ವೃಂದ, ಸಿಬ್ಬಂದಿ ಹಾಗೂ ನೂರಾರು ವಿದ್ಯಾರ್ಥಿಗಳು ಸಮಾವೇಶಗೊಂಡರು. ವಿಸ್ಡಮ್ ಎಜಿಕೇಷನ್ ಸ್ಕೂಲ್ ಕಾರ್ಯದರ್ಶಿ ಮಧು ಮಲ್ಲೇಶ್ ಜಾಥಾಕ್ಕೆ ಹಸಿರು ನಿಶಾನೆ ತೋರಿ ಚಾಲನೆ ನೀಡಿದರು. ಡಾ.ಬಿ.ಆರ್.ಅಂಬೇಡ್ಕರ್ ರಸ್ತೆ ಮೂಲಕ ಮೆರವಣಿಗೆ ಡಾ.ರಾಜ್‌ಕುಮಾರ್ ರಸ್ತೆಯಲ್ಲಿ ಸಾಗಿ ಎಂಜಿಎಸ್‌ವಿ ಜೂನಿಯರ್ ಕಾಲೇಜು ಬಳಿ ಅಂತ್ಯಗೊಂಡಿತು.
ನಗರಸಭೆ ಸದಸ್ಯೆ ನಾಗಸುಂದ್ರಮ್ಮ ಜಗದೀಶ್ ಜಾಥಾದಲ್ಲಿ ಪಾಲ್ಗೊಂಡು ಮಕ್ಕಳೊಂದಿಗೆ ಸೇರಿ ಸಾರ್ವಜನಿಕರಿಗೆ ಸಸಿಗಳನ್ನು ವಿತರಣೆ ಮಾಡಿದರು. ಮಕ್ಕಳು ಪರಿಸರ ಸಂರಕ್ಷಣೆಯ ಬರಹಗಳನ್ನು ಹಿಡಿದು ಪರಿಸರ ಮಹತ್ವವನ್ನು ತಿಳಿಸಿದರು. ಈ ವೇಳೆ ಸಾರ್ವಜನಿಕರಿಗೆ ಸಸಿಗಳನ್ನು ನೀಡಿ ಪರಿಸರ ಉಳಿಸಿ ಬೆಳೆಸುವಂತೆ ಜಾಗೃತಿ ಮೂಡಿಸಿದರು.
ವಿಸ್ಡಮ್ ಸ್ಕೂಲ್ ಮುಖ್ಯ ಶಿಕ್ಷಕಿ ಭ್ರಮಾರಂಭ ಮಾತನಾಡಿ, 2025ನೇ ವರ್ಷದ ವಿಶ್ವ ಪರಿಸರ ದಿನಾಚರಣೆಯ ಮುಖ್ಯ ಉದ್ದೇಶ ಏನೆಂದರೆ ಪ್ಲಾಸ್ಟಿಕ್ ಬಳಕೆಯನ್ನು ಸೋಲಿಸುವುದು ಎಂಬುದಾಗಿದೆ. ಈ ಮಹತ್ವದ ನಿರ್ಧಾರದ ಅನುಷ್ಠಾನಕ್ಕೆ ಇಡೀ ದೇಶದ ಜನರು ಶ್ರಮಿಸಬೇಕಿದೆ.
ಪ್ಲಾಸ್ಟಿಕ್ ಬಳಕೆ ಬಹಳ ಪರಿಣಾಮ ಬೀರುತ್ತಿದೆ. ಪ್ರತಿನಿತ್ಯವೂ ನೇರವಾಗಿ ಹಾಗೂ ಪರೋಕ್ಷವಾಗಿ ಪ್ಲಾಸ್ಟಿಕ್ ಬಳಸುತ್ತೇವೆ. ಇದಕ್ಕೆ ಕಡಿವಾಣ ಹಾಕಬೇಕಿದೆ. ನಮ್ಮ ಸುತ್ತಮುತ್ತಲೂ ಹೆಚ್ಚು ಹೆಚ್ಚು ಗಿಡ-ಮರಗಳನ್ನು ಬೆಳೆಸಬೇಕಿದೆ. ಅರಣ್ಯ ಹಾಗೂ ವನ್ಯ ಸಂಪತ್ತನ್ನು ಉಳಿಸಬೇಕಿದೆ ಎಂದರು.
ಅಂಗಡಿಗಳಿಗೆ ಸಸಿ ವಿತರಣೆ: ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ವಿಸ್ಡಮ್ ಶಾಲೆ ಮಕ್ಕಳು ಜಾಗೃತಿ ಜಾಥಾ ನಡೆಸಿದ್ದಲ್ಲದೆ ದಾರಿ ಉದಕ್ಕೂ ನೂರಾರು ಅಂಗಡಿ-ಮುಂಗಟ್ಟುಗಳು, ಬ್ಯಾಂಕ್, ಪಟ್ಟಣ ಪೊಲೀಸ್ ಠಾಣೆಗೆ ಸಸಿ ವಿತರಣೆ ಮಾಡಿದರು.
ಪಟ್ಟಣ ಪೊಲೀಸ್ ಠಾಣೆಯ ಸಹಾಯಕ ಸಬ್‌ಇನ್ಸ್ ಪೆಕ್ಟರ್ ರಂಗರಾಜು, ವಿಸ್ಡಮ್ ಸ್ಕೂಲ್ ಕಾರ್ಯದರ್ಶಿ ಮಧು ಮಲ್ಲೇಶ್, ಮುಖ್ಯ ಶಿಕ್ಷಕಿ ಭ್ರಮಾರಂಭ, ಸಾರ್ವಜನಿಕರ ಸಹಕಾರ ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣಾ ಸಂಸ್ಥೆಯ ರಾಜ್ಯಾಧ್ಯಕ್ಷ (ಪಿಎಫ್‌ಡಬ್ಲ್ಯೂಸಿಕೆ) ಜಾನಪೀಟರ್, ಹೆಡ್ ಕಾನ್ಸ್ ಟೇಬಲ್ ಮಂಗಳಮ್ಮ ಹಾಗೂ ಶಿಕ್ಷಕರು, ಮಕ್ಕಳು ಇದ್ದರು.