

ಬೆಂಗಳೂರು:ಮೂರು ದಿನಗಳ ಹಿಂದೆಷ್ಟೇ ಅಬ್ಬರಿಸಿ ಕೊಂಚ ಬಿಡುವು ಕೊಟ್ಟಿದ್ದ ಮಳೆರಾಯ ಶುಕ್ರವಾರ ರಾತ್ರಿ ಹಾಗೂ ಶನಿವಾರ ರಾಜಧಾನಿಯಲ್ಲಿ ಧಾರಾಕಾರವಾಗಿ ಸುರಿದಿದೆ. ಇದರಿಂದಾಗಿ ಜನಜೀವನ ತುಸು ಅಸ್ತವ್ಯಸ್ತವಾಯಿತು.
ಮಳೆ ಅನಾಹುತದಿಂದ ಲಕ್ಷಾಂತರ ರೂಪಾಯಿ ನಷ್ಟ ಅನುಭವಿಸಿಕೊಂಡು ನೆಮ್ಮದಿ ಜೀವನ ನಡೆಸಲು ಸಾಧ್ಯವಾಗದೆ ಎದುಸಿರು ಬಿಡುತ್ತಿರುವ ತಗ್ಗು ಪ್ರದೇಶದ ಮನೆಗಳಲ್ಲಿ ವಾಸಿಸುತ್ತಿರುವವರು, ಅಪಾರ್ಟ್ಮೆಂಟ್ಗಳ ನಿವಾಸಿಗಳು ಆತಂಕದಲ್ಲೇ ಕಾಲ ಕಳೆಯುವಂತಾಗಿದೆ. ಕೆಂಗೇರಿ, ರಾಜರಾಜೇಶ್ವರಿನಗರ, ಜ್ಞಾನಭಾರತಿ ಕ್ಯಾಂಪಸ್, ಗೊಟ್ಟಿಗೆರೆ, ಅಂಜನಪುರ, ಬೇಗೂರು, ನಾಗರಬಾವಿ, ಮಾರುತಿ ಮಂದರಿ ಸೇರಿ ನಗರದ ಕೆಲ ಬಡಾವಣೆಗಳಲ್ಲಿ ಶುಕ್ರವಾರ ತಡರಾತ್ರಿ ಮಳೆ ಅಬ್ಬರ ಜೋರಾಗಿತ್ತು.
ಶನಿವಾರ ಬೆಳಗ್ಗೆಯಿಂದ ಮೋಡ ಮುಸುಕಿದ ವಾತಾವರಣ ನಿರ್ಮಾಣವಾಗಿತ್ತು. ಮಧ್ಯಾಹ್ನ 12.30ಕ್ಕೆ ಗುಡುಗು ಸಹಿತ ಅರ್ಧ ಗಂಟೆಗಾಲ ಜೋರಾಗಿ ಮಳೆಯಾಯಿತು.ಸಂಜೆ ವೇಳೆಯೂ ಎಚ್ಎಸ್ಆರ್ ಲೇಔಟ್, ಚಾಮರಾಜಪೇಟೆ, ಗುರುಡಾರ್ಚಾಪಾಳ್ಯ, ಕೆಂಗೇರಿ, ಶೆಟ್ಟಿಹಳ್ಳಿ, ಹೊಯ್ಸಳನಗರ, ಕೆ.ಆರ್.ಪುರ, ಬೊಮ್ಮನಹಳ್ಳಿ, ಹಗದೂರು, ಬಾಗಲಕುಂಟೆ, ಬಿಟಿಎಂ ಲೇಔಟ್, ವಿಶ್ವೇಶ್ವರಯ್ಯಪುರ, ಹೆರೋಹಳ್ಳಿ, ಅರಕೆರೆ, ರಾಜರಾಜೇಶ್ವರಿನಗರ, ವಿಜ್ಞಾನನಗರ, ಕೋಣನಕುಂಟೆ, ಬಸವನಪುರ, ಹೆಮ್ಮಿಗೇಪುರ, ಗೊಟ್ಟಿಗೆರೆ, ಸಿಂಗಸಂದ್ರ, ಬೆಳಂದೂರು,ಚನ್ನಸಂದ್ರ, ರಾಜಾಜಿನಗರ, ಸದಾಶಿವನಗರ, ಮೇಕ್ರಿ ವೃತ್ತ, ಟೌನ್ಹಾಲ್, ಕೆ.ಆರ್.ಮಾರುಕಟ್ಟೆ, ಮೆಜೆಸ್ಟಿಕ್, ಶಾಂತಿನಗರ ಡಬಲ್ ರಸ್ತೆ, ಪ್ಯಾಲೇಸ್ ರಸ್ತೆ ಸೇರಿ ನಗರದ ಬಹುತೇಕ ಬಡಾವಣೆಗಳಲ್ಲಿ ವರುಣಾರ್ಭಟ ಜೋರಾಗಿತ್ತು.
ಕೆಲ ಅಂಡರ್ಪಾಸ್, ಜಂಕ್ಷನ್ಗಳು ಜಲಾವೃತವಾದರೆ, ರಸ್ತೆಗಳು ಮೇಲೆ ಅಪಾರ ಪ್ರಮಾಣದಲ್ಲಿ ನೀರು ನಿಂತಿತ್ತು. ಹಲವು ಕಡೆಗಳಲ್ಲಿ ಸಿಗ್ನಲ್ ಇಲ್ಲದ ಕಾರಣ ವಾಹನಗಳು ಏಕಾಏಕಿ ನುಗ್ಗಿದ್ದರಿಂದ ವಾಹನ ದಟ್ಟಾಣೆ ಉಂಟಾಯಿತು. ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ಟ್ರಾಫಿಕ್ ಪೋಲಿಸರು ಮುಂದಾದರ. ಹಲವು ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆ ಸ್ಥಗಿತ ಹಿನ್ನೆಲೆಯಲ್ಲಿ ಬೆಳಕಿಲ್ಲದೆ ನಿವಾಸಿಗಳಿಗೆ ತೊಂದರೆಯಾಯಿತು. ಕೆಲವೆಡೆ ಮಳೆಯ ನೀರು ರಭಸದಿಂದ ಹರಿಯುವ ದೃಶ್ಯ ಅಲ್ಲೆಲ್ಲಿ ಕಂಡುಬಂತು.ಪ್ರಮುಖ ರಸ್ತೆಗಳಲ್ಲಿ ವಾಹನ ದಟ್ಟಣೆ ಉಂಟಾದರೆ, ಮೇಲ್ಸುತೇವೆಯಲ್ಲಿ ವಾಹನಗಳು ನಿಧಾನಗತಿಯಲ್ಲಿ ಸಾಗಿದವು.
ಎಲ್ಲೆಲ್ಲಿ ಎಷ್ಟು ಮಳೆ?
ಜಕ್ಕೂರು 42, ಹೊರಮಾವು 32, ವಿದ್ಯಾರಣ್ಯಪುರ 30, ಕೊಡಿಗೆಹಳ್ಳಿ 28, ವಿ.ನಾಗನೇಹಳ್ಳಿ 27, ವನ್ನರ್ಪೇಟೆ 26, ಚೌಂಡೇಶ್ವರಿ 25, ಬಾಣಸವಾಡಿ 24, ಪುಲಿಕೇಶಿನಗರ 21, ಕೋರಮಂಗಲ 21, ಮಾರತ್ತಹಳ್ಳಿ 18, ಬಸವೇಶ್ವರನಗರ 17, ಬಿಟಿಎಂ ಲೇಔಟ್ 16, ನಾಗಪುರ 16, ನಂದಿನಿಲೇಔಟ್ 16, ಬಾಗಲಕುಂಟೆ 16, ರಾಮಮೂರ್ತಿನಗರ 15, ವಿವಿ ಪುರ 13 ಮಿಮೀ ಮಳೆಯಾಗಿದೆ.
ಇನ್ನಷ್ಟು ಜೋರು: ನಗರದ ಹಲವೆಡೆ ಸುರಿಯುತ್ತಿರುವ ಮಳೆ ಮುಂದಿನ 4 ದಿನ ಮುಂದುವರಿಯಲಿದೆ. ಅ.21ರಂದು ಭಾರಿ ಮಳೆ ಬೀಳುವ ಸಾಧ್ಯತೆ ಇರುವುದರಿಂದ ಹವಾಮಾನ ಇಲಾಖೆ ಯೆಲ್ಲೋ ಅರ್ಲಟ್ ಕೊಟ್ಟಿದೆ. ಕೆಲ ಬಡಾವಣೆಗಳಲ್ಲಿ ಗುಡುಗು ಸಹಿತ ಜೋರಾಗಿ ಮಳೆಯಾದರೆ, ಇನ್ನೂ ಕೆಲ ಪ್ರದೇಶಗಳಲ್ಲಿ ಸಾಧಾರಣ ವರ್ಷಧಾರೆಯಾಗಲಿದೆ. ಅ.1ರಿಂದ ಅ.19ರವರೆಗೆ ಸಿಲಿಕಾನ್ ಸಿಟಿಯಲ್ಲಿ ವಾಡಿಕೆಗಿಂತ ಅಧಿಕ ಮಳೆ ಬಿದ್ದಿದೆ. ವಾಡಿಕೆಯಂತೆ 105 ಮಿಮೀ ಮಳೆಯಾಗುವ ಬದಲು 160 ಮಿಮೀ ಸುರಿದಿದ್ದು, ಶೇ.53ರಷ್ಟು ವಾಡಿಕೆಗಿಂತ ಹೆಚ್ಚು ಸುರಿದಿದೆ.
ತಗ್ಗು ಪ್ರದೇಶದ ನಿವಾಸಿಗಳೇ ಎಚ್ಚರ: ಮುಂದಿನ 4 ದಿನ ಮಳೆಯಾಗುವ ಮೂನ್ಸೂಚನೆ ನೀಡಿದ ಹಿನ್ನೆಲೆಯಲ್ಲಿ ಯಲಹಂಕದ ಕೇಂದ್ರಿಯ ವಿಹಾರ ಅಪಾರ್ಟ್ಮೆಂಟ್, ಸಾಯಿಲೇಔಟ್, ರಮಣಶ್ರೀ ಕ್ಯಾಲಿಫೋರ್ನಿಯಾ ಲೇಔಟ್, ಚೌಡಪ್ಪ ಲೇಔಟ್ ಸೇರಿ ಇತರೆ ಬಡಾವಣೆಗಳ ನಿವಾಸಿಗಳು ಎಚ್ಚರಿಕೆ ವಹಿಸಬೇಕಿದೆ ಎಂದು ಅಧಿಕಾರಿಗಳು ತಿಳಿಸಿದರು.