ರಾಜಧಾನಿಯಲ್ಲಿ 2ನೇ ದಿನವೂ ಜಿಟಿಜಿಟಿ ಮಳೆ: 24.1 ಡಿ.ಸೆ ಉಷ್ಣಾಂಶ ದಾಖಲು

Raghu_15_Rain_@_VS-3
Published on

ಬೆಂಗಳೂರು: ರಾಜಧಾನಿಯಲ್ಲಿ ಸತತ 2ನೇ ದಿನವೂ ಜಿಟಿಜಿಟಿ ಮಳೆಯಾಗಿದೆ. ಶೀತಗಾಳಿ ಬೀಸುತ್ತಿರುವುದು, ತೇವಾಂಶ ಭರಿತ ಮೋಡಗಳಿರುವುದು ಹಾಗೂ ನಿರಂತರ ಮಳೆಯಿಂದಾಗಿ ನಗರದಲ್ಲಿ ಥಂಡಿ ವಾತಾವರಣ ಕಾಣಿಸಿಕೊಂಡಿದೆ. ಇಡೀ ದಿನ ಮೋಡ ಮುಸುಕಿದ ವಾತಾವರಣ ಉಂಟಾದ ಪರಿಣಾಮ ಜನರಿಗೆ ಮಲೆನಾಡಿನ ವಾತಾವರಣ ಅನುಭವವಾಗಿದ್ದು, ಇದರಿಂದಾಗಿ ಬೆಚ್ಚಗಿನ ಉಡುಪುಗಳ ಮೊರೆಗೆ ಹೋಗುವಂತಾಯಿತು.

ಯಲಹಂಕ, ಪೂರ್ವ, ಪಶ್ಚಿಮ, ದಕ್ಷಿಣ, ರಾಜರಾಜೇಶ್ವರಿ ನಗರ ವಲಯ ಸೇರಿ ನಗರಾದ್ಯಂತ ಮಳೆಯಾಯಿತು. ಕೋರಮಂಗಲ, ಮಡಿವಾಳ, ವಿಲ್ಸನ್​ ಗಾರ್ಡನ್​, ಡೇರಿ ಸರ್ಕಲ್​, ಜಕ್ಕೂರು, ಕೆ.ಆರ್​. ಮಾರುಕಟ್ಟೆ, ಮೆಜೆಸ್ಟಿಕ್​, ದಯಾನಂದನಗರ, ಜಯನಗರ, ಜೆ.ಪಿ.ನಗರ, ಬಸವನಗುಡಿ, ಕತ್ತರಿಗುಪ್ಪೆ, ಇಟ್ಟಮಡು, ನಾಯಂಡಹಳ್ಳಿ, ಮೈಸೂರು ರಸ್ತೆ, ಕೆಂಗೇರಿ, ವಿಜಯನಗರ, ಮಲ್ಲೇಶ್ವರ, ಯಶವಂತಪುರ, ಪೀಣ್ಯ, ಜಾಲಹಳ್ಳಿ ಕ್ರಾಸ್​, ಹೆಬ್ಬಾಳ, ಯಲಹಂಕ ಸೇರಿ ನಗರದ ಹಲವು ಭಾಗಗಳಲ್ಲಿ ಸಣ್ಣ ಪ್ರಮಾಣದಲ್ಲಿ ಮಳೆ ಸುರಿಯಿತು. ಕೆಲವಡೆ ಮಾತ್ರ ಧಾರಾಕಾರವಾಗಿ ವರ್ಷಧಾರೆಯಾಗಿತ್ತು.

ವಿಧಾನಸೌಧ, ಹೆಬ್ಬಾಳ ರಸ್ತೆ,ಕೆ.ಆರ್​.ಮಾರುಕಟ್ಟೆ ಸೇರಿ ವಿವಿಧ ಭಾಗಗಳಲ್ಲಿ ವಾಹನ ದಟ್ಟಣೆ ಉಂಟಾಯಿತು. ಬಳ್ಳಾರಿ ರಸ್ತೆಯಲ್ಲಿ ಕಿಮೀ ಗಟ್ಟಲೆ ದಟ್ಟಣೆ ಉಂಟಾದ ಪರಿಣಾಮ ಸವಾರರು ಪರದಾಡಿದರು. ಕೆಲ ಭಾಗಗಳಲ್ಲಿ ವಿದ್ಯುತ್​ ಪೂರೈಕೆ ವ್ಯತ್ಯಯವಾಯಿತು.

ಚಳಿಗಾಲದ ಉಷ್ಣಾಂಶ ದಾಖಲು

ಮೋಡ ಕವಿದ ವಾತಾವರಣ, ಮಳೆಯಿಂದಾಗಿ ನಗರದಲ್ಲಿ ಗರಿಷ್ಠ ಮತ್ತು ಕನಿಷ್ಠ ತಾಪಮಾನದಲ್ಲಿ ಗಣನೀಯವಾಗಿ ಉಷ್ಣಾಂಶ ಇಳಿಕೆಯಾಗಿದೆ. ಎರಡು ದಿನಗಳಿಂದ ಚಳಿಗಾಲದಲ್ಲಿ ದಾಖಲಾಗುತ್ತಿದ್ದ ಉಷ್ಣಾಂಶ ವರದಿಯಾಗಿದೆ. ಸೋಮವಾರ ಗರಿಷ್ಠ ತಾಪಮಾನದಲ್ಲಿ 24.1 ಡಿ.ಸೆ ಉಷ್ಣಾಂಶ ದಾಖಲಾಗಿದೆ. ಮುಂದಿನ 48 ಗಂಟೆ ಮೋಡ ಕವಿದ ವಾತಾವರಣ ಕಾಣಿಸಿಕೊಳ್ಳಲಿದೆ. ಹಗುರದಿಂದ ಕೂಡಿದ ಸಾಧಾರಣ ಮಳೆಯಾಗಲಿದೆ. ಪ್ರತಿ ಗಂಟೆಗೆ 40 ಕಿ.ಮೀ.ವೇಗದಲ್ಲಿ ಗಾಳಿ ಬೀಸಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net