ಬಾರದ ಮಳೆಗೆ ಒಣಗುತ್ತಿರುವ ಬೆಳೆ

krushi
ಒಣಗಿರುವ ಹತ್ತಿ ಬೆಳೆ
Published on

ವಿಶೇಷ ಕನಕಗಿರಿ: ಮುಂಗಾರು ವೈಫಲ್ಯದ ನಡುವೆಯೂ ಆಗಾಗ ಸುರಿದ ಮಳೆಯಿಂದ ತಾಲೂಕಿನಾದ್ಯಂತ ಬಿತ್ತನೆಯಾಗಿದ್ದ ಬೆಳೆಗಳು ಹಲವು ದಿನಗಳಿಂದ ವರುಣನ ಕೃಪೆಯಿಲ್ಲದೇ ಒಣಗಲಾರಂಭಿಸಿವೆ.

ಕನಕಗಿರಿ ತಾಲೂಕು ಮೂರು ಹೋಬಳಿಗಳನ್ನು ಒಳಗೊಂಡಿದ್ದು, ಕನಕಗಿರಿ ಹೋಬಳಿಯ 6,748 ಹೆಕ್ಟರ್, ಹುಲಿಹೈದರ ಹೋಬಳಿಯಲ್ಲಿ 5,495, ನವಲಿ ಹೋಬಳಿಯಲ್ಲಿ 7,411 ಎಕರೆ ಪ್ರದೇಶದಲ್ಲಿ ಬಿತ್ತನೆಯಾಗಿರುವ ಖುಷ್ಕಿ ಜಮೀನು ಮಳೆಯಿಲ್ಲದೇ ಬಾಡತೊಡಗಿವೆ.

ಕೃಷಿ ಇಲಾಖೆಯ ಸರ್ವೇ ಪ್ರಕಾರ ಮುಂಗಾರಿನಲ್ಲಿ ಖುಷ್ಕಿ ಹಾಗೂ ನೀರಾವರಿ ಜಮೀನಿನ ಪೈಕಿ 29,301 ಹೆಕ್ಟೇರ್ ಪ್ರದೇಶದಲ್ಲಿ ಹತ್ತಿ, ಮೆಕ್ಕೆಜೋಳ, ಸಜ್ಜೆ, ತೊಗರಿ, ಹುರುಳಿ ಇತರ ಬೆಳೆ ಬೆಳೆಯಲಾಗಿದೆ.

ಬಾಡಿದ ಬೆಳೆಗಳೇ ಕಾಣಿಸುತ್ತಿವೆ

ಬಿತ್ತನೆಯಾಗಿ ಒಂದೂವರೆ ತಿಂಗಳಾಗಿದ್ದು, 20 ದಿನಗಳ ಹಿಂದೆ ಸುರಿದ ಜಿಟಿ ಜಿಟಿ ಮಳೆ ಹೊರೆತು ಪಡಿಸಿ ಇದುವರೆಗೂ ಭೂಮಿ ತಂಪಾಗುವಷ್ಟು ಮಳೆಯಾಗಿಲ್ಲ. ಇದರಿಂದ ಈ ವೇಳೆಯಲ್ಲಿ ಹಸಿರಿನಿಂದ ಕಂಗೊಳಿಸಬೇಕಿದ್ದ ಭೂಮಿಯಲ್ಲಿ ಬಾಡಿದ ಬೆಳೆಗಳೇ ಕಾಣಿಸುತ್ತಿವೆ.

ಇದರಿಂದ ಸರ್ಕಾರ ಈ ವರ್ಷ ಬರಗಾಲವೆಂದು ಘೋಷಣೆ ಮಾಡಿ ರೈತರಿಗೆ ಪರಿಹಾರದ ಜತೆಗೆ ಉದ್ಯೋಗ, ಜಾನುವಾರುಗಳಿಗೆ ಗೋಶಾಲೆ, ಮೇವು ಬ್ಯಾಂಕ್ ಆರಂಭಿಸಬೇಕು ಎಂಬ ಒತ್ತಾಯಗಳು ರೈತರಿಂದ ಕೇಳಿಬರುತ್ತಿವೆ.

ಹುಸಿಯಾದ ರೈತರ ಭರವಸೆ:

ಮುಂಬರುವ ದಿನಗಳಲ್ಲಿ ಮಳೆಯಾಗಬಹುದೆಂಬ ಭರವಸೆಯಲ್ಲಿ ಒಂದುವರೆ ತಿಂಗಳ ಹಿಂದೆ ರೈತರು ಬಿತ್ತನೆ ಮಾಡಿದ್ದರು. ಆದರೆ, ಅನ್ನದಾತನ ನಂಬಿಕೆ ಹುಸಿಯಾಗಿವೆ. ಕಳೆದ ಹದಿನೈದು ದಿನಗಳಿಂದ ರೈತ ಮುಗಿಲಿನ ಕಡೆಗೆ ಮುಖ ಮಾಡುತ್ತಾ ಕುಳಿತಿದ್ದಾನೆ. ಮಳೆರಾಯನ ಕೃಪೆ ಮಾತ್ರ ಆಗಿಲ್ಲ. ಈಗಾಗಲೇ ಕೆಲ ರೈತರು ಬೆಳೆಯನ್ನು ನಾಶ ಮಾಡಿದ ಉದಾಹರಣೆಗಳು ಸಾಕಷ್ಟಿವೆ.

ಈಗಾಗಲೇ ಪಂಪ್‌ಸೆಟ್ ನೀರಿಗೆ ಬೆಳೆಯಲಾಗಿದ್ದ ಹತ್ತಿ ಬೆಳೆಯು ತೇವಾಂಶ ಕೊರತೆಯಿಂದ ಹಾಳಗಿತ್ತು. ಇದೀಗ ಮಳೆ ಕೊರತೆಯಿಂದ ಖುಷ್ಕಿ ಜಮೀನಿನಲ್ಲಿನ ಬೆಳೆಯೂ ಒಣಗಲಾರಂಭಿಸಿದ್ದು, ರೈತರಿಗೆ ಜಾನುವಾರುಗಳ ಚಿಂತೆ ಕಾಡತೊಡಗಿದೆ.

ಅಂತರ್ಜಲ ಕೊರತೆ : ಸಂಪೂರ್ಣವಾಗಿ ಮಳೆಯಾಗದ ಹಿನ್ನೆಲೆಯಲ್ಲಿ ಹಳ್ಳ, ಕೊಳ್ಳಗಳು ಹರಿದು, ಜಲಮೂಲಗಳು ತುಂಬಿಕೊಂಡಿದ್ದರೆ, ಬೋರ್‌ವೆಲ್‌ಗಳಲ್ಲಿ ಅಂತರ್ಜಲ ಮಟ್ಟ ಹೆಚ್ಚಾಗಬೇಕಿತ್ತು. ಆದರೆ, ಮಳೆಯ ಕೊರತೆಯಿಂದ ಬೋರ್‌ವೆಲ್‌ಗಳು ಬತ್ತುತ್ತಿರುವುದು ರೈತರಿಗೆ ಮತ್ತಷ್ಟು ಆತಂಕವನ್ನು ತಂದಿಟ್ಟಿದೆ. ಮಳೆಗಾಲದಲ್ಲೇ ಪಂಪ್‌ಸೆಟ್‌ಗಳಲ್ಲಿ ನೀರಿನ ಅಭಾವವಾದರೆ, ಬೇಸಿಗೆಯಲ್ಲಿನ ಪರಸ್ಥಿತಿಯ ಬಗ್ಗೆ ಈಗಲೇ ಆತಂಕಪಡುವಂತಾಗಿದೆ.

ಈಗಾಗಲೇ ಹತ್ತಿ ಬೆಳೆ ಹಾಳಾಗಿದ್ದು, ಇದೀಗ ಮಳೆಯಿಲ್ಲದೇ ಇತರೇ ಬೆಳೆಗಳು ಒಣಗಲಾರಂಭಿಸಿವೆ. ರೈತ ಸಂಘಟನೆಗಳಿಂದ ಬರಗಾಲ ಪೀಡಿತ ತಾಲೂಕು ಎಂದು ಘೋಷಣೆ ಮಾಡಿ, ಪರಿಹಾರದ ಜತೆಗೆ ಜಾನುವಾರುಗಳಿಗೆ ಮೇವು ಒದಗಿಸುವ ಕೆಲಸ ಮಾಡಬೇಕು ಎಂಬ ಒತ್ತಾಯವಿದೆ. ಮಂಗಳವಾರದಂದು ಸಭೆ ಮಾಡಲಾಗಿದೆ. ಸರ್ಕಾರ ಈ ಬಗ್ಗೆ ಕ್ರಮ ಕೈಗೊಳ್ಳಬೇಕು.

ಸಂತೋಷ ಪಟ್ಟದಕಲ್
ಸಹಾಯಕ ನಿರ್ದೇಶಕರು, ಕೃಷಿ ಇಲಾಖೆ. ಗಂಗಾವತಿ

ಅಡವಿಬಾವಿ ಸೇರಿ ಸುತ್ತಲಿನ ಪ್ರದೇಶಗಳಲ್ಲಿ ಬೆಳೆದ ಮೆಕ್ಕೆಜೋಳ ಸಹಿತ ಇತರೇ ಬೆಳೆಗಳು ಒಣಗುತ್ತಿವೆ. ಸರ್ಕಾರ ರೈತರಿಗೆ ವಿಶೇಷ ಪ್ಯಾಕೇಜ್ ನೀಡಲು ಮುಂದಾಗಬೇಕು.

ಸೋಮನಾಥ ಅಡವಿಬಾವಿ ರೈತ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net