

ಹೊಳಲ್ಕೆರೆ: ಮುಂಗಾರು ಮಳೆ ವಿಳಂಬವಾಗಿದ್ದು, ಮಳೆ ಸುರಿದ ನಂತರವೇ ಸಾಕಷ್ಟು ತೇವಾಂಶ ಖಚಿತಪಡಿಸಿಕೊಂಡು ಬಿತ್ತನೆ ಕಾರ್ಯ ಕೈಗೊಳ್ಳಬೇಕು ಎಂದು ಸಹಾಯಕ ಕೃಷಿ ನಿರ್ದೇಶಕ ಕೆ.ಟಿ.ಮಂಜುನಾಥ ಸಲಹೆ ನೀಡಿದ್ದಾರೆ.
ಈ ಸಂಬಂಧ ಪ್ರಕಟಣೆ ನೀಡಿರುವ ಅವರು, ಕರ್ನಾಟಕ ವಿಪತ್ತು ನಿರ್ವಹಣಾ ಸಂಸ್ಥೆ ಬೆಂಗಳೂರು ವೆದರ್ ಪೊರ್ ಕಾಸ್ಟ್ ಮಾಹಿತಿಯಂತೆ ಈಗಾಗಲೇ ಅರಬ್ಬಿ ಸಮುದ್ರದಲ್ಲಿ ಬಿಪರ್ ಜಾಯ್ ಸೈಕ್ಲೋನ್ ಎಫೆಕ್ಟ್‌ನಿಂದ ಮಳೆ ವಿಳಂಬವಾಗುವ ಸಾಧ್ಯತೆ ಇದೆ.
ಜೂ.21 ರವರೆಗೆ ಅತಿ ಕಡಿಮೆ ಮಳೆಯಾಗಲಿದೆ. ಹಾಗಾಗಿ ಬಿತ್ತನೆಗೆ ಅಗತ್ಯವಿರುವ ಮಳೆ ಬಿದ್ದ ನಂತರವೇ ಬಿತ್ತನೆ ಮಾಡಬೇಕು ಎಂದು ಹೇಳಿದ್ದಾರೆ.
ನೀರಾವರಿ ಪ್ರದೇಶ ಹೊಂದಿರುವ ರೈತರು ತುಂತುರು ನೀರಾವರಿ ಮೂಲಕ ಸಾಕಷ್ಟು ತೇವಾಂಶ ಖಚಿತ ಪಡಿಸಿಕೊಂಡು ಬಿತ್ತನೆ ಕಾರ್ಯ ಮಾಡುವುದು ಸೂಕ್ತ ಎಂದು ತಿಳಿಸಿದ್ದಾರೆ.
ಈಗಾಗಲೇ ತಾಲೂಕಿನ ಕಸಬಾ, ಬಿ.ದುರ್ಗ, ತಾಳ್ಯ ಹಾಗೂ ರಾಮಗಿರಿ ರೈತ ಸಂಪರ್ಕ ಕೇಂದ್ರಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ಬಿತ್ತನೆ ಬಿತ್ತನೆ ಬೀಜ ದಾಸ್ತಾನು ಇದ್ದು, ರೈತರು ಕೃಷಿ ಇಲಾಖೆಯಲ್ಲಿ ಖರೀದಿಸಬೇಕು.
ಅಂಗಡಿಗಳಿಂದ ಖರೀದಿಸಿದರೆ ತಪ್ಪದೆ ರಸೀದಿ ಪಡೆಯಬೇಕು, ರಸಗೊಬ್ಬರ ಖರೀದಿ ಮಾಡುವಾಗ ಚೀಲದ ಮೇಲೆ ನಮೂದಿಸಿದಂತೆ ಎಂಆರ್‌ಪಿ ಬೆಲೆಗೆ ನೀಡಬೇಕು.
ರಸಗೊಬ್ಬರ ಮಾರಾಟ ಮಳಿಗೆಯಲ್ಲಿ ಹೆಚ್ಚಿನ ದರಕ್ಕೆ ಮಾರುವುದು ಕಂಡು ಬಂದಲ್ಲಿ ತಕ್ಷಣ ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ಮಾಹಿತಿ ನೀಡಿದರೆ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ಕೃಷಿ ಪರಿಕರ ಮಾರಟಗಾರರು ರಸಗೊಬ್ಬರಗಳ ಕೃತಕ ಅಭಾವ ಸೃಷ್ಟಿಸಿ ಹೆಚ್ಚಿನ ದರಕ್ಕೆ ಮಾರಾಟ ಮಾಡುವುದು ಕಂಡು ಬಂದಲ್ಲ್ಲಿ ಪರವಾನಗಿ ರದ್ದು ಪಡಿಸಲಾಗುವುದು ಎಂದು ಎಚ್ಚರಿಸಿದ್ದಾರೆ.