

ಚಳ್ಳಕೆರೆ: ತಾಲೂಕಿನ ತಳಕು ಹೋಬಳಿಯ ಕೆಡಿ ಕೋಟೆ ಗ್ರಾಮದ ರೈತ ಒ.ಶಿವಣ್ಣ ತನ್ನ ಮೂರು ಎಕರೆ ಜಮೀನಿನಲ್ಲಿ ಬೆಳೆದಿರುವ ಕರಬೂಜ ಹಣ್ಣು ಮಾರಾಟವಾಗದ ಕಾರಣ, ಫಸಲು ಬಂದಿದ್ದರೂ ನಷ್ಟದ ಪರಿಸ್ಥಿತಿಯಲ್ಲಿ ಸಿಲುಕಿದ್ದಾರೆ.
ಎರಡು ತಿಂಗಳ ಹಿಂದೆ ಕೋಹಿನೂರು ಕರಬೂಜ ಬೀಜವನ್ನು ಸುಮಾರು 1 ಲಕ್ಷ ರೂ. ಗೆ 1.5 ಕೆಜಿ ಖರೀದಿ ಮಾಡಿ ನಾಟಿ ಮಾಡಲಾಗಿದೆ. 60 ದಿನಗಳಿಗೆ ಬೆಳೆ ಉತ್ತಮವಾಗಿ ಬಂದಿದೆ. ಆದರೆ, ಈ ಕರಬೂಜ ಹಣ್ಣನ್ನು ಖರೀದಿ ಮಾಡಿಕೊಂಡು ಮಾರ್ಕೆಟಿಂಗ್ ಮಾಡಿಕೊಳ್ಳುವ ಬಾಂಬೆ, ಕೊಲ್ಕತ್ತ ಹೊರ ರಾಜ್ಯಗಳಲ್ಲಿ ವಿಪರೀತ ಮಳೆಯ ಪರಿಣಾಮ ಖರೀದಿದಾರರು ಈ ಭಾಗಕ್ಕೆ ಬರಲಾಗಿಲ್ಲ. ಇದರಿಂದ 2 ಲಕ್ಷ ರೂ. ವೆಚ್ಚ ಮಾಡಿಕೊಂಡು ಬೆಳೆಯಲಾಗಿದ್ದ ಕರಬೂಜ ಫಸಲು ಹೊಲದಲ್ಲೇ ಹಾಳಾಗಿದೆ.
ಈ ವೇಳೆ ಮಾತನಾಡಿದ ರೈತ ಶಿವಣ್ಣ, ಬೀಜ ಖರೀದಿ ಸೇರಿ ಕೀಟನಾಶಕ ಔಷಧ, ಪಾಲಿಥಿನ್ ಪೇಪರ್, ಡ್ರಿಪ್ ಮತ್ತು ಕೂಲಿ ವೆಚ್ಚಕ್ಕೆಲ್ಲ ಹಣ ಕಳೆದುಕೊಳ್ಳಲಾಗಿದೆ. 3 ಲಕ್ಷ ರೂ. ಲಾಭದ ನಿರೀಕ್ಷೆಯಲ್ಲಿದ್ದ ಬೆಳೆ ಕಣ್ಣೆದುರಿಗೆ ಹೊಲದಲ್ಲೇ ಹಾಳಾಗಿ ಬಿದ್ದಿದೆ. ಇದರಿಂದ ಇಡೀ ಕುಟುಂಬಕ್ಕೆ ಬೆಳೆ ನಷ್ಟದ ನೋವಾಗಿದೆ. ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಬೆಳೆ ನಷ್ಟ ಪರಿಶೀಲನೆ ಮಾಡಿ ನೆರವು ನೀಡಬೇಕೆಂದು ಅಳಲು ತೋಡಿಕೊಂಡಿದ್ದಾರೆ.