ಹನೂರಿನ ವಿವಿಧೆಡೆ ಗಾಳಿ ಸಹಿತ ಮಳೆ

02 HANUR 3 A
ಕೌದಳ್ಳಿ ಗ್ರಾಮದಲ್ಲಿ ಗಾಳಿಮಳೆಗೆ ಮರವೊಂದು ಮುಖ್ಯರಸ್ತೆಗೆ ಅಡ್ಡಲಾಗಿ ಉರುಳಿ ಬಿದ್ದಿರುವುದು.
Published on

ಹನೂರು: ತಾಲೂಕಿನಲ್ಲಿ ಗುರುವಾರ ಸುರಿದ ಮಳೆಗಾಳಿಗೆ ಕೌದಳ್ಳಿ ಗ್ರಾಮದಲ್ಲಿ ಮರ ಹಾಗೂ ವಿದ್ಯುತ್ ಕಂಬಗಳು ಮುಖ್ಯ ರಸ್ತೆಗೆ ಉರುಳಿ ಬಿದ್ದಿದ್ದರೆ, ಹನೂರು ಪಟ್ಟಣದ ಎ.ಜೆ. ಕಾಲನಿಯಲ್ಲಿ ವಿದ್ಯುತ್ ಕಂಬ ಹಾಗೂ ತೆಂಗಿನಮರ ನೆಲಕ್ಕುರುಳಿದೆ.

ತಾಲೂಕಿನಾದ್ಯಂತ ಸಂಜೆ 4ರ ಹೊತ್ತಿಗೆ ಮೋಡಕವಿದ ವಾತಾವರಣ ನಿರ್ಮಾಣವಾಗಿತ್ತು. ಬಳಿಕ ಕೌದಳ್ಳಿ, ಕುರಟ್ಟಿ ಹೊಸೂರು ಹಾಗೂ ಈ ಭಾಗದ ಇನ್ನಿತರ ಕಡೆಗಳಲ್ಲಿ ಜೋರು ಗಾಳಿ ಸಹಿತ ಸುಮಾರು ಅರ್ಧ ಗಂಟೆ ಕಾಲ ಸಾಧಾರಣ ಮಳೆಯಾಯಿತು. ಪರಿಣಾಮ ಕೌದಳ್ಳಿ ಗ್ರಾಮದಲ್ಲಿ ಮಲೆಮಹದೇಶ್ವರ ಬೆಟ್ಟ ರಸ್ತೆಗೆ ಮರವೊಂದು ಅಡ್ಡಲಾಗಿ ಬಿದ್ದಿತು. ಇದರಿಂದ 5 ವಿದ್ಯುತ್ ಕಂಬಗಳು ಸಹ ರಸ್ತೆಗೆ ಉರುಳಿದವು. ಇದರಿಂದ ಸುಮಾರು ಅರ್ಧ ಗಂಟೆ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಬಳಿಕ ಅರಣ್ಯ ಇಲಾಖೆ ಹಾಗೂ ಸೆಸ್ಕ್ ಸಿಬ್ಬಂದಿ ಮರ ಹಾಗೂ ವಿದ್ಯುತ್ ಕಂಬವನ್ನು ತೆರವುಗೊಳಿಸುವುದರ ಮೂಲಕ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಇತ್ತ ಹನೂರು ಪಟ್ಟಣದ ಎ.ಜೆ. ಕಾಲನಿಯಲ್ಲಿ ಜೋರು ಗಾಳಿಗೆ ತೆಂಗಿನ ಮರದ ಮೇಲ್ಭಾಗ ತುಂಡಾಗಿ ವಿದ್ಯುತ್ ತಂತಿಯ ಮೇಲೆ ಬಿದ್ದ ಪರಿಣಾಮ ವಿದ್ಯುತ್ ಕಂಬ ತುಂಡಾಗಿ ನೆಲಕ್ಕೆ ಬಿದ್ದಿತು. ಅದೃಷ್ಟವಶಾತ್ ಯಾವುದೇ ಅನಾಹುತವಾಗಿಲ್ಲ. ಆದರೆ ಕೆಲ ಮನೆಗಳಿಗೆ ಹಾನಿಯಾಗಿದೆ. ಸುದ್ದಿ ತಿಳಿದು ಸೆಸ್ಕ್ ಸಿಬ್ಬಂದಿ ಆಗಮಿಸಿ ವಿದ್ಯುತ್ ಕಂಬವನ್ನು ತೆರವುಗೊಳಿಸಿದರು. ಇನ್ನುಳಿದಂತೆ ತಾಲೂಕಿನ ಕೆಲವು ಗ್ರಾಮಗಳಲ್ಲಿ ಆಗಾಗ್ಗೆ ಕೆಲಕಾಲ ತುಂತುರು ಹನಿಗಳಿಂದ ಕೂಡಿದ ಮಳೆಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net