ರಾಜ್ಯದಲ್ಲಿ ಇನ್ನೂ 4 ದಿನ ಗಾಳಿ ಸಹಿತ ಮಳೆ: ಹವಾಮಾನ ಇಲಾಖೆ ಮಾಹಿತಿ

YLP RAIN
Published on

ಬೆಂಗಳೂರು:ಬಂಗಾಳಕೊಲ್ಲಿಯ ಆಗ್ನೇಯ ದಿಕ್ಕಿನಲ್ಲಿ ತೇವಾಂಶ ಭರಿತ ಮೋಡಗಳಿರುವ ಕಾರಣ ರಾಜ್ಯದ ಹಲವೆಡೆ ಸುರಿಯುತ್ತಿರುವ ಬೇಸಿಗೆ ಮಳೆ, ಮುಂದಿನ 4 ದಿನ ಮುಂದುವರಿಯುವ ಸಾಧ್ಯತೆ ಇದೆ ಎಂದು ರಾಜ್ಯ ಹವಾಮಾನ ಇಲಾಖೆ ಮೂನ್ಸೂಚನೆ ಕೊಟ್ಟಿದೆ.

ಗುರುವಾರ ಮುಂಜಾನೆಯಿಂದಲೇ ಬೆಂಗಳೂರು ನಗರ ಸೇರಿ ರಾಜ್ಯದ ಕೆಲ ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣ ಇತ್ತು. ಕೆಲ ಭಾಗಗಳಲ್ಲಿ ಮಳೆಗಾಲದ ವಾತಾವರಣ ಕಾಣಿಸಿಕೊಂಡಿದ್ದು, ಮಧ್ಯಾಹ್ನ ಅರ್ಧ ಗಂಟೆ ಕಾಲ ಸುರಿದ ಮಳೆಗೆ ಕೆಲ ಅವಾಂತರ ಸೃಷ್ಟಿಯಾಯಿತು. ಕಟಾವು ಬಂದಿದ್ದ ಭತ್ತ ಸೇರಿ ಇತರೆ ಬೆಳೆಗಳಿಗೂ ಹಾನಿಯಾಯಿತು.

ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡದಲ್ಲಿ ಏ.4ರಿಂದ ಏ.6ರವರೆಗೆ ಹಾಗೂ ಚಿಕ್ಕಮಗಳೂರು, ಶಿವಮೊಗ್ಗ, ಹಾಸನ, ಕೊಡಗು, ಬೆಂಗಳೂರು ನಗರ, ಬೆಂ.ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ತುಮಕೂರು, ಚಾಮರಾಜನಗರ, ಚಿತ್ರದುರ್ಗ, ದಾವಣಗೆರೆ, ಬಳ್ಳಾರಿ ಮತ್ತು ವಿಜಯನಗರದಲ್ಲಿ ಮುಂದಿನ 4 ದಿನ ಗುಡುಗು, ರಭಸದ ಗಾಳಿ ಸಹಿತ ಆಲಿಕಲ್ಲು ವರ್ಷಧಾರೆಯಾಗಲಿದೆ.

ಬಾಗಲಕೋಟೆ, ಬೆಳಗಾವಿ, ಬೀದರ್​, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ ಮತ್ತು ಯಾದಗಿರಿಯಲ್ಲಿ ಮುಂದಿನ 48 ಗಂಟೆ ಕಾಲ ಸಾಧಾರಣ ಪ್ರಮಾಣದಲ್ಲಿ ಮಳೆಯಾಗಲಿದೆ. ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮಳೆಯ ಪ್ರತಿ ಗಂಟೆಗೆ 30-40 ಕಿ.ಮೀ.ವೇಗದಲ್ಲಿ ರಭಸವಾಗಿ ಗಾಳಿ ಬೀಸಲಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಎಚ್ಚರಿಕೆಯಿಂದ ಇರುವಂತೆ ಇಲಾಖೆ ಸಲಹೆ ಕೊಟ್ಟಿದೆ.

ತಾಪಮಾನ ಕುಸಿತ: ಮಳೆ ಸುರಿಯುತ್ತಿರುವ ಪರಿಣಾಮ ರಾಜ್ಯದಲ್ಲಿ ತಾಪಮಾನ ಕುಸಿತವಾಗಿದೆ. ಕರಾವಳಿ ವ್ಯಾಪ್ತಿಯ ಪ್ರದೇಶಗಳಲ್ಲಿ ಗರಿಷ್ಠ ತಾಪಮಾನದಲ್ಲಿ 33-35 ಡಿ.ಸೆ., ಉತ್ತರ ಕರ್ನಾಟಕ ಭಾಗದಲ್ಲಿ 33-38 ಡಿ.ಸೆ. ಹಾಗೂ ದಕ್ಷಿಣ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ 32-35 ಡಿ.ಸೆ. ಉಷ್ಣಾಂಶ ದಾಖಲಾಗಿದೆ. ಕಳೆದ 24 ಗಂಟೆಯಲ್ಲಿ ಚಿಕ್ಕಮಗಳೂರು, ಕೊಡಗು, ಹಾಸನ, ಬೀದರ್​, ಬಾಗಲಕೋಟೆ ಸೇರಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನದಲ್ಲಿ 6-7 ಡಿ.ಸೆ.ಉಷ್ಣಾಂಶ ಇಳಿಮುಖವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net