

ಜಗಳೂರು: ಗುರುವಾರ ರಾತ್ರಿ ಸುರಿದ ಭಾರಿ ಗಾಳಿ, ಮಳೆಗೆ ತಾಲೂಕಿನಲ್ಲಿ ಒಂದು ವಿದ್ಯುತ್ ಪರಿವರ್ತಕ, 14ಕ್ಕೂ ಹೆಚ್ಚು ಕಂಬಗಳು ನೆಲಕ್ಕುರುಳಿವೆ.
ಕಳೆದ ಒಂದು ತಿಂಗಳಿಂದ ಬಿಸಿಲಿನ ಧಗೆಗೆ ಜನರು ಹೈರಾಣಾಗಿದ್ದರು. ಆದರೆ, ಗುರುವಾರ ಸಂಜೆ ಕೆಲವು ಕಡೆ ಉತ್ತಮ ಮಳೆಯಿಂದಾಗಿ ಭೂಮಿ ತಂಪಾಗುತ್ತಿದ್ದು, ರೈತರಲ್ಲಿ ಹರ್ಷ ತಂದಿದೆ.
ಇನ್ನೊಂದೆಡೆ ವಿದ್ಯುತ್ ಕಂಬಗಳು ಮುರಿದು ನೆಲಕ್ಕೆ ಬಿದ್ದಿದ್ದು, ಕೆಲವು ಗ್ರಾಮಗಳಲ್ಲಿ ವಿದ್ಯುತ್ ಸಂಪರ್ಕವಿಲ್ಲದೆ ಜನರು ಕತ್ತಲೆಯಲ್ಲಿ ಕಾಲಕಳೆಯುವಂತಾಗಿದೆ. ಶುಕ್ರವಾರ ಕುಡಿಯುವ ನೀರಿನ ಸಮಸ್ಯೆಯೂ ಉಂಟಾಯಿತು.
ಕೊಟ್ಟೂರು ರಸ್ತೆಯಲ್ಲಿ 1 ಟಿಸಿ, 10 ವಿದ್ಯುತ್ ಕಂಬಗಳು, ರಂಗಾಪುರ ರಸ್ತೆಯಲ್ಲಿ 4 ವಿದ್ಯುತ್ ಕಂಬಗಳು ಧರೆಗುರುಳಿವೆ ಎಂದು ಬೆಸ್ಕಾಂ ವಿಭಾಗಿಯ ಎಇ ಅಭಿಷೇಕ್ ಮಾಹಿತಿ ನೀಡಿದ್ದಾರೆ. ಅಲ್ಲಲ್ಲಿ ಕೆಲ ಅಡಕೆ, ಬಾಳೆ ಮರ ನೆಲಕ್ಕುರುಳಿದ್ದು ಬಿಟ್ಟರೆ ಮಳೆಯಿಂದ ಯಾವುದೇ ಪ್ರಾಣ ಹಾನಿಯಾಗಿಲ್ಲ ಎಂದು ಕಂದಾಯ ಅಧಿಕಾರಿ ಧನಂಜಯ ತಿಳಿಸಿದರು.