ಮನೆಗಳಿಗೆ ಮಳೆ ನೀರು ನುಗ್ಗಿ ಅವಾಂತರ

5 mlv2
Published on

ಮಳವಳ್ಳಿ: ತಾಲೂಕಿನ ಬುಗತಹಳ್ಳಿ ಗ್ರಾಮದಲ್ಲಿ ಶುಕ್ರವಾರ ರಾತ್ರಿ ಸುರಿದ ಮಳೆಗೆ ಮನೆಗಳಿಗೆ ನೀರು ನುಗ್ಗಿದ ಪರಿಣಾಮ ಮೂರು ಕುಟುಂಬದ ಸದಸ್ಯರೆಲ್ಲ ರಾತ್ರಿಪೂರ್ತಿ ನಿದ್ರೆ ಇಲ್ಲದೆ ಮನೆಯಿಂದ ಹೊರಗುಳಿಯಬೇಕಾಯಿತು.


ಗ್ರಾಮದ ವೆಂಕಟೇಶ್, ಶ್ರೀನಿವಾಸ್, ರಂಗಸ್ವಾಮಿ ಕುಟುಂಬದ ಸದಸ್ಯರು ವರುಣನ ಅಬ್ಬರಕ್ಕೆ ಸಂಕಷ್ಟ ಎದುರಿಸಿದವರು.
ಕಳೆದ ರಾತ್ರಿಯಿಡಿ ಮಳೆಯ ಆರ್ಭಟ ಜೋರಾಗಿದ್ದು, ಹಳ್ಳ-ಕೊಳ್ಳಗಳು ತುಂಬಿ ಹರಿದಿವೆ. ಬುಗತಹಳ್ಳಿ ಗ್ರಾಮದ ಒಂದೇ ಮನೆಯಲ್ಲಿ ಮೂರು ಕುಟುಂಬಗಳು ವಾಸವಿದ್ದು, ಮನೆಯ ಪಕ್ಕದ ನಿವೇಶನದ ಮಾಲೀಕ ಇತ್ತೀಚೆಗೆ ಮಣ್ಣು ಭರ್ತಿ ಹಾಕಿಸಿದ್ದರ ಪರಿಣಾಮ ಮನೆಯಿದ್ದ ಜಾಗ ತಗ್ಗು ಪ್ರದೇಶವಾಗಿದ್ದ ಹಿನ್ನೆಲೆಯಲ್ಲಿ ಮಳೆ ನೀರು ಮುಂದೆ ಸಾಗದೆ ಅವಾಂತರಕ್ಕೆ ಕಾರಣವಾಗಿದೆ.


ಸುಮಾರು ಎರಡು ಅಡಿಯಷ್ಟು ಮಳೆನೀರು ನಿಂತಿದ್ದರಿಂದ ಮಕ್ಕಳು, ವಯೋವೃದ್ಧರೂ ಸೇರಿ 15 ಜನರಿದ್ದ ಮೂರು ಕುಟುಂಬಗಳ ಸದಸ್ಯರು ರಾತ್ರಿಯಿಡೀ ಭಯದ ವಾತಾವರಣದಲ್ಲಿ ಕಾಲ ದೂಡುವಂತಾಗಿದೆ. ಇದರ ಜತೆಗೆ ಮನೆಯೊಳಗೆ ಶೇಖರಿಸಿದ್ದ ರಾಗಿ ಹಾಗೂ ಇತರ ಸಾಮಗ್ರಿಗಳು ಮಳೆ ನೀರಿಗೆ ತೋಯ್ದು ಹೋಗಿವೆ.


ಪಿಡಿಒ ವಿರುದ್ಧ ಆಕ್ರೋಶ: ಮಳೆ ನೀರು ಸರಗವಾಗಿ ಸಾಗಲು ಕ್ರಮ ವಹಿಸುವಂತೆ ನೆಲಮಾಕನಹಳ್ಳಿ ಗ್ರಾಮ ಪಂಚಾಯಿತಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಕ್ರಮ ವಹಿಸದೇ ನಿರ್ಲಕ್ಷೃ ವಹಿಸಿದ್ದರಿಂದ ಈ ಅವಾಂತರ ಎದುರಾಗಿದೆ ಎಂದು ಸಂತ್ರಸ್ಥ ಕುಟುಂಬದವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಿಂಗಳ ಹಿಂದೆಯೇ ಗ್ರಾಪಂಗೆ ಸಮಸ್ಯೆ ಬಗೆಹರಿಸುವಂತೆ ಮನವಿ ಸಲ್ಲಿಸಲಾಗಿತ್ತು. ಆದರೇ ಸ್ಥಳಕ್ಕೆ ಆಗಮಿಸಿದ್ದ ಪಿಡಿಒ ಖಾನ್ ಅಹಮದ್ ಅವರು ಪಕ್ಕದ ನಿವೇಶನದವರು ಮಣ್ಣು ಭರ್ತಿ ಹಾಕಿರುವುದರಿಂದ ಗ್ರಾಪಂನಿಂದ ಯಾವುದೇ ಕ್ರಮ ವಹಿಸಲಾಗದು ಎಂದು ಬೇಜವಾಬ್ದಾರಿ ಉತ್ತರ ನೀಡಿ ಹೋಗಿದ್ದರು. ಈ ಬಗ್ಗೆ ತಾಲೂಕು ಪಂಚಾಯಿತಿ ಇಒ ಹಾಗೂ ತಹಸೀಲ್ದಾರ್ ಕಚೇರಿಗೂ ಮನವಿ ಸಲ್ಲಿಸಲಾಗಿತ್ತು. ಆದರೆ ಸಂಬಂಧಪಟ್ಟವರು ಸಮಸ್ಯೆ ಪರಿಹಾರಕ್ಕೆ ಯಾವುದೇ ಕ್ರಮ ತೆಗೆದುಕೊಳ್ಳದ್ದರಿಂದ ಇಂದು ನಮ್ಮ ಕುಟುಂಬ ಬೀದಿಗೆ ಬರುವಂತಾಗಿದೆ ಎಂದು ಸಂತ್ರಸ್ಥರು ಆರೋಪಿಸಿದ್ದಾರೆ. ಇಷ್ಟೆಲ್ಲಾ ಅವಾಂತರವಾಗಿ ಇಡೀ ಕುಟುಂಬವೇ ಸಂಕಷ್ಟ ಎದುರಿಸುತ್ತಿದ್ದರೂ ತಾಲೂಕು ಆಡಳಿತದ ಯಾರೊಬ್ಬ ಅಧಿಕಾರಿಯೂ ಸ್ಥಳಕ್ಕೆ ಬಂದು ಸಮಸ್ಯೆ ಆಲಿಸದಿರುವುದಕ್ಕೆ ಗ್ರಾಮಸ್ಥರು ಕಿಡಿಕಾರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net