

ಬೆಂಗಳೂರು: ರಾಜಧಾನಿಯ ಹಲವೆಡೆ ಶುಕ್ರವಾರ ಮಳೆಯಾಗಿದ್ದು, ಪಾಲಿಕೆಯ ಪೂರ್ವ, ದಕ್ಷಿಣ, ಯಲಹಂಕ ವ್ಯಾಪ್ತಿಯ ಪ್ರದೇಶಗಳಲ್ಲಿ ಬಿರುಸಿನ ಮಳೆಯಾಗಿದೆ.
ಬೆಳಗ್ಗೆಯಿಂದಲೇ ಮೋಡ ಕವಿದ ವಾತಾವರಣ ಇತ್ತು. ಸಂಜೆ 6 ಗಂಟೆಗೆ ಶುರುವಾದ ಮಳೆ ಅರ್ಧ ಗಂಟೆ ಕಾಲ ಸುರಿಯಿತು. ಕೆ.ಆರ್. ಮಾರುಕಟ್ಟೆ, ಚಾಮರಾಜಪೇಟೆ, ಬಸವನಗುಡಿ, ಮೆಜೆಸ್ಟಿಕ್, ಜೆ.ಪಿ. ನಗರ, ಬನಶಂಕರಿ, ಜಯನಗರ, ಮಲ್ಲೆಶ್ವರ, ಯವಶಂತಪುರ, ಮೈಸೂರು ರಸ್ತೆ, ನಾಯಂಡಹಳ್ಳಿ, ಕೆಂಗೇರಿ, ಮಾರುತಿ ಮಂದಿರ, ಸಂಪಂಗಿರಾಮನಗರ, ಹೆಬ್ಬಾಳ ಸೇರಿ ನಗರದ ವಿವಿಧೆಡೆ ವರ್ಷಧಾರೆಯಾಗಿದೆ.
ಪ್ರಮುಖ ರಸ್ತೆಗಳಲ್ಲಿ, ಮೇಲ್ಸೇತುವೆ ಮೇಲೆ ವಾಹನಗಳು ನಿಧಾನಗತಿಯಲ್ಲಿ ಸಾಗಿದವು. ಕೆಲವೆಡೆ ವಾಹನ ದಟ್ಟಣೆ ಉಂಟಾಯಿತು. ಸಂಜೆ ವೇಳೆ ವಾಹನ ಸವಾರರು ಮಳೆಯಲ್ಲೇ ಮನೆಯತ್ತ ಸಾಗಿದರು.
ನಗರದಲ್ಲಿ ಮುಂದಿನ ಐದು ದಿನ ಸಾಧಾರಣ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮೂನ್ಸೂಚನೆ ನೀಡಿದೆ. ಕೆಲ ಪ್ರದೇಶಗಳಲ್ಲಿ ಬಿರುಸಾಗಿ ಸುರಿದರೆ, ಇನ್ನೂ ಕೆಲ ಪ್ರದೇಶಗಳಲ್ಲಿ ಸಾಧಾರಣ ಮಳೆ ಬೀಳಲಿದೆ. ಮುಂದಿನ ಎರಡು ದಿನ ಮೋಡ ಕವಿದ ವಾತಾವರಣ ಇರಲಿದ್ದು, ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 28 ಹಾಗೂ 22 ಡಿ.ಸೆ. ಇರಲಿದೆ.