

ಕಾರವಾರ: ಜಿಲ್ಲೆಯಲ್ಲಿ ಮುಂಗಾರಿನ ಅಬ್ಬರ ಹೆಚ್ಚಿದೆ. ಇದರಿಂದ ಹಲವೆಡೆ ಸಾಕಷ್ಟು ಅನಾಹುತಗಳು ಸಂಭವಿಸಿವೆ. ಇನ್ನೂ ಎರಡು ದಿನ ಭಾರಿ ಮಳೆಯಾಗಬಹುದು ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಜೂನ್ 9 ಹಾಗೂ 10 ರಂದು ರೆಡ್ ಅಲರ್ಟ್ ಘೋಷಿಸಲಾಗಿದ್ದು, 200 ಮಿಮೀವರೆಗೂ ಮಳೆಯಾಗಬಹುದು ಎಂದು ಅಂದಾಜಿಸಲಾಗಿದೆ. ಜೂನ್ 11 ಹಾಗೂ 12 ರಂದು ಆರೇಂಜ್ ಅಲರ್ಟ್ ಘೋಷಿಸಲಾಗಿದೆ.
ಶನಿವಾರ ಬೆಳಗಿನ ವರದಿಯಂತೆ ಅಂಕೋಲಾದಲ್ಲಿ 134 ಮಿಮೀ, ಭಟ್ಕಳ 173.9, ಹಳಿಯಾಳ-125.8, ಹೊನ್ನಾವರ-110.2, ಕಾರವಾರ-67.4, ಕುಮಟಾ-103.7, ಮುಂಡಗೋಡ-183.7, ಸಿದ್ದಾಪುರ-160.5, ಶಿರಸಿ-119.1, ಜೊಯಿಡಾ-138.5, ಯಲ್ಲಾಪುರ-157.1, ದಾಂಡೇಲಿ 125.6, ಮಿಮೀ ಮಳೆಯಾಗಿದೆ.
ಕಾರವಾರದಲ್ಲಿ ಶುಕ್ರವಾರ ಸಾಯಂಕಾಲ ಪ್ರಾರಂಭವಾದ ಹದವಾದ ಮಳೆ ಶನಿವಾರ ರಾತ್ರಿಯವರೆಗೂ ಎಡಬಿಡದೇ ಮುಂದುವರಿದಿದೆ. ಆದರೆ, ಹೆಚ್ಚಿನ ಗಾಳಿ ಹಾಗೂ ಜಡಿ ಮಳೆ ಇಲ್ಲದ ಕಾರಣ ಅನಾಹುತ ಉಂಟಾಗಿಲ್ಲ. ಶನಿವಾರ ಇಡೀ ದಿನ ವಿದ್ಯುತ್ ಕಣ್ಣಾಮುಚ್ಚಾಲೆ ಮುಂದುವರಿಯಿತು.
ಶಿರಸಿ ತಾಲೂಕಿನಾದ್ಯಂತ ಶನಿವಾರ ಸಂಪೂರ್ಣ ದಿನ ಧಾರಾಕಾರ ಮಳೆಯಾಗಿದೆ. ಇದರಿಂದಾಗಿ ನಗರದ ಕೆಲವೆಡೆ ಚರಂಡಿಗಳು ಉಕ್ಕಿ ರಸ್ತೆಯ ಮೇಲೆ ಹರಿದು ಸಾರ್ವಜನಿಕರಿಗೆ ಸಂಚಾರಕ್ಕೆ ವ್ಯತ್ಯಯವಾಯಿತು.
ನಗರಸಭೆ ಈ ಬಾರಿ ಮಳೆಗಾಲದ ಪೂರ್ವ ಸಿದ್ಧತಾ ಕಾರ್ಯವನ್ನು ಸಮರ್ಪಕವಾಗಿ ಮಾಡಿರಲಿಲ್ಲ. ಇದರಿಂದಾಗಿ ಕೆಲವೆಡೆ ಚರಂಡಿಗಳು ಕಟ್ಟಿ ಸಮಸ್ಯೆ ಉಂಟಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಕೆಲವೆಡೆ ಹಳ್ಳದಲ್ಲಿ ನೀರಿನ ಹರಿವು ಜಾಸ್ತಿಯಾಗಿದೆ. ಇಲ್ಲಿಯ ಹನುಮಂತಿ ಕೆರೆ ತುಂಬಿ ನೀರು ಹರಿಯಲಾರಂಭಿಸಿದೆ. ಕೆರೆ ಜಾಗದಲ್ಲಿ ತಾತ್ಕಾಲಿಕ ತಂಬು ನಿರ್ಮಿಸಿಕೊಂಡಿದ್ದ ಕೆಲ ಕುಟುಂಬಗಳು ಸ್ಥಳಾಂತರಗೊಂಡಿವೆ. ಅಘನಾಶಿನಿ ನದಿಯಲ್ಲಿ ನೀರಿನ ಮಟ್ಟ ಏರಿಕೆ ಆಗಿದೆ.
ಸಂಚಾರಕ್ಕೆ ಸಮಸ್ಯೆ
ಇಲ್ಲಿಯ ಶಿರಸಿ ಕುಮಟಾ ರಸ್ತೆಯಲ್ಲಿ ಅಭಿವೃದ್ಧಿ ಕಾರ್ಯ ನಡೆಯುತ್ತಿದ್ದು, ನಗರದ ನೀಲೇಕಣಿಯಿಂದ ಅಗಸೇಬಾಗಿಲಿನ ವರೆಗೆ ಈಗ ಸಂಚಾರ ಸಮಸ್ಯೆ ಉಂಟಾಗಿದೆ.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು ಗುತ್ತೆಗೆದಾರ ಆರ್ ಎನ್ ಎಸ್ ನೀಲೇಕಣಿಯಿಂದ ಅಗಸೇಬಾಗಿಲಿನವರೆಗಿನ ರಸ್ತೆ ಕಾಮಗಾರಿಯನ್ನು ಅತ್ಯಂತ ನಿಧಾನವಾಗಿ ಮಾಡಿದೆ. ಕಳೆದ ಕೆಲ ತಿಂಗಳುಗಳ ಹಿಂದೆಯೇ ಇಲ್ಲಿ ರಸ್ತೆಯ ಇಕ್ಕೆಲಗಳಲ್ಲಿ ಚರಂಡಿ ನಿರ್ಮಿಸಿದೆ. ಆದರೆ, ನೀಲೇಕಣಿಯಲ್ಲಿ ಒಂದೆಡೆ ಸಿಡಿ ನಿರ್ಮಾಣ ಕಾರ್ಯ ನಡೆಯುತ್ತಿದ್ದು, ಇದಕ್ಕಾಗಿ ಕಂದಕ ತೋಡಿದ್ದರೂ ಕೆಲಸ ಮುಂದುವರಿಸಿಲ್ಲ. ಹೀಗಾಗಿ, ಇಲ್ಲಿ ವಾಹನ ಸಂಚಾರ ಅಸ್ತವ್ಯಸ್ತಗೊಂಡಿದೆ. ಅಲ್ಲದೇ ನಗರದ ಒಳಗಿನ ಈ ಪ್ರದೇಶದಲ್ಲಿ ಮುಕ್ಕಾಲು ಕಿ. ಮೀ. ದೂರದಷ್ಟು ರಸ್ತೆಯಲ್ಲಿ ಬೃಹತ್ ಹೊಂಡಗಳು ನಿರ್ಮಾಣವಾಗಿದ್ದು, ವಾಹನಸವಾರರು ಪೇಚು ಪಡುವಂತಾಗಿದೆ.