

ಚನ್ನಗಿರಿ: ಮಳೆರಾಯನ ಕೃಪೆಗಾಗಿ ಪ್ರಾರ್ಥಿಸಿ ಮರಾಠ ಸಮುದಾಯದವರು ಪಟ್ಟಣದ ಶ್ರೀ ಕುಕ್ಕುವಾಡೇಶ್ವರಿ ದೇವಿಯ ಉತ್ಸವ ಮೂರ್ತಿಯನ್ನು ಮಂಗಳವಾರ ಜೋಳದಾಳು ಅಮ್ಮನಗುಡ್ಡ ದೇಗುಲಕ್ಕೆ ಪಲ್ಲಕ್ಕಿಯಲ್ಲಿ ಮೆರವಣಿಗೆ ಮೂಲಕ ಕರೆದೊಯ್ದರು.
ತಾಲೂಕಿನಲ್ಲಿ ಮಳೆ ಬಾರದೆ ಇದ್ದಾಗ ಪಟ್ಟಣದ ನಗರದೇವತೆ ಶ್ರೀ ಕುಕ್ಕುವಾಡೇಶ್ವರಿ ದೇವಿಯನ್ನು ಅಮ್ಮನಗುಡ್ಡ ದೇವಸ್ಥಾನಕ್ಕೆ ಕರೆದೊಯ್ದು ವಿಶೇಷ ಪೂಜೆ ಸಲ್ಲಿಸುವುದು. ಮಳೆ ಬಂದ ನಂತರ ಪಟ್ಟಣಕ್ಕೆ ಕರೆತರುವ ಸಂಪ್ರದಾಯವಿದೆ. ಅದರಂತೆ ದೇವಿಯನ್ನು ಸಕಲ ಪೂಜೆಯೊಂದಿಗೆ ಅಮ್ಮನಗುಡ್ಡಕ್ಕೆ ಕರೆದೊಯ್ಯಲಾಗಿದೆ.
ಅದಕ್ಕೂ ಮುನ್ನ ಪಟ್ಟಣದ ದೇವಾಲಯದಲ್ಲಿ ಪೂಜೆ ಸಲ್ಲಿಸಲಾಯಿತು. ಹಿಂದಿನ ರಾತ್ರಿಯಿಂದ ಉಪವಾಸವಿದ್ದ ಮಹಿಳೆಯರು ಮನೆಯಿಂದ ಕುಂಭಗಳನ್ನು ಹೊತ್ತು ತಂದು ದೇಗುಲದಲ್ಲಿ ಪೂಜೆ ಸಲ್ಲಿಸಿದರು. ನಂತರ ಪಟ್ಟಣದ ಮೈಲಾರೇಶ್ವರ, ಕಾಳಿಕಾಂಬ ದೇಗುಲಗಳಿಗೆ ತೆರಳಿ ಪೂಜಾ ಕೈಂಕರ್ಯ ನಡೆಸಿದರು. ನಂತರ ಶ್ರೀ ಕುಕ್ಕುವಾಡೇಶ್ವರಿ ದೇಗುಲಕ್ಕೆ ಹೊತ್ತು ತಂದು ದೇವತೆಗೆ ಕುಂಭಾಭಿಷೇಕ ಮಾಡಿದರು.
ಈ ವೇಳೆ ಮರಾಠ ಸಮುದಾಯದ ಮುಖಂಡ ಕುಬೇಂದ್ರೋಜಿರಾವ್ ಮಾತನಾಡಿ, ಇದುವರೆಗೆ ಮಳೆಯ ಸುಳಿವು ಇಲ್ಲದಂತಾಗಿದೆ. ಮಳೆ ಬರದೆ ಕೃಷಿ ನಂಬಿ ಜೀವನ ನಡೆಸುತ್ತಿರುವ ತಾಲೂಕಿನ ಶೇ. 95 ರಷ್ಟು ಜನರಿಗೆ ಜೀವನ ನಡೆಸುವುದೇ ಕಷ್ಟವಾಗಿದೆ ಎಂದರು.
ಮಳೆ ಬಾರದೇ ಇರುವ ದಿನಗಳಲ್ಲಿ ನಮ್ಮ ಪೂರ್ವಜರು ಶ್ರದ್ಧಾಭಕ್ತಿಯಿಂದ ಪೂಜೆ ಸಲ್ಲಿಸಿ ದೇವಿಗೆ ಕುಂಭಾಭಿಷೇಕ ನೆರವೇರಿಸಿದಾಗ ಮಳೆ ಬಂದ ನಿದರ್ಶನಗಳಿವೆ. ದೇವರು ನಮ್ಮನ್ನು ಎಂದೂ ಕೈಬಿಟ್ಟಿಲ್ಲ ಎಂದರು.
ಈ ವೇಳೆ ಸಮಾಜದ ಮುಖಂಡರಾದ ಪೂಜಾರ್ ಮಲ್ಲೋಜಿರಾವ್, ಕಾಫಿಪುಡಿ ಶಿವಾಜಿರಾವ್, ರಂಗನಾಥರಾವ್, ಭೀಮೋಜಿರಾವ್ ಇದ್ದರು.