ಪೊಲೀಸರ ಮೇಲೆ ನೋಟಿನ ಸುರಿಮಳೆ

18-10-rama-police sanmana
Published on

* ವಿಡಿಯೋ ವೈರಲ್

* ಪಿಎಸ್‌ಐ, ಎಎಸ್‌ಐ ಸೇರಿ ಮೂವರಿಗೆ ಶೋ ಕಾಸ್ ನೋಟಿಸ್

ರಾಮನಗರ

ಚನ್ನಪಟ್ಟಣ ನಗರದ ಬಡಾಮಕಾನ್ ದರ್ಗಾದಲ್ಲಿ ಹಮ್ಮಿಕೊಂಡಿದ್ದ ಗಂಧೋತ್ಸವದ ಕೊನೆ ದಿನವಾದ ಶುಕ್ರವಾರ ರಾತ್ರಿ ಆಯೋಜನೆಗೊಂಡಿದ್ದ ಕವ್ವಾಲಿ ಕಾರ್ಯಕ್ರಮದಲ್ಲಿ, ಆಯೋಜಕರು ಚನ್ನಪಟ್ಟಣದ ಮೂವರು ಪೊಲೀಸರನ್ನು ಸನ್ಮಾನಿಸಿ, ಅವರ ಮೇಲೆ ನೋಟುಗಳನ್ನು ಎರಚಿರುವ ವಿಡಿಯೋ ವೈರಲ್ ಆಗಿದ್ದು, ಪರ ವಿರೋಧ ಚರ್ಚೆಗೆ ಕಾರಣವಾಗಿದೆ.

ಚನ್ನಪಟ್ಟಣ ಟೌನ್ ಠಾಣೆಯ ಪಿಎಸ್‌ಐ ಹರೀಶ್ ಸಿ.ಎಂ, ಎಎಸ್‌ಐ ಫೈರೋಜ್ ಹಾಗೂ ಪೂರ್ವ ಠಾಣೆಯ ದುರ್ಗಪ್ಪ ನೋಟಿನ ಸನ್ಮಾನ ಸ್ವೀಕರಿಸಿದ್ದು, ಘಟನೆಗೆ ಸಂಬಂಧಿಸಿದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್. ಶ್ರೀನಿವಾಸ ಗೌಡ ಮೂವರಿಗೂ ಶೋ ಕಾಸ್ ನೋಟಿಸ್ ನೀಡಿದ್ದಾರೆ.

ನಾಲ್ಕು ದಿನಗಳ ಬಡಾಮಕಾನ್ ದರ್ಗಾದಲ್ಲಿ ಹಜರತ್ ಸೈಯದ್ ಮಹಮ್ಮದ್ ಅಖಿಲ್ ಷಾ ಖಾದ್ರಿ ಅವರ ಗಂಧೋತ್ಸವದ ಕೊನೆಯ ದಿನವಾದ ಶುಕ್ರವಾರ ರಾತ್ರಿ ಕವ್ವಾಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು, ಅದು ಮುಗಿದ ಬಳಿಕ ಮಹೋತ್ಸವಕ್ಕೆ ಶ್ರಮಿಸಿದವರಿಗೆ ಆಯೋಜಕರು ವೇದಿಕೆಗೆ ಕರೆದು ಸನ್ಮಾನಿಸುತ್ತಿದ್ದರು. ಪೊಲೀಸ್ ಬಂದೋಬಸ್ತ್ ಒದಗಿಸಿದ ಕಾರಣಕ್ಕೆ ಮೂವರೂ ಅಧಿಕಾರಿಗಳನ್ನು ವೇದಿಕೆಗೆ ಕರೆದು, ಪೊಲೀಸ್ ಸಮವಸ್ತ್ರದಲ್ಲಿದ್ದ ಮೂವರಿಗೂ ದೊಡ್ಡ ಹೂವಿನಹಾರ ಮತ್ತು ಸ್ಮರಣಿಕೆ ಕೊಟ್ಟು ಸನ್ಮಾನಿಸಿದರು. ಬಳಿಕ, 20 ರೂ. ನೋಟುಗಳನ್ನು ಮೂವರ ಮೇಲೂ ಎರಚಿದರು. ಈ ವೇಳೆ, ಸಭಿಕರು ಜೋರಾಗಿ ಕೂಗಿ ಶಿಳ್ಳೆ ಹಾಕಿದರು. ಸಾರ್ವಜನಿಕ ಕಾರ್ಯಕ್ರಮದಲ್ಲಿದ್ದೇವೆ ಎಂಬುದನ್ನು ಲೆಕ್ಕಿಸದೆ ಮೂವರೂ, ತಮ್ಮ ಮೇಲೆ ನೋಟು ಎರಚುತ್ತಿದ್ದರೂ ಖುಷಿಯಿಂದ ಸನ್ಮಾನ ಸ್ವೀಕರಿಸಿದರು.

ಶೋ ಕಾಸ್ ನೋಟಿಸ್

ಒಂದು ದೊಡ್ಡ ಕಾರ್ಯಕ್ರಮ ಯಶಸ್ವಿಯಾದ ಕಾರಣಕ್ಕೆ ಯಾವುದೇ ಅಹಿತಕರ ಘಟನೆ ನಡೆಯಲು ಬಂದೋಬಸ್ತ್ ನೀಡಿದ್ದಕ್ಕೆ ಪೊಲೀಸರಿಗೆ ಅಭಿಮಾನದಿಂದ ಸನ್ಮಾನ ಮಾಡುತ್ತಾರೆ. ಆದರೆ, ಗಂಧೋಹೋತ್ಸವದಲ್ಲಿ ಸನ್ಮಾನಿಸಿ ಹಣ ಎರಚಿರುವುದು ತಪ್ಪು. ಘಟನೆಗೆ ಸಂಬಂಧಿಸಿದಂತೆ ಪಿಎಸ್‌ಐಗಳಾದ ಹರೀಶ್ ಸಿ.ಎಂ, ದುರ್ಗಪ್ಪ ಹಾಗೂ ಎಎಸ್‌ಐ ಫೈರೋಜ್ ಅವರಿಗೆ ಶೋ ಕಾಸ್ ನೋಟಿಸ್ ನೀಡಲಾಗಿದೆ. ಈ ಸಂಬಂಧ‘ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಶ್ರೀನಿವಾಸ ಗೌಡ ಘಟನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net