

ಬೆಂಗಳೂರು: ಫೆಂಗಲ್ ಚಂಡಮಾರುತ ಪರಿಣಾಮ ರಾಜಧಾನಿಯಲ್ಲಿ ಸೋಮವಾರವೂ ಜಿಟಿ ಜಿಟಿ ಮಳೆ ಮುಂದುವರಿದಿದ್ದು,ಇದರಿಂದಾಗಿ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಯಿತು.
ದೈನಂದಿನ ಕಾರ್ಯಚಟುವಟಿಕೆಗಳಿಗೆ ತೊಂದರೆಯಾಯಿತು. ರಜೆ ಘೋಷಿಸದ ಹಿನ್ನೆಲೆಯಲ್ಲಿ ಶಾಲಾ&ಕಾಲೇಜಿಗಳಿಗೆ ವಿದ್ಯಾರ್ಥಿಗಳು, ಸರ್ಕಾರಿ ಕಚೇರಿಗಳಿಗೆ ಮತ್ತು ಖಾಸಗಿ ಕಂಪನಿಗಳಿಗೆ ತೆರಳುವ ಉದ್ಯೋಗಿಗಳು ಮಳೆಯಲ್ಲಿಯೇ ನೆನೆದುಕೊಂಡು ಹೋಗುವಂತಾಯಿತು. ಬೆಳಗ್ಗೆ ವಾಯುವಿಹಾರಿಗಳಿಗೆ ತೊಂದರೆಯಾಯಿತು. ಸಾಕಷ್ಟು ಜನರು ಮನೆಯಿಂದ ಹೊರಗಡೆ ತೆರಳಲು ಸಾಧ್ಯವಾಗಲಿಲ್ಲ.ಹೆಬ್ಬಾಳದ ಮೇಲ್ಸುತುವೆ, ಎಸ್ಟೀಂ ಮಾಲ್ನಿಂದ ಮೇಖ್ರಿ ವೃತ್ತದ ಕಡೆಗೆ ಒಳಬರುವ ವಾಹನಗಳು ನಿಧಾನಗತಿಯಲ್ಲಿ ಸಾಗಿದವು. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಾಗುವ ಹೆಬ್ಬಾಳ ಮೇಲ್ಸೇತುವೆಯಲ್ಲಿ ವಾಹನ ದಟ್ಟಣೆ ಇತ್ತು. ಹಲವು ಕಡೆಗಳಲ್ಲಿ ಸಿಗ್ನಲ್ ಇಲ್ಲದ ಕಾರಣ ವಾಹನ ದಟ್ಟಾಣೆ ಉಂಟಾಯಿತು. ಕೆಲ ರಸ್ತೆಗಳ ಮೇಲೆ ನೀರು ಹರಿದ ಪರಿಣಾಮ ವಾಹನಗಳು ನಿಧಾನಗತಿಯಲ್ಲಿ ಸಾಗಿದವು.
ಕೆ.ಆರ್.ಮಾರುಕಟ್ಟೆ, ಚಿಕ್ಕಪೇಟೆ, ಸುಲ್ತಾನ್ಪೇಟೆ, ಬಳೇಪೇಟೆ, ಕಾಟನ್ಪೇಟೆ, ವಿಜಯನಗರ, ಕಾಮಾಪಾಳ್ಯ, ಮೆಜೆಸ್ಟಿಕ್, ಮೈಸೂರು ರಸ್ತೆ, ಬಸವನಗುಡಿ, ಜೆ.ಪಿ.ನಗರ, ಮಲ್ಲೇಶ್ವರ, ಜೆ.ಸಿ.ರಸ್ತೆ, ವಿಶ್ವೇಶ್ವರಯ್ಯಪುರ, ವಿದ್ಯಾಪಿಠ, ಹಗದೂರು, ಯಲಹಂಕ, ಆರ್.ಆರ್. ನಗರ, ವಿ.ನಾಗೇನಹಳ್ಳಿ, ಪುಲಿಕೇಶಿನಗರ, ಅರೆಕೆರೆ, ಎಚ್ಎಸ್ಆರ್ ಲೇಔಟ್, ನಾಗಪುರ, ಕಾಟನ್ಪೇಟೆ, ಚಾಮರಾಜಪೇಟೆ, ಬಿಟಿಎಂ ಲೇಔಟ್, ಹೂಡಿ ಸೇರಿ ನಗರ ವಿವಿಧೆಡೆ ಜಿಟಿಜಿಟಿ ಮಳೆಯಾಯಿತು. ಸಿಲ್ಕ್ ಬೋರ್ಡ್ ಜಂಕ್ಷನ್, ಓಕುಳಿಪುರ ಅಂಡರ್ಪಾಸ್, ಚಿಕ್ಕಪೇಟೆ ಮೆಟ್ರೋ ಸ್ಟೇಷನ್ ಮುಂಭಾಗ ಸಾಧಾರಣ ಪ್ರಮಾಣದಲ್ಲಿ ನೀರು ನಿಂತಿತ್ತು. ಕೆಲವಡೆ ರಸ್ತೆಯಲ್ಲೇ ಮೇಲೆ ನೀರು ಹರಿದ ಪರಿಣಾಮ ವಾಹನ ಸವಾರರು ಪರದಾಡಿದರು
ಎಲ್ಲೆಲ್ಲಿ ಎಷ್ಟು ಮಳೆ?
ಹಂಪೆನಗರ 15, ಗೊಟ್ಟಿಗೆರೆ 14, ವಿದ್ಯಾಪಿಠ 14, ಪುಲಿಕೇಶಿನಗರ 13, ಮಾರತ್ತಹಳ್ಳಿ 13, ದೊಡ್ಡನೆಕ್ಕುಂಡಿ, ಬಾಣಸವಾಡಿ ಪೂರ್ವ, ಹಗದೂರು, ಎಚ್.ಗೊಲ್ಲಹಳ್ಳಿ, ದೊರೆಸನ್ನಿಪಾಳ್ಯ, ಕೆಂಗೇರಿ 12, ಕೋರಮಂಗಲ 12, ಕಾಟನ್ಪೇಟೆ, ಸಂಪಂಗಿರಾಮನಗರ, ಆಂಜಾನಪುರ, ಹೆಮ್ಮಿಗೇಪುರ 11 ಮಿಮೀ ಮಳೆಯಾಗಿದೆ.
ಮುದುಡಿದ ರಾಜಧಾನಿ: ಸೈಕ್ಲೋನ್ ಪರಿಣಾಮ ರಾಜಧಾನಿಯಲ್ಲಿ ಗರಿಷ್ಠ ಮತ್ತು ಕನಿಷ್ಠ ತಾಪಮಾನ ಕುಸಿತವಾದ ಪರಿಣಾಮ ಜನರು ಚಳಿಗೆ ನಡುಗಿದ್ದರು. ಸೋಮವಾರ ಗರಿಷ್ಠ ತಾಪಮಾನದಲ್ಲಿ 22.4 ಡಿ.ಸೆ. ಉಷ್ಣಾಂಶ ದಾಖಲಾಗಿತ್ತು. ವಾಡಿಕೆಗಿಂತ 4 ಡಿ.ಸೆ.ಉಷ್ಣಾಂಶ ಕಡಿಮೆ ದಾಖಲಾಗಿದೆ. ಬೆಂಗಳೂರು ಸೇರಿ ಸುತ್ತಮುತ್ತ ಪ್ರದೇಶಗಳಲ್ಲಿ ಮುಂದಿನ 2 ದಿನ ಮೋಡ ಕವಿದ ವಾತಾವರಣ ಇರಲಿದ್ದು, ಕೆಲವೊಮ್ಮೆ ಭಾರಿ ಮಳೆಯಾಗಲಿದೆ. ಬೆಳಗ್ಗಿನ ಜಾವದಲ್ಲಿ ಮಂಜು ಬೀಳಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.