

ವಿಜಯವಾಣಿ ಸುದ್ದಿಜಾಲ ಕಾರವಾರ/ಶಿರಸಿ
ಮಲೆನಾಡಿನ ಮೂರು ತಾಲೂಕುಗಳಲ್ಲಿ ಮಂಗಳವಾರ ಆಲಿಕಲ್ಲು ಮಳೆಯಾಗಿದೆ. ಶಿರಸಿ, ಸಿದ್ದಾಪುರ ಹಾಗೂ ಯಲ್ಲಾಪುರ ಭಾಗದಲ್ಲಿ ಮಧ್ಯಾಹ್ನದ ವೇಳೆ ಗುಡುಗು, ಸಿಡಿಲು ಸಮೇತ ಸುಮಾರು 15 ನಿಮಿಷ ಮಳೆಯಾಗಿದ್ದು, ಅಲ್ಲಲ್ಲಿ ಆಲಿಕಲ್ಲು ಉದುರಿದೆ. ಮಾ.18 ರವರೆಗೂ ಜಿಲ್ಲೆಯಲ್ಲಿ ಮಳೆಯಾಗುವ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ ನೀಡಿದೆ. ಕರಾವಳಿಯಲ್ಲಿ ಮೋಡ ಕವಿದ ವಾತಾವರಣವಿದ್ದು, ಭಾರಿ ಸೆಕೆ ಇತ್ತು.
ಕೃಷಿಕರಿಗೆ ಆತಂಕ
ಅಡಕೆ ಒಣ ಹಾಕಿದ ಬೆಳೆಗಾರರು ಮಂಗಳವಾರದ ಮಳೆಯಿಂದ ಆತಂಕಗೊAಡಿದ್ದಾರೆ. ಸಿದ್ದಾಪುರದಲ್ಲಿ ಕೆಲವರು ಒಣಗಿಸಿದ ಚಾಲಿಗೆ ಟಾರ್ಪಲ್ ಮುಚ್ಚಿಟ್ಟಿದ್ದು ಕಂಡುಬAತು. ಮಳೆ ಇನ್ನೂ ಮುಂದುವರಿದಲ್ಲಿ ಒಣಗಿಸಿದ ಚಾಲಿಯೆಲ್ಲ ಹಾಳಾಗುವ ಆತಂಕವನ್ನು ಕೃಷಿಕರು ವ್ಯಕ್ತಪಡಿಸಿದ್ದಾರೆ.
ಸೆಕೆಯ ಅನುಭವ ಹೆಚ್ಚು:
ಇತ್ತೀಚೆಗೆ ಜಿಲ್ಲೆಯಲ್ಲಿ ಬಿಸಿಗಾಳಿಯ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ ನೀಡಿತ್ತು. ದೇಶದಲ್ಲೇ ಅತ್ಯಧಿಕ ಉಷ್ಣಾಂಶ ಎಂದರೆ 40.2 ಡಿಗ್ರಿ ಸೆಲ್ಶಿಯಸ್ ಕಾರವಾರದಲ್ಲಿ ದಾಖಲಾಗಿತ್ತು. ಹೊನ್ನಾವರ, ಕಾರವಾರದಲ್ಲಿ ನಿರಂತರವಾಗಿ ಗರಿಷ್ಠ 36 ಡಿಗ್ರಿ ಸೆಲ್ಶಿಯಸ್ ಉಷ್ಣಾಂಶ ದಾಖಲಾಗುತ್ತಿದೆ. ಮೋಡದ ವಾತಾವರಣ ಮಾ.20 ರವರೆಗೂ ಮುಂದುವರಿಯುವ ಸಾಧ್ಯತೆ ಇರುವುದಾಗಿ ಹವಾಮಾನ ಇಲಾಖೆ ತಿಳಿಸಿದ್ದು, ಗರಿಷ್ಠ 38 ಡಿಗ್ರಿ ಸೆಲ್ಶಿಯಸ್ ಉಷ್ಣಾಂಶ ದಾಖಲಾಗುವ ಮುನ್ನೆಚ್ಚರಿಕೆ ನೀಡಿದೆ.