

ಬೆಂಗಳೂರು: ಹಲವೆಡೆ ಬಿದ್ದಿರುವ ಮರ,ವಿದ್ಯುತ್ ಕಂಬಗಳ ತೆರವು ಕಾರ್ಯಾಚರಣೆ ನಡೆಯುತ್ತಿರುವ ನಡುವೆಯೂ ರಾಜಧಾನಿಯಲ್ಲಿ ಸತತ 3ನೇ ದಿನವೂ ಮಳೆ ಮುಂದುವರಿದಿದೆ.
ದಕ್ಷಿಣ, ಪೂರ್ವ ಮತ್ತು ಪಶ್ಚಿಮ ವಲಯ ವ್ಯಾಪ್ತಿಯಲ್ಲಿ ಶುಕ್ರವಾರ ಧಾರಾಕಾರವಾಗಿ ಸುರಿದಿದೆ. ಸಂಜೆ 4.30 ಶುರುವಾದ ಮಳೆ ಎಚ್ಎಸ್ಆರ್ ಲೇಔಟ್, ಬೊಮ್ಮನಹಳ್ಳಿ, ಉತ್ತರಹಳ್ಳಿ, ಪುಟ್ಟೇನಹಳ್ಳಿ, ನಂದಿನಿ ಲೇಔಟ್, ಜೆ.ಪಿ.ಪಾರ್ಕ್, ಗಂಗಾನಗರ, ಜಕ್ಕೂರು, ವಿಜಯನಗರ,ಹೊರಮಾವು, ರಾಮಮೂರ್ತಿನಗರ, ಶೆಟ್ಟಿಹಳ್ಳಿ, ಮಲ್ಲಸಂದ್ರ, ಹೆಬ್ಬಾಳ, ಧಣಿಸಂದ್ರ, ಮಂಗಮ್ಮನಪಾಳ್ಯ, ಹಂಪೆನಗರ,ಪೀಣ್ಯ ಕೈಗಾರಿಕಾ ಪ್ರದೇಶ, ಜ್ಞಾನಭಾರತಿ, ಬಾಣಸವಾಡಿ, ಜಯನಗರ, ಬಸವನಗುಡಿ, ಇಟ್ಟಮಡು, ವಿದ್ಯಾಪಿಠ, ನಾಯಂಡಹಳ್ಳಿ ಸೇರಿ ನಗರದ ಹಲವೆಡೆ ಅರ್ಧಗಂಟೆ ಕಾಲ ಹೆಚ್ಚು ಸುರಿದಿದೆ.
ಮರ, ಕೊಂಬೆಗಳ ಬೀಳುವ ಆತಂಕದಲ್ಲೇ ಪಾದಚಾರಿಗಳು, ಸವಾರರು ಗಾಬರಿಯಿಂದ ಮನೆಗೆ ತೆರಳುತ್ತಿರುವ ದೃಶ್ಯ ಕಂಡುಬಂತು. ಕೆಲವೆಡೆ ಮ್ಯಾನ್ಹೋಲ್ ಉಕ್ಕಿ ಹರಿದ ಪರಿಣಾಮ ರಸ್ತೆಗಳ ಮೇಲೆ ಕೊಳಚೆನೀರು ಹರಿಯಿತು. ಅಂಡರ್ಪಾಸ್, ಪ್ರಮುಖ ರಸ್ತೆಗಳಲ್ಲಿ ನೀರು ನಿಂತಿದ್ದ ಪರಿಣಾಮ ವಾಹನ ಸವಾರರು ಪರದಾಡಿದರು. ಕೆಲವೆಡೆ ವಾಹನ ದಟ್ಟಣೆ ಹೆಚ್ಚಾಗಿತ್ತು. ಕೆಲ ಬಡಾವಣೆಗಳಲ್ಲಿ ವಿದ್ಯುತ್ ಪೂರೈಕೆ ವ್ಯತ್ಯಯವಾಗಿತ್ತು. ಮೂರು ದಿನಗಳಿಂದ ನಗರದಲ್ಲಿ ಸುರಿದ ಭಾರಿ ಮಳೆಗೆ 400ಕ್ಕೂ ಅಧಿಕ ಮರಗಳು ಧರಾಶಾಹಿಯಾಗಿದ್ದು, ಅವುಗಳ ತೆರವು ಕಾರ್ಯಾಚರಣೆ ನಡೆಯುತ್ತಿದ್ದರೂ ಮತ್ತೆ ಮಳೆಗೆ ಇನ್ನಷ್ಟು ಮರಗಳು ಬಿದ್ದಿವೆ. ಆದರೆ, ಕೆಲ ಬಡಾವಣೆಗಳಲ್ಲಿ ರಸ್ತೆ ಬದಿಯಲ್ಲೇ ಬಿದ್ದಿರುವ ಕೊಂಬೆಗಳು ತೆರವು ಮಾಡಿಲ್ಲ.
4 ದಿನ ಸಾಧಾರಣ ಮಳೆ: ನಗರದಲ್ಲಿ ಸುರಿಯುತ್ತಿರುವ ಮಳೆ ಮುಂದಿನ 4 ದಿನ ಮುಂದುವರಿಯಲಿದೆ. ಕೆಲವೆಡೆ ಗುಡುಗು, ಮಿಂಚು, ಬಿರುಗಾಳಿ ಸಹಿತ ಮಳೆಯಾಗಲಿದೆ.ಇನ್ನೂ ಕೆಲವೆಡೆ ಸಾಧಾರಣ ಪ್ರಮಾಣದಲ್ಲಿ ವರ್ಷಧಾರೆಯಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಎಲ್ಲೆಲ್ಲಿ ಎಷ್ಟು ಮಳೆ?
ಪ್ರದೇಶ ಮಿಮೀ
ಎಚ್.ಗೊಲ್ಲಹಳ್ಳಿ 15
ಕೋರಮಂಗಲ 14
ಹಂಪೆನಗರ 14
ಚಾಮರಾಜಪೇಟೆ 12
ದೊರೆಸನಿಪಾಳ್ಯ 11
ಹೆಮ್ಮಿಗೇಪುರ 11
ಸಂಪಂಗಿರಾಮನಗರ 10