ಬಂಡೀಪುರಕ್ಕೆ ಎರಡನೇ ದಿನ ಮಳೆ

ಬಂಡೀಪುರಕ್ಕೆ ಎರಡನೇ ದಿನ ಮಳೆ
Published on

ಗುಂಡ್ಲುಪೇಟೆ: ಬಂಡೀಪುರ ಅರಣ್ಯಕ್ಕೆ ಸೋಮವಾರ ಎರಡನೇ ದಿನ ಮಳೆ ಬೀಳುವ ಮೂಲಕ ಆಕಸ್ಮಿಕ ಬೆಂಕಿ ಭೀತಿಯನ್ನು ದೂರ ಮಾಡಿದೆ.

ಸೋಮವಾರ ಮಧ್ಯಾಹ್ನ ಆರಂಭವಾದ ಮಳೆ ಸುಮಾರು ಎರಡು ಗಂಟೆಗಳ ಕಾಲ ಸುರಿದಿದೆ. ಕಳೆದ ಬುಧವಾರವೂ ಬಂಡೀಪುರಕ್ಕೆ ಉತ್ತಮ ಮಳೆ ಬಿದ್ದಿತ್ತು. ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಬಂಡೀಪುರ ವಲಯ, ಗೋಪಾಲಸ್ವಾಮಿ ಬೆಟ್ಟ ವಲಯ, ಮೂಲೆಹೊಳೆ ವಲಯ, ಬಫರ್ ವಲಯ ಹಾಗೂ ಕುಂದಕೆರೆ ವಲಯಗಳಿಗೆ ಉತ್ತಮ ಮಳೆ ಬಿದ್ದಿದೆ. ಮಧ್ಯಾಹ್ನದ ಸುಮಾರಿಗೆ ಬೀಳುತ್ತಿದ್ದ ತುಂತುರು ಹನಿಗಳು ಸಂಜೆಯಾಗುತ್ತಿದ್ದಂತೆ ಗುಡುಗಿನೊಂದಿಗೆ ಬಿರುಸು ಮಳೆ ಬೀಳಲಾರಂಭಿಸಿತು. ಸುಮಾರು ಮುಕ್ಕಾಲು ಗಂಟೆಗೂ ಹೆಚ್ಚಿನ ಕಾಲ ಸುರಿದ ಮಳೆಯಿಂದ ಅರಣ್ಯ ಪ್ರದೇಶವು ಆಕಸ್ಮಿಕ ಬೆಂಕಿ ಭೀತಿಯಿಂದ ಸದ್ಯಕ್ಕೆ ಪಾರಾಗುವ ಜತೆಗೆ ಒಣಗಿದ್ದ ಹುಲ್ಲು ಗರಿಕೆ ಚಿಗುರಿದರೆ ಬೇಸಿಗೆಯ ಬಿಸಿಲಿನಲ್ಲಿ ಬಸವಳಿದಿದ್ದ ವನ್ಯಜೀವಿಗಳಿಗೆ ಸ್ವಲ್ಪ ಮಟ್ಟಿಗೆ ಆಹಾರ ಕೊರತೆ ನೀಗಿಸುವ ಭರವಸೆ ಮೂಡಿಸಿದೆ.

ಇನ್ನೂ ಒಂದೆರಡು ದಿನಗಲ ಕಾಲ ಮಳೆ ಬಿದ್ದರೆ ಹುಲ್ಲುಗಳು ಚಿಗುರಿ ಬೆಂಕಿ ಭೀತಿಯನ್ನು ದೂರಾಗಿಸಲಿದೆ ಎಂದು ಬಂಡೀಪುರ ಉಪವಿಭಾಗದ ಎಸಿಎಫ್ ಎನ್.ಪಿ.ನವೀನ್ ಕುಮಾರ್ ವಿಜಯವಾಣಿಗೆ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net