ಮಳೆಯನ್ನೂ ಲೆಕ್ಕಿಸದೇ ಸಮಸ್ಯೆಗೆ ಸಿಲುಕಿದ್ದ ಜನರ ನೆರವಿಗಿಳಿದ ಅಶ್ವಿಜ

Rain_Effect11
Published on

ತುಮಕೂರು: ಬಹುದಿನ ನಂತರ ಜಿಲ್ಲೆಯಲ್ಲಿ ವರುಣನ ಆರ್ಭಟಕ್ಕೆ ಜನಜೀವನ ಅಸ್ತವ್ಯಸ್ತಗೊಂಡಿದೆ. ಸೋಮವಾರ ಸಂಜೆ ಆರಂಭವಾದ ಗುಡುಗು-ಸಿಡಿಲಿನ ಅಬ್ಬದ ಮಳೆಯು ತಡರಾತ್ರಿಯವರೆಗೂ ಸುರಿಯಿತು. ಸ್ಮಾರ್ಟ್‌ಸಿಟಿ ಬಣ್ಣವನ್ನು ಮಳೆ ಮತ್ತೊಮ್ಮೆ ಬಯಲು ಮಾಡಿತು. ಮಳೆ ನೀರಿನಿಂದ ಸಮಸ್ಯೆಗೆ ಸಿಲುಕಿದ್ದ ಜನರ ನೆರವಿಗೆ ಖುದ್ದು ಪಾಲಿಕೆ ಆಯುಕ್ತೆ ಬಿ.ವಿ.ಅಶ್ವಿಜ ಇಳಿದಿದ್ದು ವಿಶೇಷವಾಗಿತ್ತು.

ಸದಾಶಿವನಗರ, ಕೋತಿತೋಪು, ಆರ್.ಟಿ.ನಗರದಲ್ಲಿ ಆಳುದ್ದದ ನೀರು ನಿಂತಿದ್ದು ಜನರು ಪರದಾಡಿದ್ದು ಪಾಲಿಕೆ ಆಯುಕ್ತೆ ಬಿ.ವಿ.ಅಶ್ವಿಜ ಆವರೇ ಖುದ್ದು ಕಾರ್ಯಾಚರಣೆಗೆ ಇಳಿದು ಸುಗುಮವಾಗಿ ನೀರು ಹರಿಯುವ ವ್ಯವಸ್ಥೆ ಮಾಡಿದ್ದಾರೆ.

ಭಾರಿ ಮಳೆಗೆ ಬಾರ್‌ಲೈನ್ ರಸ್ತೆಯಲ್ಲಿ ಬಿದ್ದಿದ್ದ ಮರವನ್ನು ಮಹಾನಗರ ಪಾಲಿಕೆ ಸಿಬ್ಬಂದಿ ಮಂಗಳವಾರ ಬೆಳಗ್ಗೆ ತೆರವುಗೊಳಿಸಿದರು.

ದಿಢೀರ್ ಮಳೆಗೆ ನಗರದೆಲ್ಲೆಡೆ ಜನಜೀವನ, ಸಂಚಾರ ಅಸ್ತವ್ಯಸ್ತವಾದ ಹಿನ್ನೆಲೆಯಲ್ಲಿ ಪಾಲಿಕೆ ಕಚೇರಿಗೆ ದೂರುಗಳು ಹರಿದುಬಂದವು. ಕೂಡಲೇ ಎಚ್ಚೆತ್ತುಕೊಂಡ ಪಾಲಿಕೆ ಆಯುಕ್ತೆ ಅಶ್ವಿಜ ರಾತ್ರಿ ಮಳೆಯ ನಡುವೆಯೂ ರಸ್ತೆಗಿಳಿದು ಪರಿಸ್ಥಿತಿ ಅವಲೋಕಿಸಿದರು. ಅಲ್ಲದೆ, ಮಂಗಳವಾರ ರಾಷ್ಟ್ರ್ರೀಯ ಹೆದ್ದಾರಿ, ಪಿಡಬ್ಲೂೃಡಿ ಅಧಿಕಾರಿಗಳ ಸಭೆ ನಡೆಸಿ ಕೆಳಸೇತುವೆಗಳಲ್ಲಿ ನೀರು ನಿಲ್ಲದಂತೆ ಕ್ರಮವಹಿಸಲು ಸೂಚನೆ ನೀಡಿದ್ದಾರೆ. ಅಲ್ಲದೆ, ಪಾಲಿಕೆ, ಸ್ಮಾರ್ಟ್‌ಸಿಟಿ ಇಂಜಿನಿಯರ್ಸ್‌ಗಳನ್ನು ಮಳೆ ಸಮಸ್ಯೆ ಎದುರಿಸಲು ಸನ್ನದ್ಧರಾಗಲು ಸೂಚಿಸಿದ್ದಾರೆ.

ತುರುವೇಕೆರೆ ತಾಲೂಕು ಅಮ್ಮಸಂದ್ರದಲ್ಲಿ ಅತೀ ಹೆಚ್ಚು 1.05 ಸೆಂ.ಮೀ., ಮಳೆಯಾಗಿದೆ. ಬೋರನಕಣಿವೆ, ಮಾವತ್ತೂರು, ನೊಣವಿನಕೆರೆ, ಹೆಬ್ಬೂರು ಸೇರಿದಂತೆ ಎಲ್ಲೆಡೆಯೂ ಧಾರಾಕಾರವಾಗಿ ಮಳೆ ಸುರಿದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net