ಗಾಳಿಗೆ ಹಾರಿದ ಶಾಲಾ ಮಹಡಿ

ksd_belinja school_rain
ಗಾಳಿಗೆ ಹಾನಿಗೀಡಾದ ಬೆಳಿಂಜ ಎಎಲ್‌ಪಿ ಶಾಲೆಗೆ ಜಿಲ್ಲಾಧಿಕಾರಿ ಕೆ.ಇನ್ಬಾಶೇಖರ್ ನೇತೃತ್ವದ ಅಧಿಕಾರಿಗಳ ತಂಡ ಭೇಟಿ ನೀಡಿತು.
Published on

ಕಾಸರಗೋಡು: ಶನಿವಾರ ತಗ್ಗಿದ್ದ ಮಳೆ ಭಾನುವಾರ ಮತ್ತೆ ಬಿರುಸುಪಡೆದುಕೊಂಡಿದ್ದು, ವಿವಿಧೆಡೆ ಹಾನಿ ಸಂಭವಿಸಿದೆ. ಬಿರುಸಿನ ಗಾಳಿಗೆ ಕುಂಬ್ಡಾಜೆ ಪಂಚಾಯಿತಿಯ ಬೆಳಿಂಜ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆಯ ಟಿನ್‌ಶೀಟ್ ಹಾಗೂ ಹೆಂಚು ಹಾಸಿನ ಮಹಡಿ ಕುಸಿದಿದೆ. ಶಾಲೆಗೆ ರಜೆಯಾಗಿದ್ದ ಹಿನ್ನೆಲೆಯಲ್ಲಿ ಸಂಭಾವ್ಯ ದುರಂತ ತಪ್ಪಿದೆ.

ಭಾನುವಾರ ಬೆಳಗ್ಗೆ ಬೀಸಿದ ಗಾಳಿಯಿಂದ ಹಾನಿಗೀಡಾದ ಕುಂಬ್ಡಾಜೆ ಪಂಚಾಯಿತಿ ಬೆಳಿಂಜ ಎಎಲ್‌ಪಿ ಶಾಲೆಗೆ ಜಿಲ್ಲಾಧಿಕಾರಿ ಕೆ. ಇನ್ಬಾಶೇಖರ್ ನೇತೃತ್ವದ ಅಧಿಕಾರಿಗಳ ತಂಡ ಭೇಟಿ ನೀಡಿತು. ಹೆಂಚು ಹಾಸಿನ ಕಟ್ಟಡದ ಮೇಲ್ಛಾವಣಿ ಮತ್ತು ಶೀಟ್ ಅಳವಡಿಸಿದ ಒಂದು ಪಾರ್ಶ್ವ ಕುಸಿದಿದೆ. ಜು.22ರಂದು ಬೆಳಿಂಜ ಎಎಲ್‌ಪಿ ಶಾಲೆಗೆ ರಜೆ ಘೋಷಿಸಿದ ಜಿಲ್ಲಾಧಿಕಾರಿ, ದುರಸ್ತಿ ಕಾರ್ಯಗಳನ್ನು ಒಂದು ವಾರದೊಳಗೆ ಪೂರ್ತಿಗೊಳಿಸಲು ಹಾಗೂ ಈ ಕಾಲಾವಧಿಯಲ್ಲಿ ತರಗತಿ ನಷ್ಟಗೊಳ್ಳದಂತೆ ಶಾಲೆ ನಡೆಸಲು ಅನುಕೂಲವಾಗುವಂತೆ ಶಾಲಾ ರಕ್ಷಕ-ಶಿಕ್ಷಕ ಸಂಘದ ಸಭೆಯನ್ನು ಜು.22ರಂದು ನಡೆಸಿ ತೀರ್ಮಾನ ಕೈಗೊಳ್ಳುವಂತೆಯೂ ಸೂಚಿಸಿದರು. ಲೋಕೋಪಯೋಗಿ ಇಲಾಖೆ ಕಟ್ಟಡ ವಿಭಾಗ ಸಹಾಯಕ ಇಂಜಿನಿಯರ್ ಶ್ರೀನಿತ್ ಕುಮಾರ್ ದುರಸ್ತಿ ಕಾರ್ಯ ಶೀಘ್ರ ನಡೆಸಿಕೊಡುವ ಬಗ್ಗೆ ಮಾಹಿತಿ ನೀಡಿದರು.

ಕುಂಬ್ಡಾಜೆ ಗ್ರಾಪಂ ಅಧ್ಯಕ್ಷ ಹಮೀದ್ ಪೊಸೊಳಿಗೆ, ಕುಂಬ್ಡಾಜೆ ಗ್ರೂಪ್ ಗ್ರಾಮಾಧಿಕಾರಿ ಎಸ್.ಲೀಲಾ, ಕುಂಬಳೆ ಉಪಜಿಲ್ಲಾ ಶಿಕ್ಷಣಾಧಿಕಾರಿ ಶಶಿಧರ, ಶಾಲೆ ಮುಖ್ಯಶಿಕ್ಷಕ ಕೆ.ರವೀಂದ್ರನ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net