ರಾಜ್ಯದಲ್ಲಿ ಮುಂದಿನ 2 ತಿಂಗಳ ಮಳೆ ಕೊರತೆ: ಐಎಂಡಿ ಮುನ್ಸೂಚನೆ ವರದಿಯಲ್ಲಿ ಬಹಿರಂಗ

rain (2)
Published on

ಬೆಂಗಳೂರು:ರಾಜ್ಯದಲ್ಲಿ ಅರ್ಧ ಅವಧಿ ಮುಂಗಾರು ಮುಗಿಯುತ್ತಿರುವ ನಡುವೆಯೂ ರೈತರ ಸಮುದಾಯಕ್ಕೆ ಕಹಿ ಸುದ್ದಿಯೊಂದು ಹೊರಬಿದ್ದಿದೆ.

ರಾಜ್ಯದ ಹಲವು ಜಿಲ್ಲೆಗಳಲ್ಲಿ ಆಗಸ್ಟ್ ಮತ್ತು ಸೆಪ್ಟೆಂಬರ್‌ನಲ್ಲಿ ಮಳೆ ಕೊರತೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ(ಐಎಂಡಿ) ಬಿಡುಗಡೆ ಮಾಡಿರುವ ಮುಂದಿನ 2 ತಿಂಗಳ ಮಳೆ ಮುನ್ಸೂಚನೆ ವರದಿಯಲ್ಲಿ ಇದು ಬಹಿರಂಗವಾಗಿದೆ.

ಇದರಿಂದಾಗಿ ಬಿತ್ತನೆ ಬೀಜ ಬಿತ್ತಿ ಮೊಳಕೆಯೊಡೆದು ಸಲುಗೆ ಬರುತ್ತಿರುವ ಸಂದರ್ಭದಲ್ಲಿ ಮಳೆ ಅಭಾವ ಎದುರಾದರೆ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕುವ ಆತಂಕ ಇದೆ. ವಾಡಿಕೆಗಿಂತ ಮುನ್ನ ಮಾನ್ಸೂನ್ ಆಗಮಿಸಿ ಜೂನ್ ಮತ್ತು ಜುಲೈನಲ್ಲಿ ಕರಾವಳಿ, ಮಲೆನಾಡು ಸೇರಿ ರಾಜ್ಯದ ಇತರೆ ಜಿಲ್ಲೆಗಳಲ್ಲಿ ಉತ್ತಮವಾಗಿ ಮಳೆ ಸುರಿದ ಪರಿಣಾಮ ಪ್ರಸ್ತುತ ಜಲಾಶಯಗಳು, ನದಿಗಳು, ಕೆರೆ,ಗುಂಟೆಗಳು ಭರ್ತಿಯಾಗಿವೆ. ಆದರೆ, ಮುಂದಿನ 2 ತಿಂಗಳ ಮಳೆ ಕುಂಠಿತಗೊಂಡರೆ ಇವೆಲ್ಲಾ ಬತ್ತಿಹೋಗುವ ಆತಂಕವೂ ಕಾಡುತ್ತಿದೆ.

ಉತ್ತಮ ಮುಂಗಾರು ಹಿನ್ನೆಲೆಯಲ್ಲಿ ಜು.25ರವರೆಗೆ ರಾಜ್ಯಾದ್ಯಂತ 63.19 ಲಕ್ಷ ಹೆಕ್ಟೇರ್ ಪ್ರದೇಶಗಳಲ್ಲಿ ಬಿತ್ತನೆಯಾಗಿದೆ. ಭತ್ತ, ಜೋಳ, ಮೆಕ್ಕೆಜೋಳ, ರಾಗಿ, ಸಜ್ಜೆ, ಗೋಧಿ, ತೃಣಧಾನ್ಯಗಳು 22.92 ಲಕ್ಷ ಹೆಕ್ಟೇರ್ ಪ್ರದೇಶಗಳಲ್ಲಿ, ತೊಗರಿ, ಕಡಲೆ, ಹುರುಳಿ, ಉದ್ದು, ಹೆಸರು, ಅಲಸಂಧೆ, ಅವರೆ, ಮಟಕಿ ಸೇರಿ ಒಟ್ಟು ದ್ವಿದಳ ಆಹಾರ ಧಾನ್ಯಗಳು 41.76 ಲಕ್ಷ ಹೆಕ್ಟೇರ್ ಪ್ರದೇಶಗಳಲ್ಲಿ, ಶೇಂಗಾ, ಎಳ್ಳು, ಸೂರ್ಯಕಾಂತಿ, ಹರಳು, ಹುಚ್ಚೆಳ್ಳು, ಸಾಸಿವೆ ಸೋಯಾ ಅವರೆ, ಅಗಸೆಯನ್ನು 6.40 ಲಕ್ಷ ಹೆಕ್ಟೇರ್ ಪ್ರದೇಶಗಳಲ್ಲಿ ಹಾಗೂ ಹತ್ತಿ, ಕಬ್ಬು ಮತ್ತು ತಂಬಾಕು ಬೆಳೆಗಳನ್ನು ಸಾವಿರಾರು ಹೆಕ್ಟೇರ್ ಪ್ರದೇಶಗಳಲ್ಲಿ ಬಿತ್ತನೆ ಮಾಡಲಾಗಿದೆ. ಆಗಸ್ಟ್ ಮತ್ತು ಸೆಪ್ಟೆಂಬರ್‌ನಲ್ಲಿ ಉತ್ತಮ ಮಳೆಯಾದರೆ ಮಾತ್ರ ಈ ಎಲ್ಲ ಬೆಳೆಗಳು ಸಲಿಗೆ ಬರಲಿವೆ. ಇಲ್ಲವಾದರೆ, ಬತ್ತಿ ಹೋದರೆ ರೈತರಿಗೆ ತೊಂದರೆಯಾಗಲಿದೆ.

ಯಾವ್ಯಾವ ಜಿಲ್ಲೆಗಳಲ್ಲಿ ಮಳೆ ಕೊರತೆ?

ಜೂನ್ ಮತ್ತು ಜುಲೈ ಅವಧಿಯಲ್ಲಿ ವಾಡಿಕೆಗಿಂತ ಅಧಿಕವಾಗಿ ಸುರಿದಿರುವ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡದಲ್ಲಿ ಮುಂದಿನ 2 ತಿಂಗಳು ಮಳೆ ಅಭಾವ ಉಂಟಾಗುವ ಸಾಧ್ಯತೆ ಹೆಚ್ಚಿದೆ ಎಂದು ಐಎಂಡಿ ವರದಿಯಿಂದ ತಿಳಿದುಬಂದಿದೆ. ಹಿಂದಿನ 2 ತಿಂಗಳ ಅವಧಿಯಲ್ಲಿ ವಾಡಿಗೆಗಿಂತ ತುಸು ಕಡಿಮೆ ಮಳೆಯಾಗಿರುವ ಶಿವಮೊಗ್ಗ, ಕೊಡಗು, ಚಿಕ್ಕಮಗಳೂರು, ಹಾಸನದಲ್ಲಿಯೂ ಆಗಸ್ಟ್ ಮತ್ತು ಸೆಪ್ಟೆಂಬರ್ ಅವಧಿಯಲ್ಲಿ ಮಳೆ ಅಭಾವ ಕಾಡಲಿದೆ. ಬೆಂಗಳೂರು ನಗರ, ಬೆಂ. ಗ್ರಾಮಾಂತರ, ರಾಮನಗರ, ಚಿಕ್ಕಬಳ್ಳಾಪುರ, ತುಮಕೂರು, ಕೋಲಾರ, ಮಂಡ್ಯ, ಮೈಸೂರು, ಚಾಮರಾಜನಗರ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ, ವಿಜಯನಗರ, ಚಿತ್ರದುರ್ಗ ಹಾಗೂ ದಾವಣಗೆರೆಯಲ್ಲಿ ಆಗಸ್ಟ್‌ನಲ್ಲಿ ಮಳೆ ಕುಂಠಿತವಾದರೆ, ಸೆಪ್ಟೆಂಬರ್‌ನಲ್ಲಿ ವಾಡಿಕೆ ಅಥವಾ ವಾಡಿಕೆಗಿಂತ ತುಸು ಅಧಿಕವಾಗಿ ಮಳೆಯಾಗುವ ಸಂಭವ ಇದೆ.

ಸರ್ಕಾರ ಎಚ್ಚೆತ್ತುಕೊಳ್ಳಲಿ

ಕರಾವಳಿ,ಮಲೆನಾಡು ಹೊರತುಪಡಿಸಿ ಉಳಿದ ಜಿಲ್ಲೆಗಳಲ್ಲಿ ಈಗಾಗಲೇ ಮಳೆಕೊರತೆ ಎದುರಿಸುತ್ತಿವೆ. ಮುಂದಿನ 2 ತಿಂಗಳು ಆ ಜಿಲ್ಲೆಗಳಲ್ಲಿ ಮಳೆ ಬಾರದಿದ್ದರೆ ಇನ್ನಷ್ಟು ಸಂಕಷ್ಟ ಎದುರಾಗುವುದರಿಂದ ಸರ್ಕಾರ ಈಗಿಂದಲ್ಲೇ ಸಿದ್ಧತೆ ಮಾಡಿಕೊಳ್ಳಬೇಕಿದೆ. ಜಲಾಶಯಗಳು ಬತ್ತಿ ಹೋಗುವುದರಿಂದ ನೆರೆ ರಾಜ್ಯಗಳಿಗೆ ಜಲಾಶಯಗಳಿಂದ ನೀರು ಬಿಡುವುದನ್ನು ತಕ್ಷಣ ನಿಲ್ಲಿಸಬೇಕು. ಜಲಮೂಲಗಳು ಆವಿಯಾಗದಂತೆ ಕ್ರಮವಾಗಬೇಕು. ಈ ಬಗ್ಗೆ ಅಧಿಕಾರಿಗಳ ಜೊತೆ ಸಭೆ ನಡೆಸಿ ಕಾರ್ಯರೂಪಕ್ಕೆ ತರುವ ಕೆಲಸವನ್ನು ಸರ್ಕಾರ ಮಾಡಬೇಕಿದೆ.

ಮುಂದಿನ 2 ತಿಂಗಳು ದೇಶಾದ್ಯಂತ ಮಳೆ ಬೀಳುವ ಕುರಿತು ಐಎಂಡಿ, ಮಳೆ ಮುನ್ಸೂಚನೆ ವರದಿಯನ್ನು ಬಿಡುಗಡೆ ಮಾಡಿದೆ. ಆಗಸ್ಟ್ ಮತ್ತು ಸೆಪ್ಟೆಂಬರ್‌ನಲ್ಲಿ ಘಟ್ಟಪ್ರದೇಶಗಳಲ್ಲಿ ತೀವ್ರ ಮಳೆ ಅಭಾವ ಉಂಟಾಗುವ ಸಂಭವ ಇದೆ. ದಕ್ಷಿಣ ಕರ್ನಾಟಕ ಮತ್ತು ಉತ್ತರ ಕರ್ನಾಟಕದಲ್ಲಿ ಆಗಸ್ಟ್‌ನಲ್ಲಿ ಮಳೆ ಕೊರತೆಯಾದರೆ, ಸೆಪ್ಟೆಂಬರ್‌ನಲ್ಲಿ ವಾಡಿಕೆಯಷ್ಟೇ ಬೀಳಲಿದೆ.

ಶ್ರೀನಿವಾಸರೆಡ್ಡಿ, ಹಿರಿಯ ಹವಾಮಾನ ತಜ್ಞ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net