ಅಕಾಲಿಕ ಮಳೆ ಅಪಾರ ಹಾನಿ 6 ತಾಸು ಕೈಕೊಟ್ಟ ಕರೆಂಟ್ : ವಿದ್ಯುತ್ ತಂತಿ ಮೇಲೆ ಉರುಳಿದ ಮರಗಳು

Published on

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ

ತಾಲೂಕಿನಲ್ಲಿ ಬುಧವಾರ ಗಾಳಿಯೊಂದಿಗೆ ಸುರಿದ ವಷರ್ದ ಪ್ರಥಮ ಮಳೆಗೆ 131 ವಿದ್ಯುತ್ ಕಂಬಗಳು ಧರಾಶಾಯಿಯಾಗಿದ್ದು, ಹೆಚ್ಚಿನ ಕಡೆಗಳಲ್ಲಿ 6 ತಾಸು ವಿದ್ಯುತ್ ಪೂರೈಕೆ ಸ್ಥಗಿತಗೊಂಡಿತ್ತು.

ಬೆಳ್ತಂಗಡಿ ಮೆಸ್ಕಾಂ ಉಪ ವಿಭಾಗದ ಹಲವು ಗ್ರಾಮಗಳಲ್ಲಿ ಎಲ್‌ಟಿ ಮತ್ತು ಎಚ್‌ಟಿ ವಿದ್ಯುತ್ ಕಂಬಗಳು ಮುರಿದುಬಿದ್ದಿವೆ. ವಿದ್ಯುತ್ ಲೈನ್ ಮೇಲೆ ಮರಗಳು ಬಿದ್ದ ಪರಿಣಾಮ ಪರಿವರ್ತಕಗಳು ಹಾನಿಗೊಳಗಾಗಿವೆ.

ತಾಲೂಕಿನ ಹೆಚ್ಚಿನ ಕಡೆಗಳಲ್ಲಿ ಬುಧವಾರ ರಾತ್ರಿ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿತ್ತು. ಕಂಬಗಳು ಮುರಿದ ಸ್ಥಳಗಳಲ್ಲಿ ಮೆಸ್ಕಾಂ ವತಿಯಿಂದ ಕಾಮಗಾರಿ ನಡೆಯುತ್ತಿದೆ. ಗಾಳಿ ಮಳೆಗೆ ತಾಲೂಕಿನಲ್ಲಿ ಸಾವಿರಾರು ಅಡಕೆ, ರಬ್ಬರ್ ಗಿಡಗಳು ಮುರಿದುಬಿದ್ದಿವೆ.

ಕೊಯ್ಯೂರಿನಲ್ಲಿ 6 ಮನೆಗಳಿಗೆ ಹಾನಿ

ಕೊಯ್ಯೂರು ಗ್ರಾಮದಲ್ಲಿ ಬಿರುಗಾಳಿಯಿಂದ ಆರು ಮನೆಗಳಿಗೆ ಹಾನಿ ಸಂಭವಿಸಿದೆ. ನೀಲಮ್ಮ, ಶಾಂತಾ, ಜಯಂತಿ, ಸಂಜೀವಿ, ಸರೋಜಿನಿ ಹಾಗೂ ಮೋಹಿನಿ ಆಚಾರ್ಯ ಎಂಬುವರ ಮನೆಗಳು ಗಾಳಿ ಮಳೆಯಿಂದ ಹೆಚ್ಚಿನ ಹಾನಿಗೆ ಒಳಗಾಗಿವೆ. ವಿಎ ಸಿದ್ದೇಶ್ ತಂಡ ಹಾನಿಗೊಳಗಾದ ಮನೆಗಳಿಗೆ ಭೇಟಿ ನೀಡಿ ವಿವರ ಸಂಗ್ರಹಿಸಿದೆ.

ಹೊಸಂಗಡಿ ಗ್ರಾಮದ ಸುನ್ನಾ ಸಾಹೇಬ್, ಸುಂದರಿ, ಬದ್ರುನ್ನಿಸ ಅವರ ಮನೆಗಳ ಮೇಲೆ ಮರಗಳು ಉರುಳಿಬಿದ್ದು ಹಾನಿ ಉಂಟಾಗಿದೆ. ವೇಣೂರಿನ ಹಾಜಿರಾ ಎಂಬುವರ ಮನೆಗೆ, ಮರೋಡಿ ಗ್ರಾಮದ ಅಂಗಡಿಬೆಟ್ಟು ಲಲಿತಾ ಅವರ ಮನೆಗಳ ಮೇಲೆ ಮರಬಿದ್ದು, ಕುವೆಟ್ಟು ಗ್ರಾಮದ ಸುದೆಕ್ಕಾರು ಎಂಬಲ್ಲಿ ಸರೋಜಾ ಎಂಬುವರ ಮನೆ ಮೇಲೆ ತೆಂಗಿನ ಮರ ಬಿದ್ದು ಹಾನಿ ಸಂಭವಿಸಿದೆ. ಇಂದಬೆಟ್ಟು ಗ್ರಾಮದ ಕುತ್ರಬೆಟ್ಟು ಎಂಬಲ್ಲಿ ಶುಭೋದಯ ಎಂಬುವರ ಮನೆಗೆ, ಪಡಂಗಡಿ ಪೊಯ್ಯಗುಡ್ಡೆ ಎಂಬಲ್ಲಿ ಸುಜಾತಾ, ಅಬುಸಾ, ತಸ್ಮೀನಾ, ಲಾಯಿಲ ಗ್ರಾಮದ ವಸಂತ ಜೋಗಿ, ಬಡೆಕೋಡಿಯ ಲಕ್ಷ್ಮೀ ಅವರ ಮನೆಗಳಿಗೆ ಬಜಿರೆಯ ಭಜನಾ ಮಂದಿರಕ್ಕೆ, ಕುವೆಟ್ಟಿನ ಪಿ.ಕೆ.ಆಲಿಯವರ ಮನೆಗೆ, ಕುಕ್ಕೇಡಿ ಗ್ರಾಮದ ಗೋಳಿಅಂಗಡಿ ಅಂಗನವಾಡಿಗೆ ಹಾಗೂ ಇಲ್ಲಿನ ಫೌಜಿಯಾ ಎಂಬುವರ ಮನೆಗಳಿಗೆ ಗಾಳಿ, ಮಳೆಯಿಂದ ಹಾನಿ ಸಂಭವಿಸಿದೆ.

ಹಲವು ಮನೆಗಳಿಗೆ ಹಾನಿ

ಮರೋಡಿ ಗ್ರಾಮದ ಅಂಗಡಿಬೆಟ್ಟು ಎಂಬಲ್ಲಿ ಲಲಿತಾ ಹಾಗೂ ಪಾಂಡುರಂಗ ದೇವಾಡಿಗ ಎಂಬುವರ ಮನೆಯ ಮೇಲೆ ಮರ ಬಿದ್ದು ತೀವ್ರ ಹಾನಿಯುಂಟಾಗಿದೆ. ಹೊಸಂಗಡಿ ಗ್ರಾಪಂ ವ್ಯಾಪ್ತಿಯಲ್ಲಿ ಸುಂದರಿ ಹಾಗೂ ಬೂದ ಎಂಬುವರ ಮನೆಗೆ ಭಾಗಶಃ ಹಾನಿಯಾಗಿದೆ. ಸುನ್ನಾ ಸಾಹೇಬ್ ಹಾಗೂ ಅಬ್ಬಾಸ್ ಸಾಹೇಬ್ ಎಂಬುವರ ಮನೆಯ ಮೇಲೆ ಮರ ಬಿದ್ದು ಭಾಗಶಃ ಹಾನಿಯಾಗಿದೆ.

ಪಾರ್ದಬೆಟ್ಟು ಎಂಬಲ್ಲಿ ಜಿನ್ನಪ್ಪ ಪೂಜಾರಿ ಹಾಗೂ ಐತು ಪೂಜಾರಿ ಎಂಬುವರ ಮನೆಗೆ ಭಾಗಶಃ ಹಾನಿಯಾಗಿದೆ. ಬದ್ರುನ್ನೀಸ ಹಾಗೂ ರಾಜ ಸಾಹೇಬ್ ಎಂಬುವರ ಮನೆ ಭಾಗಶಃ ಹಾನಿಯುಂಟಾಗಿದೆ. ಕುವೆಟ್ಟು ಗ್ರಾಮದ ಸುದೆಕ್ಕರು ಕಡಂಬುವಿನಲ್ಲಿ ಸರೋಜ ಎಂಬುವರ ಮನೆಯ ಮೇಲೆ ತೆಂಗಿನ ಮರ ಬಿದ್ದು ಹಾನಿಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net