ಉಕ್ಕಿ ಹರಿದ ಹಳ್ಳಕೊಳ್ಳ, ಜನಜೀವನ ಅಸ್ತವ್ಯಸ್ತ

male 1
ಭಾರಿ ಮಳೆಗೆ ಬಿದ್ದ ಮರಗಳನ್ನು ಮಂಡೆಕೋಲಿನ ವಿಪತ್ತು ನಿರ್ವಹಣಾ ತಂಡ ತೆರವುಗೊಳಿಸಿತು.
Published on

ಸುಳ್ಯ: ಕಳೆದೆರಡು ದಿನಗಳಿಂದ ತಾಲೂಕಿನಾದ್ಯಂತ ವಿಪರೀತ ಮಳೆಯಾಗುತ್ತಿದ್ದು ಜನಜೀವನ ಅಸ್ತವ್ಯಸ್ತಗೊಂಡಿದೆ. ಕಲ್ಲುಗುಂಡಿ ದಂಡಕಜೆಯ ಮಧುಸೂದನ ಎಂಬುವರ ಮನೆಯ ಹಿಂಬದಿಯಲ್ಲಿ ಗೋಡೆ ಕುಸಿದಿದೆ. ಮನೆಯವರು ಅದೃಷ್ಟವಶಾತ್ ಪಾರಾಗಿದ್ದಾರೆ.

ಕನಕಮಜಲು ಗ್ರಾಮದ ಕಣಜಾಲು ಎಂಬಲ್ಲಿ ಅಡಕೆ, ತೆಂಗು ಹಾಗೂ ಬಾಳೆ ತೋಟಗಳು ಜಲಾವೃತವಾಗಿದ್ದವು. ಕಣಜಾಲಿನಲ್ಲಿ ತೀರ್ಥರಾಮ ಎಂಬುವರ ಕೆರೆಯ ಬದಿಯಲ್ಲಿ ಮಣ್ಣು ಕುಸಿ ಕೆರೆಯ ಬದಿಯಲ್ಲಿದ್ದ ಹಲಸಿನ ಮರ ಬಿದ್ದು, ಅಡಕೆ ಮರಗಳಿಗೆ ಹಾನಿಯಾಗಿದೆ. ಈ ಕೆರೆಯ ಪಕ್ಕದಲ್ಲಿ ಕಣಜಾಲಿನ ಮೂಲಕ ಸಬ್ಬೆಜಿ-ಬಾಳೆಹಿತ್ತಿಲು ಸಂಪರ್ಕಿಸುವ ಕಾಲುದಾರಿಯೊಂದಿದ್ದು, ಬಿರುಕು ಬಿಟ್ಟು ಆತಂಕ ಸೃಷ್ಟಿಸಿದೆ.

ಮಂಡೆಕೋಲು ಗ್ರಾಮದ ಬೊಳುಗಲ್ಲು ಹಾಗೂ ಕನ್ಯಾನ ಭಾಗದಲ್ಲಿ ಸೋಮವಾರ ರಾತ್ರಿ ಹಲವು ಮರಗಳು ಧರೆಗುರುಳಿವೆ. ಕನ್ಯಾನ ಭಜನಾ ಮಂದಿರದ ಬಳಿ ಬೃಹತ್ ಗಾತ್ರದ ಮರ ಮಂಡೆಕೋಲು-ಅಡೂರು ರಸ್ತೆಗೆ ಬಿದ್ದು ಕೆಲ ಕಾಲ ಅಂತರ್‌ರಾಜ್ಯ ಸಂಚಾರ ಸ್ಥಗಿತಗೊಂಡಿತ್ತು. ಇದೇ ಭಾಗದ ಬೊಳುಗಲ್ಲು ರಂಗ ಎಂಬುವರ ಅಂಗಡಿ ಮೇಲೆ ಮರ ಬಿದ್ದು ಹಾನಿ ಉಂಟಾಗಿದೆ.

ಅಜ್ಜಾವರ ಗ್ರಾಮದ ಮಾವಿನಪಳ್ಳ ಮೊನ್ನಿ ಎಂಬ ಮಹಿಳೆಯ ಮನೆಯ ಮೇಲೆ ಮರವೊಂದು ಮುರಿದು ಬಿದ್ದು ಹೆಂಚುಗಳು ಪುಡಿಯಾಗಿವೆ. ಮರ ಬಿದ್ದ ರಭಸಕ್ಕೆ ಗೋಡೆಯೂ ಬಿರುಕುಬಿಟ್ಟಿದೆ.

ಬೆಳ್ಳಾರೆ ಸನಿಹ ಗೌರಿ ಹೊಳೆ ತುಂಬಿ ಹರಿದು ನೀರು ರಸ್ತೆಗೆ ನುಗ್ಗಿ ಪೆರುವಾಜೆ-ಸವಣೂರು ಸಂಪರ್ಕ ರಸ್ತೆ ಕಡಿತಗೊಂಡಿದೆ. ಪೆರುವಾಜೆ ಜಲದುರ್ಗಾ ದೇವಿ ದೇವಸ್ಥಾನದ ಪ್ರಾಂಗಣದಲ್ಲಿ ನೀರು ತುಂಬಿದೆ.

ಬದಲಿ ಮಾರ್ಗ ಸೂಚನೆ

ಸಂಪಾಜೆ ಗ್ರಾಮದ ಪೇರಡ್ಕ ಎಂಬಲ್ಲಿ ಸೇತುವೆ ಮುಳುಗಿದ್ದು ಬದಲಿ ಮಾರ್ಗ ಸೂಚಿಸಲಾಗಿದೆ. ಗೂನಡ್ಕದಿಂದ ದರ್ಖಾಸು ಪೇರಡ್ಕ ಸಂಪರ್ಕಿಸುವ ರಸ್ತೆಯ ಪೇರಡ್ಕ ಮುಳುಗು ಸೇತುವೆ ಮುಳುಗಡೆಯಾಗಿದ್ದು ಬದಲಿ ಮಾರ್ಗ ಸೂಚಿಸಿ ಬ್ಯಾನರ್ ಮತ್ತು ಬ್ಯಾರಿಕೇಡ್ ಆಳವಡಿಸಲಾಗಿದೆ. ಅಜ್ಜಾವರ ಗ್ರಾಮದ ಕಾಟಿಪಳ್ಳದಲ್ಲಿ ಪಯಸ್ವಿನಿ ತುಂಬಿ ಹರಿದು ಪಕ್ಕದಲ್ಲಿನ ತೋಟಗಳಿಗೆ ನೀರು ನುಗ್ಗಿದೆ. ಕಾಟಿಪಳ್ಳ ನಿವಾಸಿಗಳಾದ ವಿಶ್ವನಾಥ ರಾವ್, ರಾಮ್ ಪ್ರಸಾದ್ ಹಾಗೂ ದಿನೇಶ್ ಎಂಬುವರ ತೋಟಗಳಿಗೆ ನೀರು ನುಗ್ಗಿದೆ. ಸನಿಹದ ಮನೆಗಳಿಗೂ ನೀರು ನುಗ್ಗಿ ಬರುವ ಭೀತಿ ಉಂಟಾಗಿದೆ.

ಕನ್ಯಾನದಲ್ಲಿ ರಸ್ತೆಗೆ ಬಿದ್ದಿರುವ ಮರ.
ಕನ್ಯಾನದಲ್ಲಿ ರಸ್ತೆಗೆ ಬಿದ್ದಿರುವ ಮರ.
ಬೊಳುಗಲ್ಲಿನಲ್ಲಿ ರಸ್ತೆಗೆ ಉರುಳಿ ಬಿದ್ದಿರುವ ವಿದ್ಯುತ್ ಕಂಬ.
ಬೊಳುಗಲ್ಲಿನಲ್ಲಿ ರಸ್ತೆಗೆ ಉರುಳಿ ಬಿದ್ದಿರುವ ವಿದ್ಯುತ್ ಕಂಬ.
ಅಜ್ಜಾವರ ಗ್ರಾಮದ ಮಾವಿನಪಳ್ಳ ಎಂಬಲ್ಲಿ ಮಹಿಳೆಯೋರ್ವರ ಮನೆಗೆ ಮರ ಬಿದ್ದು ಹಾನಿಯಾಗಿರುವುದು.
ಅಜ್ಜಾವರ ಗ್ರಾಮದ ಮಾವಿನಪಳ್ಳ ಎಂಬಲ್ಲಿ ಮಹಿಳೆಯೋರ್ವರ ಮನೆಗೆ ಮರ ಬಿದ್ದು ಹಾನಿಯಾಗಿರುವುದು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net