

ಹಾಸನ: ಹಾಸನ ಜಿಲ್ಲೆಯ ವಿವಿಧ ಭಾಗದಲ್ಲಿ ಮಳೆ ಆರ್ಭಟ ಸೋಮವಾರ ಮುಂದುವರಿಯಿತು. ಇದರಿಂದ ಕೆಲವೆಡೆ ಜನ ಜೀವನ ಅಸ್ತವ್ಯಸ್ತವಾಗಿತ್ತು.
ಹಾನಸ ನಗರದಲ್ಲಿ ತುಂತುರು ಮಳೆಯಾಯಿತು. ಕೆಲವೆಡೆ ರಸ್ತೆ ಮೇಲೆ ಕೊಳಚೆ ನೀರು ಹರಿದಿದ್ದರಿಂದ ಪಾದಚಾರಿಗಳು ಸಮಸ್ಯೆ ಎದುರಿಸುವಂತಾಯಿತು.
ಭಾರಿ ಮಳೆ, ಗಾಳಿಗೆ ಸಕಲೇಶಪುರ ತಾಲೂಕಿನ ಹೊಸೂರು ಗ್ರಾಮದ ಗಂಗಮ್ಮ ಹಾಗೂ ಗೊದ್ದು ಗ್ರಾಮದ ಎಚ್.ಎನ್.ಸಣ್ಣಪ್ಪಗೌಡ ಎಂಬುವರ ಮನೆಯ ಗೋಡೆ, ಛಾವಣಿ ಕುಸಿದಿದೆ. ಎಚ್.ಎನ್.ಸಣ್ಣಪ್ಪಗೌಡ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.
ಮುನ್ನೆಚ್ಚರಿಕಾ ಕ್ರಮವಾಗಿ ಕೆಲವು ಭಾಗದಲ್ಲಿ ರಜೆ ಘೋಷಿಸಲಾಗಿತ್ತು. ವಿವಿಧ ತಾಲೂಕುಗಳಲ್ಲಿ ನಿರಂತರ ಸುರಿದ ಮಳೆಗೆ ಜನರು ಹೈರಾಣಾದರು. ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ತೆರಳುವವರು, ದ್ವಿಚಕ್ರ ವಾಹನ ಸವಾರರು, ಜಮೀನಿನಲ್ಲಿ ರೈತರು ಪರದಾಡಿದರು.
6 ಕ್ರಸ್ಟ್‌ಗೇಟ್‌ಗಳಿಂದ ನೀರು ಬಿಡುಗಡೆ: ಜಿಲ್ಲೆಯಲ್ಲಿ ನಿರಂತರ ಮಳೆ ಸುರಿಯುತ್ತಿರುವುದರಿಂದ ಹೇಮಾವತಿ ಜಲಾಶಯದ ಒಳಹರಿವಿನಲ್ಲಿ ಭಾರಿ ಏರಿಕೆಯಾಗಿದೆ. ಜಲಶಾಯಕ್ಕೆ 32,087 ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ಆರು ಕ್ರಸ್ಟ್ ಗೇಟ್‌ಗಳ ಮುಖಾಂತರ 32, 925 ಕ್ಯೂಸೆಕ್ ನೀರನ್ನು ನದಿಗೆ ಹರಿಬಿಡಲಾಗಿದೆ.