

ಬೆಂಗಳೂರು: ರಾಜಧಾನಿಯಲ್ಲಿ ಗುರುವಾರವೂ ವರುಣಾರ್ಭಟ ಮುಂದುವರಿಯಿತು. ಸಂಜೆ ಸುರಿದ ಧಾರಾಕಾರ ಮಳೆಗೆ ಜನರು ಹೈರಾಣಾದರು.
ತಗ್ಗುಪ್ರದೇಶಗಳಲ್ಲಿ ನೀರು ನುಗ್ಗಿ ಅವಾಂತರ ಸೃಷ್ಟಿಯಾಯಿತು. ಅಂಡರ್‌ಪಾಸ್ ಮತ್ತು ಪ್ರಮುಖ ಜಂಕ್ಷನ್ ಸೇರಿ ಮುಖ್ಯ ರಸ್ತೆಗಳಲ್ಲಿ ನೀರು ನಿಂತ ಪರಿಣಾಮ ವಾಹನಗಳು ನಿಧಾನಗತಿಯಲ್ಲಿ ಸಾಗಿದವು. ಕೆಲವೆಡೆ ವಾಹನ ದಟ್ಟಣೆ ಉಂಟಾಯಿತು. ಸುಗಮವಾಗಿ ವಾಹನಗಳನ್ನು ಚಲಿಸಲು ಟ್ರಾಫಿಕ್ ಪೊಲೀಸರು ಅನುವು ಮಾಡಿಕೊಟ್ಟರು. ಮೂರು ದಿನಗಳಿಂದ ನಗರದಲ್ಲಿ ಮುಂಗಾರು ಮಳೆ ಚುರುಕು ಪಡೆದ ಪರಿಣಾಮ ಸಂಜೆ ಮತ್ತು ರಾತ್ರಿ ವೇಳೆ ಮಳೆಯಾಗುತ್ತಿದೆ. ಇದರಿಂದಾಗಿ ಮ್ಯಾನ್‌ಹೋಲ್‌ಗಳು ಉಕ್ಕಿದ ಪರಿಣಾಮ ರಸ್ತೆಗಳ ಮೇಲೆ ಕೊಳಚೆ ನೀರು ಹರಿಯಿತು. ಸಂಜೆ ಉದ್ಯಾನದಲ್ಲಿ ವಾಕಿಂಗ್ ಮಾಡುತ್ತಿದ್ದ ವಾಯುವಿಹಾರಿಗಳಿಗೆ ತೊಂದರೆಯಾಯಿತು. ಕೆಲಸ ಮುಗಿಸಿಕೊಂಡು ಮನೆಗೆ ತೆರಳುತ್ತಿದ್ದ ಜನರು ಮಳೆಯಲ್ಲಿಯೇ ನೆನದುಕೊಂಡು ಹೋಗುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು. ರಸ್ತೆಯಲ್ಲಿ ಗುಂಡಿ ಬಿದ್ದ ಹಿನ್ನೆಲೆಯಲ್ಲಿ ಕೆಲವಡೆ ದ್ವಿಚಕ್ರವಾಹನಗಳು ಎಚ್ಚರಿಕೆ ಚಲಿಸುವಂತಾಯಿತು.
ಬೊಮ್ಮನಹಳ್ಳಿ ವಲಯದಲ್ಲಿ ಆರ್ಭಟ: ಎಲ್ಲ ವಲಯಗಳಗಿಂತ ಬೊಮ್ಮನಹಳ್ಳಿ ವಲಯದಲ್ಲಿ 27 ಮಿಮೀ ಮಳೆಯಾಗಿದೆ. ದಕ್ಷಿಣ ವಲಯ 23 ಮಿಮೀ, ರಾಜರಾಜೇಶ್ವರಿ ಮತ್ತು ಪೂರ್ವ ವಲಯದಲ್ಲಿ ತಲಾ 14 ಮಿಮೀ, ಮಹದೇವಪುರ ವಲಯ 11 ಮಿಮೀ ಮಳೆ ಬಿದ್ದಿದೆ. ಲಗ್ಗೆರೆ, ಯಶವಂತಪುರ, ಜಾಲಹಳ್ಳಿ ಕ್ರಾಸ್, ಉತ್ತರಹಳ್ಳಿ, ಕೆ.ಆರ್. ಮಾರುಕಟ್ಟೆ, ಮಲ್ಲೇಶ್ವರ, ಚಾಮರಾಜಪೇಟೆ, ಜಯನಗರ, ಬಸವನಗುಡಿ, ಹೆಬ್ಬಾಳ, ಗಿರಿನಗರ, ಜಕ್ಕೂರು, ಲಕ್ಷ್ಮೀದೇವಿನಗರ ಸೇರಿ ನಗರದ ಇತರ ಬಡಾವಣೆಗಳಲ್ಲಿ ಮಳೆ ಜೋರಾಗಿತ್ತು.
ಇದನ್ನೂ ಓದಿ: ರಾಜಧಾನಿಯಲ್ಲಿ ಡೆಂಘೆಯಿಂದ 7 ಮಂದಿ ಮೃತ
ಮೂರು ದಿನ ಮುಂದುವರಿಕೆ: ನಗರದಲ್ಲಿ ಸುರಿಯುತ್ತಿರುವ ಮಳೆ ಮುಂದಿನ ಮೂರು ದಿನ ಮುಂದುವರಿಯಲಿದೆ. ಕೆಲ ವಾರ್ಡ್‌ಗಳಲ್ಲಿ ಜೋರಾಗಿ ಸುರಿದರೆ, ಇನ್ನೂ ಕೆಲವೆಡೆ ಸಾಧಾರಣವಾಗಿ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮೂನ್ಸೂಚನೆ ಕೊಟ್ಟಿದೆ. ನಿರಂತರವಾಗಿ ಮಳೆ ಬೀಳುತ್ತಿರುವ ಹಿನ್ನೆಲೆಯಲ್ಲಿ ತಾಪಮಾನದಲ್ಲೂ ಕುಸಿತವಾಗಿದೆ. ವಾರದಿಂದ ಸಿಲಿಕಾನ್ ಸಿಟಿಯಲ್ಲಿ ವಾಡಿಕೆಗಿಂತ ಅಧಿಕ ಮಳೆ ಸುರಿದಿರುವುದು ಗಮನಾರ್ಹ. ಸೆ.1ರಿಂದ ಸೆ.7ರವರೆಗೆ ವಾಡಿಕೆಯಂತೆ 36 ಮಿಮೀ ಮಳೆ ಆಗಬೇಕಿತ್ತು. 81 ಮಿಮೀ ಮಳೆಯಾಗಿದ್ದು, ಶೇ.128 ಹೆಚ್ಚು ಸುರಿದಿದೆ.