

ಕೆ.ಎನ್.ಮಹದೇವಸ್ವಾಮಿ ಕೊಡಸೋಗೆ ಗುಂಡ್ಲುಪೇಟೆ
ಕಳೆದ ತಿಂಗಳಿನಿಂದ ಬೀಳುತ್ತಿರುವ ಮಳೆಯಿಂದ ಬಂಡೀಪುರದಲ್ಲಿ ಜೀವಕಳೆ ಮರುಕಳಿಸಿದ್ದು, ಬಿರು ಬೇಸಿಗೆಯಲ್ಲಿ ಒಣಗಿ ನಿಂತಿದ್ದ ರಾಷ್ಟ್ರೀಯ ಉದ್ಯಾನವನವು ಹಚ್ಚಹಸಿರಿನಿಂದ ಕಂಗೊಳಿಸುತ್ತಿದೆ.
ಕಳೆದ ವರ್ಷ ಸಮರ್ಪಕ ಮಳೆಬಿದ್ದ ಪರಿಣಾಮ ತುಂಬಿಹರಿದಿದ್ದ ಕೆರೆಕಟ್ಟೆಗಳಲ್ಲಿ ಬೇಸಿಗೆಯಲ್ಲಿಯೂ ನೀರಿನ ಸಂಗ್ರಹವಿದ್ದುದರಿಂದ ಈ ಬಾರಿ ವನ್ಯಜೀವಿಗಳಿಗೆ ಕುಡಿಯುವ ನೀರಿನ ಕೊರತೆಯಾಗಿರಲಿಲ್ಲ. ಅಲ್ಲದೆ ಆಗಾಗ್ಗೆ ಬೀಳುತ್ತಿದ್ದ ಮಳೆಯಿಂದ ಅರಣ್ಯವು ಬೇಗನೆ ಚಿಗುರಿ ಬೆಂಕಿ ಅಪಾಯದಿಂದ ಪಾರಾಗಿತ್ತು. ಈ ಬಾರಿ ಸಕಾಲದಲ್ಲಿ ಪೂರ್ವ ಮುಂಗಾರು ಕೈಹಿಡಿದ ಪರಿಣಾಮ ಕೆಲವೇ ದಿನಗಳಲ್ಲಿ ಅರಣ್ಯಪ್ರದೇಶ ಹಚ್ಚಹಸಿರಿನಿಂದ ಕಂಗೊಳಿಸುತ್ತಿದೆ. ಎಲೆಯುದಿರಿಸಿಕೊಂಡಿದ್ದ ಮರಗಳು ಚಿಗುರೆಲೆಗಳಿಂದ ಕಂಗೊಳಿಸುತ್ತಿವೆ.
ಬಂಡೀಪುರ ವಲಯಕ್ಕಿಂತಲೂ ಕೇರಳ ರಸ್ತೆಯಲ್ಲಿರುವ ಮದ್ದೂರು ಹಾಗೂ ಮೂಲೆಹೊಳೆ ವಲಯಗಳಿಗೆ ಹೆಚ್ಚಿನ ಮಳೆಬಿದ್ದ ಪರಿಣಾಮ ಬತ್ತಿಹೋಗಿದ್ದ ಕೆರೆಕಟ್ಟೆಗಳಲ್ಲಿ ಹಾಗೂ ಹಳ್ಳಕೊಳ್ಳಗಳಲ್ಲಿ ನೀರು ತುಂಬಿಕೊಂಡು ವನ್ಯಜೀವಿಗಳಿಗೆ ಕುಡಿಯುವ ನೀರು ಹಾಗೂ ಮೇವಿನ ಕೊರತೆಯನ್ನು ನೀಗಿಸಿದೆ. ಎಲೆ ಉದುರಿದ್ದ ಮರಗಿಡಗಳು, ಸುಟ್ಟುಕರಕಲಾಗಿದ್ದ ಹುಲ್ಲುಗರಿಕೆಗಳು ಚಿಗುರಿದ ಪರಿಣಾಮ ಪ್ರವಾಸಿಗರ ಮನಸ್ಸಿಗೆ ನವೋಲ್ಲಾಸ ಮೂಡಿಸುತ್ತಿದೆ. ಒಂದೆಡೆ ಕಣ್ಮನ ಸೆಳೆಯುವ ಹಸಿರು, ಮತ್ತೊಂದೆಡೆ ವನ್ಯಜೀವಿಗಳು ಪ್ರವಾಸಿಗರಿಗೆ ಪ್ರಾಣಿಗಳು ರಸದೌತಣ ನೀಡುತ್ತಿವೆ.
ಅರಣ್ಯ ಪ್ರದೇಶದಲ್ಲಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿಗಳ ಬದಿಗಳಲ್ಲಿ ಹುಲ್ಲು ಮೇಯುತ್ತಿರುವ ಚುಕ್ಕೆ ಜಿಂಕೆಗಳು, ನವಿಲುಗಳು ಸ್ವಾಗತಿಸುತ್ತವೆ. ಹಿಂಡಾಗಿ ಸಾಗುವ ಕಾಟಿಗಳು ಹಾಗೂ ಆನೆಗಳು ರಸ್ತೆದಾಟುತ್ತಿರುವ ವಾಹನ ಸವಾರರಿಗೆ ಮೈಜುಮ್ಮೆನ್ನಿಸುತ್ತದೆ. ದೊಡ್ಡಮರಗಳ ಮೇಲೆ ಚಿರತೆಗಳು ಮಲಗಿರುವ ದೃಶ್ಯ ರೋಮಾಂಚನ ನೀಡುತ್ತಿದೆ. ಸಫಾರಿಗೆ ತೆರಳುವ ಪ್ರವಾಸಿಗರಿಗೆ ಪ್ರತಿದಿನವೂ ಒಂದಲ್ಲಾ ಒಂದು ಕಡೆ ಹುಲಿಗಳು ಕಾಣಿಸಿಕೊಳ್ಳುತ್ತಿವೆ. ಆನೆಗಳ ಹಿಂಡು ಗುಂಪು ಗುಂಪಾಗಿ ಸಾಗಿ ಕೆರೆಗಳಲ್ಲಿ ಜಲಕ್ರೀಡೆಯಲ್ಲಿ ತೊಡಗುತ್ತಿವೆ.
ಬಂಡೀಪುರ ಸಫಾರಿ ವಲಯದ ಮಂಗಲ ಡ್ಯಾಂ, ನಂಜನಾಪುರಕೆರೆ, ಸೌತ್‌ಕೆರೆ, ಮೂರ‌್ಕೆರೆ, ಹುಲಿಕಟ್ಟೆ, ಕಡಮತ್ತೂರುಕಟ್ಟೆ, ಕೊಳಕಮಲ್ಲೀಕಟ್ಟೆ ಕೆರೆಗಳ ಬಳಿ ಹುಲಿ ಹಾಗೂ ಚಿರತೆಗಳು ಕಂಡುಬರುತ್ತಿದ್ದು ಪ್ರವಾಸಿಗರಿಗೆ ಮುದನೀಡುತ್ತಿವೆ. ಹುಲಿ, ಸಚಿರತೆಗಳನ್ನು ಪ್ರವಾಸಿಗರು ತಮ್ಮ ಮೊಬೈಲ್‌ಗಳಲ್ಲಿ ಸೆರೆಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಡುತ್ತಿರುವುದು ಪ್ರವಾಸಿಗರ ಸಂಖ್ಯೆ ಹೆಚ್ಚಳಕ್ಕೆ ಕಾರಣವಾಗಿದೆ.
ಹುಲಿ ಯೋಜನೆಯ ವೈನಾಡು ಗಡಿಯಲ್ಲಿರುವ ಮೂಲೆಹೊಳೆಗೆ ದಾಖಲೆ ಪ್ರಮಾಣದ ಮಳೆಬಿದ್ದ ಪರಿಣಾಮ ಎಲ್ಲಿ ನೋಡಿದರೂ ಹಚ್ಚಹಸುರಿನಿಂದ ಕಂಗೊಳಿಸುತ್ತಿದೆ. ಕೇರಳದ ವಯನಾಡಿನಲ್ಲಿ ಉತ್ತಮ ಮಳೆಯಾಗುತ್ತಿರುವ ಪರಿಣಾಮ ಬತ್ತಿಹೋಗಿದ್ದ ಮೂಲೆಹೊಳೆ ಮೈದುಂಬಿಹರಿಯುತ್ತಿದೆ. ಹುಲಿ ಯೋಜನೆಯ 374 ಕೆರೆಗಳಲ್ಲಿ ಎಲ್ಲವೂ ತುಂಬಿಕೊಂಡಿವೆ.