

ಮಂಜುನಾಥ ಸಾಯೀಮನೆ ಶಿರಸಿ
ಶಿರಸಿ-ಕುಮಟಾ ರಸ್ತೆ ನಿರ್ವಣಕ್ಕೆ ಮತ್ತೆ ಮಳೆ ತೊಡಕಾಗುತ್ತಿದೆ. ಈ ಮಾರ್ಗದಲ್ಲಿ ವಾಹನ ಸಂಚಾರ ಸ್ಥಗಿತಗೊಳಿಸಿದ ಬಳಿಕ ವೇಗದ ಕಾಮಗಾರಿ ನಡೆಸಲು ನಿರ್ಧರಿಸಲಾಗಿತ್ತಾದರೂ ಕಳೆದ ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆ ಸಮಸ್ಯೆ ತಂದೊಡ್ಡಿದೆ.
ಶಿರಸಿ- ಕುಮಟಾ ರಾಷ್ಟ್ರೀಯ ಹೆದ್ದಾರಿ 766 ಇ ಯಲ್ಲಿ ಈಗ ಸಂಚಾರ ನಿಷೇಧಿಸಲಾಗಿದೆ. ಈ ಮಾರ್ಗದಲ್ಲಿ ತೆರಳುವ ವಾಹನಗಳಿಗೆ ಸಿದ್ದಾಪುರ, ಯಲ್ಲಾಪುರ ಮೂಲಕ ತೆರಳಲು ಸೂಚಿಸಿ ಡಿ. 2ರಿಂದಲೇ ಸಂಚಾರ ನಿಷೇಧಿಸಿಲಾಗಿದೆ. ಫೆ. 25ರವರೆಗೆ ಅಂದರೆ ಒಟ್ಟು 85 ದಿನಗಳ ಕಾಲ ಸಂಚಾರ ನಿಷೇಧಿಸಿ ನಿರ್ವಣಗೊಳ್ಳಬೇಕಾದ 9 ಸೇತುವೆಗಳು, ಇಕ್ಕಟ್ಟು ರಸ್ತೆ ಇರುವ ದೇವಿಮನೆ ಘಟ್ಟ ಪ್ರದೇಶದಲ್ಲಿ 5 ಕಿ.ಮೀ. ರಸ್ತೆ ಮಾರ್ಗ ಮತ್ತು ಬಂಡಲ ಘಟ್ಟದಲ್ಲಿ 2 ಕಿ.ಮೀ. ರಸ್ತೆ ನಿರ್ವಣಕ್ಕೆ ಅವಕಾಶ ಮಾಡಿಕೊಡಲಾಗಿತ್ತು.
ಶಿರಸಿ-ಕುಮಟಾ ಮಾರ್ಗದಲ್ಲಿ ಸಂಚಾರ ಸ್ಥಗಿತಗೊಳಿಸಲೇಬೇಕಾದ ಅನಿವಾರ್ಯತೆ ನಿರ್ವಿುಸಿದ್ದು ಇಲ್ಲಿಯ ಬೆಣ್ಣೆ ಹೊಳೆ ಸೇತುವೆ. ಸದಾ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಯುತ್ತಿರುವ ಮತ್ತು ಆಳದ ಪ್ರಪಾತ ಹೊಂದಿ ಪೈಪ್ ಅಳವಡಿಸಿ ಪರ್ಯಾಯ ಮಾರ್ಗ ನಿರ್ವಿುಸಿದರೂ ವಾಹನ ಸಂಚಾರಕ್ಕೆ ಕಠಿಣ ಎಂಬ ಪರಿಸ್ಥಿತಿ ಇಲ್ಲಿದೆ. ಇನ್ನೊಂದೆಡೆ ದೇವಿಮನೆ ಘಟ್ಟ ಪ್ರದೇಶದಲ್ಲಿ ಕೇವಲ 12 ಮೀಟರ್ ಮಾತ್ರ ರಸ್ತೆ ನಿರ್ವಣಕ್ಕೆ ಜಾಗ ನೀಡಿರುವ ಕಾರಣ ಇಕ್ಕಟ್ಟು ಜಾಗದಲ್ಲಿ ವಾಹನ ಓಡಾಟ ಸಾಧ್ಯವಿಲ್ಲ ಎಂದು ಇಲ್ಲಿ ಸಂಚಾರ ನಿಷೇಧಿಸಲಾಗಿತ್ತು. ಕಳೆದ ನಾಲ್ಕು ದಿನಗಳಿಂದ ಚಂಡಮಾರುತದ ಕಾರಣ ಪ್ರತಿ ದಿನವೂ ಮಳೆ ಸುರಿಯುತ್ತಿದೆ. ಬೆಣ್ಣೆ ಹೊಳೆಯ ಹಳೇ ಸೇತುವೆಯನ್ನು ಡಿ. 3ರಂದೇ ಕೆಡವಿ ಇಲ್ಲಿ ಹೊಸ ಸೇತುವೆ ನಿರ್ಮಾಣ ಕಾಮಗಾರಿ ಆರಂಭಿಸಲು ಆರ್ಎನ್ಎಸ್ ಕಂಪನಿ ಉದ್ದೇಶಿಸಿ, ರಸ್ತೆ ಪಕ್ಕದ ಹೊಳೆಯಲ್ಲಿ ಪೈಪ್ ಅಳವಡಿಸಿಕೊಂಡು ಕಾಮಗಾರಿ ನಡೆಸುವ ವಾಹನ ಮತ್ತು ಸ್ಥಳೀಯರ ವಾಹನಕ್ಕೆ ರಸ್ತೆಯನ್ನೂ ನಿರ್ವಿುಸಿದೆ. ಆದರೆ, ಮಳೆ ಬೆಣ್ಣೆ ಹೊಳೆ ಸೇತುವೆಯನ್ನು ಕೆಡವಲು ಸಾಧ್ಯವಾಗದಂತೆ ಮಾಡಿದೆ. ಒಂದೊಮ್ಮೆ ಹೊಳೆಯಲ್ಲಿ ಪ್ರವಾಹ ಬಂದು ಸೇತುವೆ ಪಕ್ಕ ನಿರ್ವಿುಸಿಕೊಂಡ ಕಚ್ಚಾ ರಸ್ತೆ ಕೊಚ್ಚಿಹೋದರೆ ಸಂಪರ್ಕವೇ ಕಡಿತವಾಗುತ್ತದೆ. ಅಲ್ಲದೆ, ಸಿಮೆಂಟ್, ಜೆಲ್ಲಿ ಹೊತ್ತ ವಾಹನಗಳನ್ನೂ ದಾಟಿಸಲು ಸಾಧ್ಯವಾಗದ ಸ್ಥಿತಿ ನಿರ್ವಣವಾಗಲಿದೆ ಎಂಬ ಕಾರಣಕ್ಕೆ ಆರ್ಎನ್ಎಸ್ ಇದುವರೆಗೂ ಸೇತುವೆ ಕೆಡವಿಲ್ಲ. ಅದೇ ರೀತಿ ಅಮ್ಮಿನಳ್ಳಿ ಸೇರಿ ವಿವಿಧ ಸೇತುವೆಯ ಪಕ್ಕದಲ್ಲಿ ರಸ್ತೆ ನಿರ್ವಿುಸಿಕೊಂಡು ಸಂಚಾರಕ್ಕೆ ವ್ಯವಸ್ಥೆ ಮಾಡಿಕೊಳ್ಳಲಾಗಿದ್ದರೂ ಹಳೆಯ ಸೇತುವೆಗಳನ್ನು ಇನ್ನೂ ತೆರವುಗೊಳಿಸಿಲ್ಲ.
ನಿಲ್ಲದ ವಾಹನ ಭರಾಟೆ: ದೇವಿಮನೆ ಘಟ್ಟ ಪ್ರದೇಶದಲ್ಲಿ ಈಗ ರಸ್ತೆಯ ಒಂದು ಭಾಗದಲ್ಲಿ ಕಾಂಕ್ರೀಟ್ ಹಾಕಲಾಗುತ್ತಿದೆ. ಇಕ್ಕಟ್ಟಿನ ಪ್ರದೇಶವಾದ ಇಲ್ಲಿ ನಿಗದಿತ ಸಮಯದೊಳಗೆ ಕಾಮಗಾರಿ ಪೂರ್ಣಗೊಳಿಸಲು ಆರ್ಎನ್ಎಸ್ ಹೆಚ್ಚಿನ ಕೆಲಸಗಾರರನ್ನೂ ನೇಮಿಸಿಕೊಂಡಿದೆ. ಆದರೆ, ಸುರಿದ ಮಳೆ ಕೆಲಸಕ್ಕೆ ತೊಡಕುಂಟುಮಾಡಿದೆ. ಇಳಿಜಾರಿನ ಪ್ರದೇಶದಲ್ಲಿ ನೀರೂ ಸಹ ಪ್ರವಾಹದ ಮಾದರಿಯಲ್ಲಿ ಹರಿದುಬಂದು ರಸ್ತೆ ನಿರ್ವಣಕ್ಕಾಗಿ ಹಾಕಿದ್ದ ಕಡಿ ಕೊಚ್ಚಿ ಕೊರಕಲು ನಿರ್ಮಾಣ ಮಾಡುತ್ತಿದೆ. ಕೊರಕಲಾದ ಪ್ರದೇಶವನ್ನು ಮತ್ತೆ ಮತ್ತೆ ಸರಿಪಡಿಸುವುದರಲ್ಲಿಯೇ ಹೆಚ್ಚಿನ ಸಮಯ ಹಿಡಿಯುತ್ತಿದೆ.
ರಸ್ತೆಯಲ್ಲಿ ವಾಹನ ಸಂಚಾರ ಸಂಪೂರ್ಣ ಸ್ಥಗಿತದ ಆದೇಶವಿದ್ದರೂ ಈ ಮಾರ್ಗದಲ್ಲಿ ಕಾರು ಮತ್ತು ಜೀಪ್ಗಳ ಓಡಾಟ ಅವ್ಯಾಹತವಾಗಿಯೇ ನಡೆದಿದೆ. ಇಲ್ಲಿಯ ಹೆಗಡೆಕಟ್ಟಾ ಹಾಗೂ ಕುಮಟಾ ತಾಲೂಕಿನ ಅಂತ್ರವಳ್ಳಿಯಲ್ಲಿ ಪೊಲೀಸ್ ಚೆಕ್ ಪೋಸ್ಟ್ ನಿರ್ವಿುಸಲಾಗಿದ್ದರೂ ಅವುಗಳನ್ನು ಸುಲಭವಾಗಿ ದಾಟಿ ಈ ವಾಹನಗಳು ಬರುತ್ತಿವೆ. ದೇವಿಮನೆ ಘಟ್ಟ ಪ್ರದೇಶದಲ್ಲಿ ರಸ್ತೆ ಕಾಮಗಾರಿ ನಡೆದಿದ್ದರೂ ಪಕ್ಕದ ಮಣ್ಣಿನ ರಸ್ತೆಯಲ್ಲೇ ಈ ವಾಹನಗಳು ಸಾಗುತ್ತಿವೆ. ಇದರಿಂದಾಗಿ ಕಾಮಗಾರಿಗೂ ತೊಂದರೆ, ವಾಹನ ಸಂಚಾರವೂ ಅಭದ್ರತೆಯಾಗಿ ಪರಿಣಮಿಸಿದೆ.
ರಸ್ತೆ ಸಾರಿಗೆ ಸಂಸ್ಥೆಗೆ ಕ್ಷೀಣಿಸಿದ ಆದಾಯ: ಶಿರಸಿ- ಕುಮಟಾ ರಸ್ತೆಯಲ್ಲಿ ಈಗ ಬಸ್ ಸಂಚಾರಕ್ಕೆ ಅವಕಾಶ ಇರದಿರುವುದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಆದಾಯ ಕಡಿಮೆ ಆಗಿದೆ. ಈ ಮಾರ್ಗದಲ್ಲಿ ಹೊರಗಿನ ಡಿಪೋ ಸೇರಿ ಪ್ರತಿ ದಿನ 150 ಬಸ್ಗಳು ಶಿರಸಿಯಿಂದ ಕುಮಟಾಕ್ಕೆ ಸಾಗುತ್ತಿದ್ದವು. ಈಗ ಈ ಬಸ್ಗಳೆಲ್ಲ ಯಲ್ಲಾಪುರ ಅಥವಾ ಸಿದ್ದಾಪುರ ಮಾರ್ಗವಾಗಿ ಕುಮಟಾ ಮತ್ತು ಕಾರವಾರಕ್ಕೆ ಸಾಗುತ್ತಿವೆ. ಶಿರಸಿಯಿಂದ ಕುಮಟಾಕ್ಕೆ ಸಾಗಲು ಹೆಚ್ಚುವರಿಯಾಗಿ ಎರಡೂವರೆ ಅಥವಾ ಮೂರು ತಾಸುಗಳ ಸಮಯ ಬೇಕಾಗುತ್ತಿದ್ದು, ಪ್ರಯಾಣಿಕರ ಸಂಖ್ಯೆ ಸಹ ಕ್ಷೀಣಿಸಿ, ತುರ್ತಾಗಿ ಹೋಗಬೇಕಾದವರು ಮಾತ್ರ ಕುಮಟಾಕ್ಕೆ ಹೋಗುತ್ತಿದ್ದಾರೆ. ಇದರಿಂದಾಗಿ ಪ್ರತಿ ದಿನ 5ರಿಂದ 6 ಲಕ್ಷ ರೂ. ಹಾನಿ ಸಂಭವಿಸುತ್ತಿದೆ ಎನ್ನುತ್ತಾರೆ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ ಶ್ರೀನಿವಾಸ.
ಬೆಣ್ಣೆ ಹೊಳೆ ಹಳೇ ಸೇತುವೆಯನ್ನು ಇಷ್ಟರಲ್ಲೇ ಕೆಡವಿ ಹೊಸ ಸೇತುವೆ ಕಾಮಗಾರಿ ಆರಂಭಿಸಬೇಕಿತ್ತು. ಆದರೆ, ಮಳೆಯಿಂದಾಗಿ ಪರ್ಯಾಯವಾಗಿ ಮಾಡಿಕೊಂಡ ರಸ್ತೆ ಕೊಚ್ಚಿಹೋದರೆ ಎಂಬ ಆತಂಕದಿಂದ ಸೇತುವೆ ಕೆಡವಲು ವಿಳಂಬ ಮಾಡಿದ್ದೇವೆ. ಒಂದೆರಡು ದಿನಗಳಲ್ಲಿ ಮಳೆ ಕಡಿಮೆಯಾಗುವ ನಿರೀಕ್ಷೆ ಇದ್ದು, ಬೆಣ್ಣೆಹೊಳೆ ಸೇರಿ ಎಲ್ಲ ಹಳೇ ಸೇತುವೆ ಕೆಡವಲಿದ್ದೇವೆ. | ಗೋವಿಂದ ಭಟ್, ಇಂಜಿನಿಯರ್, ಆರ್ಎನ್ಎಸ್ ಶಿರಸಿ- ಕುಮಟಾ ಮಾರ್ಗದಲ್ಲಿ ಪ್ರಯಾಣಿಕರ ಸಂಖ್ಯೆ ಕಡಿಮೆ ಆಗಿದ್ದರೂ ನಾವು ಬಸ್ಗಳ ಸಂಖ್ಯೆ ಕಡಿಮೆ ಮಾಡಿಲ್ಲ. ಪ್ರಯಾಣಕ್ಕೆ ಸಮಯ ಹೆಚ್ಚು ಬೇಕಾಗುವುದರಿಂದ ನಾವು ಬಸ್ ಸಂಖ್ಯೆ ಕಡಿಮೆ ಮಾಡುವುದಿಲ್ಲ. | ಶ್ರೀನಿವಾಸ, ವಿಭಾಗೀಯ ನಿಯಂತ್ರಣಾಧಿಕಾರಿ, ರಸ್ತೆ ಸಾರಿಗೆ ಸಂಸ್ಥೆ