

ಕಡಬ: ಸುಳ್ಯ ವಿಧಾನ ಸಭಾ ಕ್ಷೇತ್ರದ ಕಡಬ ತಾಲೂಕಿನ ಕಾಣಿಯೂರು, ಎಡಮಂಗಲ, ಬೆಳಂದೂರು, ಕಡಬ, ಕೊಡಿಂಬಾಳ ಸೇರಿದಂತೆ ರೈಲ್ವೆ ಕುರಿತಾದ ಎಲ್ಲ ಸಮಸ್ಯೆಗಳ ಕುರಿತು ಶಾಸಕಿ ಭಾಗೀರಥಿ ಮುರುಳ್ಯ ನೇತೃತ್ವದಲ್ಲಿ ರೈಲು ಮತ್ತು ಜಲಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರಿಗೆ ದ.ಕ.ಸಂಸದ ಕ್ಯಾ.ಬ್ರಿಜೇಶ್ ಚೌಟ ಮುಖಾಂತರ ಮಂಗಳೂರಿನಲ್ಲಿ ಬುಧವಾರ ನಡೆದ ಸಭೆಯಲ್ಲಿ ಮನವಿ ಮಾಡಿದ್ದಾರೆ. ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ರಾಕೇಶ್ ರೈ ಕೆಡೆಂಜಿ, ಸುಳ್ಯ ಮಂಡಲ ಸಮಿತಿ ಪ್ರಧಾನ ಕಾರ್ಯದರ್ಶಿಗಳಾದ ವಿನಯ ಕುಮಾರ್ ಕಂದಡ್ಕ ಮತ್ತು ಪ್ರದೀಪ್ ರೈ ಮನವಳಿಕೆ ಉಪಸ್ಥಿತರಿದ್ದರು.
ಕಡಬ ತಾಲೂಕಿನ ಕೋಡಿಂಬಾಳ ರೈಲು ನಿಲ್ದಾಣ ಕಡಬ ತಾಲೂಕು ಕೇಂದ್ರದಿಂದ ಕೇವಲ 1.2 ಕಿ.ಮೀ ದೂರದಲ್ಲಿದ್ದು ಪಪಂ ವ್ಯಾಪ್ತಿಗೆ ಒಳಪಟ್ಟಿರುತ್ತದೆ. ಆದಾಗ್ಯೂ ಇಲ್ಲಿ ಯಾವುದೇ ರೈಲು ನಿಲುಗಡೆ ಇರುವುದಿಲ್ಲ. ಆದುದರಿಂದ ಕೋಡಿಂಬಾಳ ರೈಲು ನಿಲ್ದಾಣದಲ್ಲಿ ಮಂಗಳೂರು-ಬೆಂಗಳೂರು ನಡುವಿನ ಎಲ್ಲ ರೈಲುಗಳಿಗೆ ನಿಲುಗಡೆ ನೀಡುವುದು. ಹಾಗೂ ಹೆಚ್ಚುವರಿ ಹಳಿ, ಪ್ಲಾಟ್ಫಾರಂ ವಿಸ್ತರಣೆ, ನಿರ್ಮಾಣಕ್ಕೆ ಕ್ರಮ ಕೈಗೊಳ್ಳುವುದು. ಕಡಬ ತಾಲೂಕು ವ್ಯಾಪ್ತಿಯ ಕೋರಿಯರ್ ಎಂಬಲ್ಲಿ ರೈಲ್ವೆ ಮೇಲ್ಸೇತುವೆ ನಿರ್ಮಾಣ, ಎಡಮಂಗಲದಲ್ಲಿ ಎರಡು ಕ್ರಾಸಿಂಗ್ ಬಳಿ ಮೇಲ್ಸೇತುವೆ ನಿರ್ಮಿಸುವುದು ಹಾಗೂ ಪುಳಿಕುಕ್ಕು ರಸ್ತೆ ಸಂಪರ್ಕಕ್ಕೆ ಹಳಿಗೆ ಸಮಾನಾಂತರ (ಬೈಪಾಸ್) ರಸ್ತೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳುವುದು. ಕಡಬ ತಾಲೂಕು ವ್ಯಾಪ್ತಿಯ ಸವಣೂರು ಎಂಬಲ್ಲಿ ಮೈಸೂರು ಧರ್ಮಸ್ಥಳ ರಾಜ್ಯ ಹೆದ್ದಾರಿಯಲ್ಲಿ ಲೆವೆಲ್ ಕ್ರಾಸಿಂಗ್ ಮೇಲ್ಸೇತುವೆ, ಈ ಹಿಂದೆ ಮಂಗಳೂರು-ಸುಬ್ರಮಣ್ಯ ರೋಡ್ ನಡುವೆ ನಿತ್ಯ ರೈಲು ಸಂಚರಿಸಬೇಕು, ಸುಬ್ರಹ್ಮಣ್ಯ ರೋಡ್-ನೂಜಿಬಾಳ್ತಿಲ-ಧರ್ಮಸ್ಥಳ ನೂತನ ರೈಲು ಮಾರ್ಗ ಪ್ರಸ್ತಾವನೆ ರೈಲ್ವೆ ಇಲಾಖೆ ಮುಂದಿದ್ದು, ಈ ಕುರಿತು ಸರ್ವೇ ಕಾರ್ಯ ಕೈಗೊಳ್ಳುವುದು, ಸುಬ್ರಮಣ್ಯ ರೋಡ್ ರೈಲು ನಿಲ್ದಾಣದಿಂದ ರಾಷ್ಟಿಯ ಹೆದ್ದಾರಿ ಸಂಪರ್ಕಿಸುವ ನೆಟ್ಟಣ-ಬೋನಡ್ಕ- ಕೆಂಜಳ-ಗುಂಡ್ಯ ( ಅಂದಾಜು 7ಕಿ.ಮೀ.) ರಸ್ತೆ ಅಭಿವೃದ್ಧಿಗೆ ಕ್ರಮ ಕೈಗೊಳ್ಳುವಂತೆ ಮನವಿಯಲ್ಲಿ ತಿಳಿಸಿದ್ದಾರೆ.
ಕಡಬ ತಾಲೂಕು ವ್ಯಾಪ್ತಿಯ ಕಾಣಿಯೂರು ರೈಲು ನಿಲ್ದಾಣ ಅಮೃತ್ ರೈಲು ನಿಲ್ದಾಣವನ್ನಾಗಿ ಅಭಿವೃದ್ಧಿ ಪಡಿಸುವುದು. ಸುಳ್ಯ ಭಾಗದ ಬಹುಕಾಲದ ಬೇಡಿಕೆಯಾದ ಕಾಞಂಗಾಡ್-ಕಾಣಿಯೂರು ಸಂಪರ್ಕಮಾರ್ಗದ ಪ್ರಸ್ತಾವನೆ ಮರುಜೀವಗೊಳಿಸಿ ರೈಲುಮಾರ್ಗ ನಿರ್ಮಾಣಕ್ಕೆ ಸರ್ವೇ ಕಾರ್ಯ ಕೈಗೊಳ್ಳಲು,. ಕಡಬ ತಾಲೂಕು ವ್ಯಾಪ್ತಿಯ ಬೆಳಂದೂರು ಎಂಬಲ್ಲಿ ಸುಬ್ರಹ್ಮಣ್ಯ ಮಂಜೇಶ್ವರ ರಾಜ್ಯ ಹೆದ್ದಾರಿಯ ಸಮೀಪದಲ್ಲಿರುವ ಲೆವೆಲ್ ಕ್ರಾಸಿಂಗ್ ಬಳಿ ಮೇಲ್ಸೇತುವೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳುವಂತೆ ಮನವಿಯಲ್ಲಿ ತಿಳಿಸಿದ್ದಾರೆ.