ಮುಂಬೈಗೆ ಹಾರಲು ಸಜ್ಜಾಗಿದ್ದ ಜೋಡಿ ರಕ್ಷಣೆ

28bkl1
Published on

ಭಟ್ಕಳ: ಪಾಲಕರ ಕಣ್ತಪ್ಪಿಸಿ ಮುಂಬೈಗೆ ತೆರಳಲು ಸಜ್ಜಾದ ಅಪ್ರಾಪ್ತ ಜೋಡಿಯೊಂದು ರೈಲ್ವೆ ಪೊಲೀಸರ ಸಮಯಪ್ರಜ್ಞೆಯಿಂದ ಸುರಕ್ಷಿತವಾಗಿ ಮನೆಗೆ ಮರಳಿದ ಘಟನೆ ಶನಿವಾರ ತಡರಾತ್ರಿ ಭಟ್ಕಳ ರೈಲು ನಿಲ್ದಾಣದಲ್ಲಿ ನಡೆದಿದೆ. ತಾಲೂಕಿನ ಬೈಲೂರಿನ 16 ವರ್ಷದ ಅಪ್ರಾಪ್ತ ಯುವಕ, ಮುರ್ಡೆಶ್ವರದ 15 ವರ್ಷದ ಅಪ್ರಾಪ್ತ ಯುವತಿ ಮುಂಬೈಗೆ ತೆರಳಲು ಸಜ್ಜಾಗಿದ್ದರು. ಈ ಹಿನ್ನೆಲೆಯಲ್ಲಿ ಶುಕ್ರವಾರ ರಾತ್ರಿ ಇಬ್ಬರೂ ಮನೆಯಿಂದ ನಾಪತ್ತೆಯಾಗಿದ್ದರು. ಶನಿವಾರ ಸಂಜೆ ಭಟ್ಕಳ ರೈಲು ನಿಲ್ದಾಣಕ್ಕೆ ಬಂದಿದ್ದಾರೆ. ಮುಂಬೈನ ರೈಲಿನ ಕುರಿತು ಮಾಹಿತಿ ಪಡೆದಿದ್ದಾರೆ. ಅವರ ಚಲನವಲನ ಗಮನಿಸುತ್ತಿದ್ದ ರೈಲ್ವೆ ಪೊಲೀಸರು ಹಾಗೂ ಅಲ್ಲಿಯೇ ಕರ್ತವ್ಯದಲ್ಲಿದ್ದ ಕಂದಾಯ ಇಲಾಖೆ ಅಧಿಕಾರಿಗಳಿಗೆ ಅನುಮಾನ ಬಂದು ಬಾಲಕಿಯ ಬಳಿ ತೆರಳಿ ವಿಚಾರಿಸಿದ್ದಾರೆ. ಬಾಲಕ ನಿನಗೆ ಏನಾಗಬೇಕು? ಎಂದು ಕೇಳಿದಾಗ, ‘ಅಣ್ಣನಾಗಬೇಕು’ ಎಂದು ತೊದಲುತ್ತ ಉತ್ತರಿಸಿದ್ದಾಳೆ. ಸಂಶಯಗೊಂಡ ಪೊಲೀಸರು ಪುನಃ ಕೇಳಿದಾಗ, ‘ಆತನನ್ನು ಪ್ರೀತಿಸುತ್ತಿದ್ದು, ಮನೆ ಬಿಟ್ಟು ಆತನ ಜೊತೆ ತೆರಳಲು ರೈಲು ನಿಲ್ದಾಣಕ್ಕೆ ಬಂದಿದ್ದೇನೆ’ ಎಂದು ಒಪ್ಪಿಕೊಂಡಿದ್ದಾಳೆ. ರೈಲ್ವೆ ಪೊಲೀಸ್ ಅಧಿಕಾರಿ ಸಿಂಗ್ ಭಟ್ಕಳ ಶಹರ ಠಾಣೆಗೆ ಮಾಹಿತಿ ನೀಡಿ, ಅಪ್ರಾಪ್ತರ ಪಾಲಕರನ್ನು ಸ್ಥಳಕ್ಕೆ ಕರೆಸಿದ್ದಾರೆ. ಪಾಲಕರ ಸಮ್ಮುಖದಲ್ಲಿ ಇಬ್ಬರಿಗೂ ಬುದ್ದಿವಾದ ಹೇಳಿ ಅವರವರ ಪಾಲಕರಿಗೆ ಒಪ್ಪಿಸಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದರು. ಆದರೆ, ತಾಲೂಕಿನ ಯಾವುದೇ ಠಾಣೆಯಲ್ಲಿ ಪ್ರಕರಣ ದಾಖಲಾಗಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net