

ವಿಜಯವಾಣಿ ಸುದ್ದಿಜಾಲ ಮಂಗಳೂರು
ಕೊಂಕಣ ರೈಲ್ವೆ-ಭಾರತೀಯ ರೈಲ್ವೆ ವಿಲೀನ ಸಾಧಕ-ಭಾದಕಗಳ ಕುರಿತು 15 ದಿನಗಳಲ್ಲಿ ವರದಿ ಸಲ್ಲಿಸಲು ಕೇಂದ್ರ ಜಲಶಕ್ತಿ ಮತ್ತು ರೈಲ್ವೆ ಇಲಾಖೆ ರಾಜ್ಯ ಸಚಿವ ವಿ.ಸೋಮಣ್ಣ ರೈಲ್ವೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ದ.ಕ.ಜಿಪಂ ಸಭಾಂಗಣದಲ್ಲಿ ಬುಧವಾರ ಮಂಗಳೂರು ರೈಲ್ವೆ ವಿಷಯಗಳ ಬಗ್ಗೆ ಆಯೋಜಿಸಲಾದ ಅಧಿಕಾರಿಗಳು, ಜನಪ್ರತಿನಿಧಿ, ರೈಲು ಬಳಕೆದಾರರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕೊಂಕಣ ರೈಲ್ವೆ ವಿಲೀನ ಕುರಿತಂತೆ ಕೊಂಕಣ, ನೈಋತ್ಯ ಹಾಗೂ ದಕ್ಷಿಣ ರೈಲ್ವೆ ವಿಭಾಗಗಳ ಹಿರಿಯ ಅಧಿಕಾರಿಗಳ ಸಮಿತಿ ರಚಿಸಲಾಗಿದೆ. ಈ ಸಮಿತಿ ಸ್ಥಳೀಯ ಸಂಸದರು, ಶಾಸಕರು, ಜಿಲ್ಲಾಧಿಕಾರಿ ಹಾಗೂ ರೈಲ್ವೆ ಬಳಕೆದಾರರ ಜತೆ ಚರ್ಚಿಸಿ ತಾಂತ್ರಿಕವಾಗಿ ಯಾವ ರೀತಿಯಲ್ಲಿ ಕ್ರಮಗಳನ್ನು ಕೈಗೊಳ್ಳಬಹುದು? ಎಂಬ ಕುರಿತ ವರದಿ ನೀಡಬೇಕು. ಬಳಿಕ ಕರಾವಳಿಯನ್ನೇ ಕೇಂದ್ರವಾಗಿರಿಸಿ ಪ್ರತ್ಯೇಕ ರೈಲ್ವೆ ವಿಭಾಗ ಆರಂಭಿಸಲು ಯೋಜನೆ ರೂಪಿಸುವಂತೆ ತಿಳಿಸಿದರು.
ಸಂಸದ ಕ್ಯಾ.ಬ್ರಜೇಶ್ ಚೌಟ ಮಾತನಾಡಿ, ಮಂಗಳೂರಿನ 20 ಕಿ.ಮೀ.ವ್ಯಾಪ್ತಿಯಲ್ಲಿ ಮೂರು ರೈಲ್ವೆ ವಿಭಾಗಗಳು ಒಳಗೊಂಡಿರುವ ಕಾರಣ, ಕೊಂಕಣ ರೈಲ್ವೆಯನ್ನು ಭಾರತೀಯ ರೈಲ್ವೆಯೊಂದಿಗೆ ವಿಲೀನ ಮಾಡಬೇಕು. ಸುರತ್ಕಲ್, ಮೂಲ್ಕಿ ರೈಲು ನಿಲ್ದಾಣಗಳ ಜಂಕ್ಷನ್‌ಗಳಲ್ಲಿ ಮೂಲ ಸೌಕರ್ಯ ಕಲ್ಪಿಸಬೇಕು. ಸುರತ್ಕಲ್‌ನಿಂದ ತೋಕೂರು ಸ್ಟೇಷನ್‌ಗೆ ರೋರೋ ಸರ್ವಿಸ್ ಸ್ಥಳಾಂತರಿಸಬೇಕು, ರೈಲಿನಲ್ಲಿ ಮಂಗಳೂರಿನಿಂದ ಬೆಂಗಳೂರಿಗೆ ಹೋಗಲು 11 ಗಂಟೆಗಳು ಬೇಕಾಗುತ್ತಿದೆ. ಸಮಯ ಕಡಿತ ಸಲುವಾಗಿ ಹೈಸ್ಪೀಡ್ ರೈಲು ಸಂಪರ್ಕ ಕಲ್ಪಿಸಲು ಸಾಧ್ಯತೆ ಹಾಗೂ ಆರ್ಥಿಕ ಅಧ್ಯಯನ ಆಗಬೇಕು. ಮಂಗಳೂರು-ಸುಬ್ರಹ್ಮಣ್ಯ ನಡುವೆ ಪ್ರಯಾಣಿಕ ರೈಲು ಪುನರಾರಂಭಿಸಬೇಕು. ರೈಲು ನಿಲ್ದಾಣದ ಮ್ಯಾನೇಜರ್ ಅವರಿಂದ ಕ್ಯಾಂಟೀನ್ ನಡೆಸಲು ಕನ್ನಡ ಮಾತನಾಡುವ ಸ್ಥಳೀಯರಿಗೆ ಆದ್ಯತೆ ನೀಡಬೇಕು. ಮತ್ಸ್ಯಗಂಧ ರೈಲುಗಳ ಹಳೆಯ ಕೋಚ್‌ಗಳನ್ನು ಬದಲಾಯಿಸಬೇಕು ಮತ್ತು ಈ ರೈಲು ಮಂಗಳೂರು ಸೆಂಟ್ರಲ್‌ಗೆ ವಿಸ್ತರಿಸ ಬೇಕು ಎಂದು ಮನವಿ ಮಾಡಿದರು.
ಸಂಸದ ಕೋಟ ಶ್ರೀನಿವಾಸ ಪೂಜಾರಿ, ನೈಋತ್ಯ ರೈಲ್ವೆಯ ಪ್ರಧಾನ ವ್ಯವಸ್ಥಾಪಕ ಅರವಿಂದ ಶ್ರೀವಾಸ್ತವ, ಕೊಂಕಣ ರೈಲ್ವೆಯ ಪ್ರಧಾನ ವ್ಯವಸ್ಥಾಪಕ ಸಂತೋಷ್ ಕುಮಾರ್, ದಕ್ಷಿಣ ರೈಲ್ವೆ ಪ್ರಧಾನ ವ್ಯವಸ್ಥಾಪಕ ಆರ್.ಎನ್.ಸಿಂಗ್, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಆನಂದ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಇದ್ದರು.
ನಮ್ಮ ವಿಭಾಗವು ಈಗಾಗಲೇ ಮೂರು ತಿಂಗಳಿಗೊಮ್ಮೆ ಸಭೆಗಳನ್ನು ನಡೆಸುತ್ತಿದೆ. ಮುಂದೆ ಸಂಸದರು, ಶಾಸಕರನ್ನು ಒಳಗೊಂಡು ಆಗಸ್ಟ್‌ನಿಂದಲೇ ಮೂರು ತಿಂಗಳಿಗೊಮ್ಮೆ ಸಭೆ ನಡೆಸಲಾಗುವುದು ಎಂದು ಕೊಂಕಣ ರೈಲ್ವೆಯ ಪ್ರಧಾನ ವ್ಯವಸ್ಥಾಪಕ ಸಂತೋಷ್ ಕುಮಾರ್ ತಿಳಿಸಿದರು. ಉಡುಪಿ ರೈಲ್ವೆ ನಿಲ್ದಾಣವನ್ನು ಅಮೃತ ಭಾರತ ಸ್ಟೇಷನ್‌ನಡಿ ಅಭಿವೃದ್ಧಿಗೆ ಕಳೆದ ವರ್ಷ ಘೋಷಣೆಯಾಗಿದ್ದು, ಅನುದಾನ ಇನ್ನೂ ಬಂದಿಲ್ಲ. ಕಾರವಾರ ನಿಲ್ದಾಣದಲ್ಲಿ 4 ಕೋಟಿ ರೂ.ಗಳಲ್ಲಿ ಪ್ರಯಾಣಿಕ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ. ಸುರತ್ಕಲ್‌ನಿಂದ ರೋರೋ ಸೇವೆಯನ್ನು ತೋಕೂರಿಗೆ ಸ್ಥಳಾತರಿಸಲು ಭೂಮಿಯ ಅಗತ್ಯವಿದ್ದು, ರಾಜ್ಯ ಸರ್ಕಾರ ಸಹಕರಿಸಬೇಕು ಎಂದರು.