ಕಂಬಳ ಚಾಂಪಿಯನ್ ಲಕ್ಕಿ ಇನ್ನಿಲ್ಲ : ಹಲವು ಮೆಡಲ್‌ಗಳ ಸರದಾರ ; ಅನಾರೋಗ್ಯಕ್ಕೆ ತುತ್ತಾಗಿದ್ದ ಕೋಣ

lucky
ಕಂಬಳದ ಕೋಣ ‘ಲಕ್ಕಿ’
Published on

ಕಿನ್ನಿಗೋಳಿ: ಕಂಬಳ ಕ್ಷೇತ್ರದ ಸಾಧಕ, ಹಲವಾರು ಮೆಡಲ್‌ಗಳನ್ನು ತನ್ನದಾಗಿಸಿದ್ದ ಕಿನ್ನಿಗೋಳಿಯ ಉಳೆಪಾಡಿ ಬಡಗುಮನೆ ದಿವಾಕರ ಚೌಟ ಅವರ ಕಂಬಳದ ಕೋಣ ‘ಲಕ್ಕಿ’ ಅನಾರೋಗ್ಯದಿಂದ ಮೃತಪಟ್ಟಿದೆ. ‘ಲಕ್ಕಿ’ ಏಳೆಂಟು ದಿನಗಳಿಂದ ಅನಾರೋಗ್ಯಕ್ಕೆ ತುತ್ತಾಗಿದ್ದು, ಚಿಕಿತ್ಸೆ ನೀಡಲಾಗಿತ್ತು. ಮಂಗಳವಾರ ಲಕ್ಕಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿದ್ದು, ಬುಧವಾರ ತಪಾಸಣೆಗೆ ಕರೆದುಕೊಂಡು ಹೋಗಲಾಗಿತ್ತು. ಈ ವೇಳೆ ಗಾಬರಿಗೊಂಡು ಅತ್ತಿಂದಿತ್ತ ಓಡಾಡಿದ್ದ ಲಕ್ಕಿ ಯಾರ ನಿಯಂತ್ರಣ ಕ್ಕೂ ಸಿಗದಂತಾಗಿತ್ತು. ಹರಸಾಹಸದಿಂದ ಲಕ್ಕಿಯನ್ನು ಹಿಡಿದು ಮರಕ್ಕೆ ಕಟ್ಟಲಾಗಿದ್ದು, ಕೆಲವು ಹೊತ್ತಿನಲ್ಲೇ ಅಸುನೀಗಿತು. ಕಾರ್ಕಳದ ಉಳೆಪಾಡಿಯಲ್ಲಿ ಅಂತ್ಯಸಂಸ್ಕಾರ ನಡೆಸಲಾಯಿತು. ನೂರಾರು ಕಂಬಳ ಅಭಿಮಾನಿಗಳು ನೆರೆದಿದ್ದರು.

ಅತ್ಯಂತ ಶಾಂತ ಸ್ವಭಾವದ ಲಕ್ಕಿ ಕಳೆದ ಕೆಲವು ವರ್ಷದಿಂದ ಕಂಬಳ ಕ್ಷೇತ್ರದಲ್ಲಿ ತನ್ನದೇ ಪ್ರಸಿದ್ಧಿ ಹೊಂದಿತ್ತು. ಐಕಳ ಪಂಚಾಯಿತಿ ಅಧ್ಯಕ್ಷ ಉಳ್ಪಾಡಿ ಬಡಗುಮನೆ ದಿವಾರ ಚೌಟ ಎರಡು ವರ್ಷಗಳ ಹಿಂದೆ ಭಟ್ಕಳದ ಎಚ್.ಎನ್.ನಿವಾಸದಿಂದ ಕರೆ ತಂದಿದ್ದರು. ಕಳೆದ ಬಾರಿ ಕಂಬಳದಲ್ಲಿ ಐದು ಮೆಡಲ್ ಪಡೆದಿದ್ದು, ಈ ಬಾರಿ ಮತ್ತೆ ಐದು ಮೆಡಲ್‌ಗಳನ್ನು ತನ್ನದಾಗಿಸಿತು. ಸ್ಥಳೀಯ ಕಂಬಳ ಮಾತ್ರವಲ್ಲದೆ ಬೆಂಗಳೂರು ಕಂಬಳದಲ್ಲಿಯೂ ಮೆಡಲ್ ಪಡೆದಿತ್ತು. ಕೊಂಡೋಟ್ಟು ಬೊಲ್ಲ, ತೆಗರ್ಸೆ ಪಾಂಡು, ನಾವುಂದ ಪುಟ್ಟ, ಮಳವೂರು ರಾಜೆ ಲಕ್ಕಿಯ ಅತ್ಯಂತ ಯಶಸ್ವಿ ಜೋಡಿಯಾಗಿತ್ತು. ಅಲ್ಲದೇ ಲಕ್ಕಿ ಕಂಬಳ ಅಭಿಮಾನಿಗಳಿಗೆ ಅಚ್ಚುಮೆಚ್ಚಿನದ್ದಾಗಿತ್ತು.

ಲಕ್ಕಿ ಶಾಂತ ಸ್ವಾಭಾವದ ಕೋಣವಾಗಿದ್ದು, ಮಕ್ಕಳಿಗೂ ತೊಂದರೆ ಮಾಡುತ್ತಿರಲಿಲ್ಲ. ಎರಡು ವರ್ಷದಿಂದ ನನ್ನ ಬಳಿ ಇದ್ದು, ನನಗೆ ಸಾಕಷ್ಟು ಪ್ರಸಿದ್ಧಿ ತಂದುಕೊಟ್ಟಿದೆ. ಸಾಕಷ್ಟು ಚಿಕಿತ್ಸೆ ನೀಡಿದರೂ ಪ್ರಯೋಜನವಾಗಿಲ್ಲ.-ದಿವಾಕರ ಚೌಟ, ಲಕ್ಕಿ ಕೋಣದ ಮಾಲೀಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net