ರೇಲಿಂಗ್ಸ್ ಫೀಲಿಂಗ್ಸ್!

Railings
Published on

ಬೆಂಗಳೂರು: ನಿರ್ಮಾಣ ಕ್ಷೇತ್ರದಲ್ಲಿ ಬಹಳಷ್ಟು ಬದಲಾವಣೆಗಳಾಗಿದ್ದು, ನಿವೇಶನ ಚಿಕ್ಕದಿರಲಿ ದೊಡ್ಡದಿರಲಿ ಬಹುಮಹಡಿ ಕಟ್ಟಡಗಳಿಗೆ ಆದ್ಯತೆ ಹೆಚ್ಚಿದೆ. ಇಂತಹ ಕಟ್ಟಡಗಳಲ್ಲಿ ಮೆಟ್ಟಿಲುಗಳು ವಾಸ್ತುಶಿಲ್ಪ ಮತ್ತು ವಿನ್ಯಾಸ ಪ್ರಮುಖ ಅಂಶವಾಗಿದೆ. ಹೀಗಾಗಿ ಸ್ಟೆಪ್ಸ್ ರೇಲಿಂಗ್ಸ್ (ಮೆಟ್ಟಿಲು ಬೇಲಿಗಳು) ವಿನ್ಯಾಸ ಬಹುಬೇಡಿಕೆ ಪಡೆದುಕೊಂಡಿದೆ.

ಮೆಟ್ಟಿಲುಗಳು ನೇರವಾಗಿರಲಿ, ಬಾಗಿದ ವೃತ್ತಾಕಾರದಲ್ಲಿರಲಿ ಯಾವುದೇ ಆಕಾರದಲ್ಲಿರಲಿ ಅವುಗಳ ನೋಟ ಹೆಚ್ಚಿಸುವಲ್ಲಿ ರೇಲಿಂಗ್ಸ್ ಪ್ರಮುಖ ಅಂಶವಾಗಿದೆ. ಇವನ್ನು ಕೇವಲ ಮೆಟ್ಟಿಲುಗಳಿಗೆ ಮಾತ್ರವಲ್ಲದೆ ಬಾಲ್ಕನಿ, ಗ್ಯಾಲರಿಗಳು, ಎತ್ತರದ ವೇದಿಕೆಗಳು ಮತ್ತು ಸುರಕ್ಷತಾ ಜಾಲಗಳಾಗಿ ಬಳಕೆ ಮಾಡಲಾಗುತ್ತದೆ. ಈ ನಿಟ್ಟಿನಲ್ಲಿ ನಿರ್ಮಾಣ ವಲಯದಲ್ಲಿ ಕ್ಲಾಸಿಕ್ ಮತ್ತು ಸಮಕಾಲೀನ ಸಂದರ್ಭದವರೆಗೆ ವಿವಿಧ ವಿನ್ಯಾಸಗಳ ರೇಲಿಂಗ್ಸ್‌ಗಳನ್ನು ಕಾಣಬಹುದಾಗಿದೆ.

ಮನೆ ರೇಲಿಂಗ್ ವಿನ್ಯಾಸಗಳು ಸಾಂಪ್ರದಾಯಿಕ, ಆಧುನಿಕ ಅಥವಾ ಸಾಮಾನ್ಯವಾದ ವಿವಿಧ ವಿನ್ಯಾಸಗಳನ್ನು ಹೊಂದಿರುತ್ತದೆ. ಮರ, ಕಬ್ಬಿಣ ಮಾತ್ರವಲ್ಲದೆ ಹಿತ್ತಾಳೆ ಮತ್ತು ತಾಮ್ರ ಲೋಹದಿಂದ ಮಾಡಿದ ವ್ಯಾಪಕ ಶ್ರೇಣಿಯ ವಸ್ತುಗಳಿಂದ ಮಾಡಿದ ರೇಲಿಂಗ್ಸ್‌ಗಳಿವೆ. ಸ್ಪೂರ್ತಿದಾಯಕ ವೈಶಿಷ್ಟ್ಯಗಳಿಂದ ಹಿಡಿದು ಬೆರಗುಗೊಳಿಸುವ ಮಾದರಿಗಳವರೆಗೆ ಈ ರೇಲಿಂಗ್ ವಿನ್ಯಾಸಗಳು ಮೆಟ್ಟಿಲು ಮತ್ತು ನಿರ್ದಿಷ್ಟ ಸ್ಥಳವನ್ನು ಆಕರ್ಷಕ ನೋಟವನ್ನು ನೀಡುತ್ತದೆ.

ಎಲ್ಲಾ ವಿಧದ ರೇಲಿಂಗ್ ವಿನ್ಯಾಸಗಳು ಎಲ್ಲ ಕಟ್ಟಡಗಳಿಗೂ ಹೊಂದಿಕೆ ಆಗುವುದಿಲ್ಲ. ಹಾಗಾಗಿ ಆಯಾ ಕಟ್ಟಡ ಒಳಾಂಗಣ ಹಾಗೂ ಹೊರಾಂಗಣ ವಿನ್ಯಾಸಕ್ಕೆ ಅನುಗುಣವಾಗಿ ಮರ, ಕಬ್ಬಿಣ, ಹಿತ್ತಾಳೆ, ಗಾಜಿನ ರೇಲಿಂಗ್‌ಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ನೀವು ಆಯ್ಕೆ ಮಾಡುವ ರೇಲಿಂಗ್ ಆ ಕಟ್ಟಡಕ್ಕೆ ಹೊಂದಿಕೊಳ್ಳುವಂತೆ ಇರಬೇಕು. ಆಯ್ಕೆ ಯಾವುದೇ ಇರಲಿ ಅದು ಮನೆ ಇರಲಿ, ಕಚೇರಿ ಆಗಿರಲಿ ಒಟ್ಟಾರೆ ನೋಟವನ್ನು ಎದ್ದು ಕಾಣುವಂತೆ ಮಾಡುವಲ್ಲಿ ರೇಲಿಂಗ್ ವಿಶೇಷ ಪಾತ್ರ ವಹಿಸುತ್ತದೆ.

ಹಿತ್ತಾಳೆ ರೇಲಿಂಗ್: ಸಾಂಪ್ರದಾಯಿಕ ವಿನ್ಯಾಸಗಳು ಮತ್ತು ಕ್ಲಾಸಿಕ್ ಮಾದರಿಗಳ ಪ್ರಿಯರಾಗಿದ್ದರೆ, ನಿಮ್ಮ ಮನೆಗೆ ಹಿತ್ತಾಳೆ ರೇಲಿಂಗ್ ಅನ್ನು ಆಯ್ಕೆ ಮಾಡಿಕೊಳ್ಳಬಹುದು. ಹಿತ್ತಾಳೆಯಲ್ಲಿ ರಚಿಸಲಾದ ಸಂಕೀರ್ಣ ವಿನ್ಯಾಸಗಳೊಂದಿಗೆ ಮರದ ಚೌಕಟ್ಟಿನಲ್ಲಿ ಸುತ್ತುವರಿಯಲ್ಪಟ್ಟ ರೇಲಿಂಗ್ ಅಕರ್ಷಕವಾಗಿರುತ್ತದೆ. ಇದು ಬಾಲ್ಕನಿಗೆ ಸೂಕ್ತವಾಗಿರುತ್ತದೆ. ಏಣಿಯ ಮಾದರಿ ಮೆಟ್ಟಿಲುಗಳಿಗೂ ಚಿನ್ನದ ವರ್ಣದ ರೇಲಿಂಗ್ ಭವ್ಯನೋಟ ನೀಡಲಿದೆ. ಮನೆಗೆ ಮಾತ್ರವಲ್ಲದೆ, ವಾಣಿಜ್ಯ ಸ್ಥಳಗಳಿಗೂ ಹಿತ್ತಾಳೆ ರೇಲಿಂಗ್ ಆಕರ್ಷಕ ಮತ್ತು ಜನಪ್ರಿಯ ಆಯ್ಕೆಯಾಗಿದೆ.

ಗಾಜಿನ ರೇಲಿಂಗ್: ಚಿಕ್ಕ ಮತ್ತು ಕಡಿಮೆ ಸ್ಥಳ ಇದ್ದರೆ ಅಂತಹ ಕಡೆ ಗಾಜಿನ ರೇಲಿಂಗ್ ವಿನ್ಯಾಸ ಸೂಕ್ತವಾಗಿರುತ್ತದೆ. ಬಾಟಲಿ ಹಸಿರು ಬಣ್ಣದ ರೇಲಿಂಗ್ ಮೆಟ್ಟಿಲಿನ ಸೊಬಗನ್ನು ಹೆಚ್ಚಿಸಲಿದೆ. ಸಮಕಾಲೀನ ಗಾಜಿನ ರೇಲಿಂಗ್ ವಿನ್ಯಾಸಗಳು ಕಚೇರಿಗಳಲ್ಲೂ ಅಚ್ಚುಮೆಚ್ಚಿನದ್ದಾಗಿದೆ. ಇದು ವಿನ್ಯಾಸಗಾರರ ಕೌಶಲಕ್ಕೆ ಹಿಡಿದ ಕನ್ನಡಿಯಂತಿರುತ್ತದೆ. ಇದು ನಿರ್ದಿಷ್ಟ ಸ್ಥಳದ ಅಂದವನ್ನು ಹೆಚ್ಚಿಸಿ, ಆಕರ್ಷಕ ಲುಕ್ ನೀಡಲಿದೆ.

ಮರದ ರೇಲಿಂಗ್: ಇದು ಬಹಳ ಪುರಾತನ ವಿನ್ಯಾಸವಾಗಿದ್ದು, ಅರಮನೆಗಳು ಸೇರಿ ನೂರಾರು ವರ್ಷಗಳ ಹಳೆಯ ಕಟ್ಟಡಗಳಲ್ಲಿ ಇಂದಿಗೂ ಮರದ ರೇಲಿಂಗ್‌ಗಳನ್ನು ಕಾಣಬಹುದಾಗಿದೆ. ಕಲಾವಿದರ ಕೈಚಳಕದಿಂದಾಗಿ ಮರದ ರೇಲಿಂಗ್ ಇಂದಿಗೂ ಪ್ರಸ್ತುತತೆಯನ್ನು ಪಡೆದುಕೊಂಡಿದೆ. ಗೃಹ ವಿನ್ಯಾಸದಲ್ಲಿ ಮರದಿಂದ ಗೋಡೆ ಬೀರು, ಟಿವಿ, ಶೋಕೇಸ್‌ಗಳನ್ನು ಮಾಡಿಸುವವರು ಮೆಟ್ಟಿಲುಗಳು, ಬಾಲ್ಕನಿಗೂ ಮರದ ರೇಲಿಂಗ್‌ಗಳನ್ನೇ ಮಾಡಿಸುತ್ತಾರೆ. ಹೀಗಾಗಿ ಇದು ಹಳೆಯದಾದರೂ, ಬೇಡಿಕೆಯನ್ನು ಹಾಗೇ ಉಳಿಸಿಕೊಂಡಿದೆ.

ಕಬ್ಬಿಣದ ರೇಲಿಂಗ್: ಇದು ಮಧ್ಯಮ ವರ್ಗದವರು ನಿರ್ಮಿಸುವ ಮನೆಗಳಲ್ಲಿ ಸರ್ವೇ ಸಾಮಾನ್ಯವಾಗಿದ್ದು, ಸರಳ ವಿನ್ಯಾಸದಿಂದ ಬಹುವಿಧದ ವಿನ್ಯಾಸಗಳಿಂದ ಕೂಡಿದೆ. ಶೇ. 75-80 ಮನೆಗಳಲ್ಲಿ ಮೆಟ್ಟಿಲು, ಬಾಲ್ಕನಿ ಸೇರಿ ಸುರಕ್ಷತಾ ಜಾಲಗಳಾಗಿ ಕಬ್ಬಿಣದ ರೇಲಿಂಗ್ ಬಳಕೆ ಕಾಣಬಹುದಾಗಿದೆ. ಇದು ಕಡಿಮೆ ವೆಚ್ಚದ ಹಾಗೂ ಆಕರ್ಷಕವಾಗಿ ಕಾಣುವ ರೇಲಿಂಗ್ ಆಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net