

ರಾಯಚೂರು: ತಾಲೂಕಿನ ತುಂಟಾಪುರ ಗ್ರಾಮದಲ್ಲಿ ರಸ್ತೆ, ಬೀದಿ ದೀಪ, ಸ್ವಚ್ಛತೆ, ಆರೋಗ್ಯ ಸೇರಿದಂತೆ ಇನ್ನಿತರ ಮೂಲಭೂತ ಸೌಲಭ್ಯಗಳಿಲ್ಲದೇ ಇಲ್ಲಿನ ಜನ ತೊಂದರೆ ಅನುಭವಿಸುತ್ತಿದ್ದು, ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕಾದ ಅಧಿಕಾರಿಗಳು, ಜನಪ್ರತಿನಿಧಿಗಳು ಕಣ್ಮುಚ್ಚಿ ಕುಳಿತಿದ್ದಾರೆ.
ರಾಯಚೂರು ಜಿಲ್ಲಾ ಕೇಂದ್ರದಿಂದ 14 ಕಿ.ಮೀ ಅಂತರದಲ್ಲಿರುವ ಗ್ರಾಮವು ರಾಷ್ಟ್ರೀಯ ಹೆದ್ದಾರಿ 167ಕ್ಕೆ ಹೊಂದಿಕೊಂಡಿದ್ದರೂ ಗ್ರಾಮದ ರಸ್ತೆಗಳು ಮಾತ್ರ ದುಸ್ಥಿತಿಯಲ್ಲಿವೆ. ಮಳೆ ನೀರು ಹಾಗೂ ಚರಂಡಿ ನೀರು ರಸ್ತೆಯ ಮೇಲೆ ನಿಂತು ರಸ್ತೆ ಸಂಪೂರ್ಣ ಹಾಳಾಗಿದ್ದು, ಓಡಾಡಲು ತೊಂದರೆ ಉಂಟಾಗಿದೆ.
ಸಂಚಾರ ಅಷ್ಟೆಯಲ್ಲದೇ ರಸ್ತೆಯ ಮೇಲೆ ನಿಂತ ನೀರಿನಿಂದ ಸೊಳ್ಳೆಗಳು ಹೆಚ್ಚಾಗಿ ಆರೋಗ್ಯ ಸಮಸ್ಯೆಗಳು ಎದುರಾಗುತ್ತಿವೆ.ಲಿಂಗನಖಾನದೊಡ್ಡಿ(ಎಲ್.ಕೆ ದೊಡ್ಡಿ) ಗ್ರಾಮ ಪಂಚಾಯತ್ ವ್ಯಾಪ್ತಿಗೆ ಒಳಪಡುವ ಈ ಗ್ರಾಮದಲ್ಲಿ 400 ಕ್ಕೂ ಹೆಚ್ಚಿನ ಕುಟುಂಬಗಳಿದ್ದು, ಒಂದು ಸಾವಿರಕ್ಕೂ ಹೆಚ್ಚಿನ ಜನಸಂಖ್ಯೆಯನ್ನು ಹೊಂದಿದೆ.
ಗ್ರಾಮ ಪಂಚಾಯತಿಯಿಂದ 12 ಕಿ.ಮೀ ದೂರದಲ್ಲಿರುವ ಈ ಗ್ರಾಮದಲ್ಲಿ ಸ್ವಚ್ಛತೆ ಕಣ್ಮರೆಯಾಗಿ ಹೋಗಿದೆ.
ಹಲವು ಬಾರಿ ಗ್ರಾಮಸ್ಥರು ಸಮಸ್ಯೆಗಳ ಬಗ್ಗೆ ಚುನಾವಣೆಯಲ್ಲಿ ಗೆದ್ದ ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ಮನವಿಗಳನ್ನು ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಚುನಾವಣೆ ಸಂದರ್ಭದಲ್ಲಿ ಇಲ್ಲಿನ ಜನಪ್ರತಿನೀಧಿಗಳು ನೀಡಿದ ಭರವಸೆ ಹುಸಿಯಾಗಿ ಹೋಗಿದೆ ಎಂಬುದು ಹಲವು ಗ್ರಾಮಸ್ಥರ ಅಭಿಪ್ರಾಯವಾಗಿದೆ.
ಗ್ರಾಮದಲ್ಲಿ ರಸ್ತೆಯಷ್ಟೆ ಅಲ್ಲದೇ ಆರೋಗ್ಯ ಸೌಲಭ್ಯವು ಇಲ್ಲದಂತಾಗಿದ್ದು, ಗ್ರಾಮದಲ್ಲಿ ಅನಾರೋಗ್ಯ ಕಂಡುಬಂದರೇ 6 ಕಿ.ಮೀ ದೂರದ ಯರಗೇರಾ ಅಥವಾ ಜಿಲ್ಲಾ ಕೇಂದ್ರಕ್ಕೆ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಗ್ರಾಮದಲ್ಲಿರುವ ಕುಡಿಯುವ ನೀರಿನ ನಲ್ಲಿಗಳ ಸುತ್ತಲೂ ಸ್ವಚ್ಛತೆ ಇಲ್ಲದೇ ಚರಂಡಿ ನೀರು ನಿಂತು ಅದೇ ನೀರಿನಲ್ಲಿ ಕುಡಿಯುವ ನೀರನ್ನು ತುಂಬಿಕೊಂಡು ಹೋಗಿ ಬಳಸುವ ಜನರಿಗೆ ಚರ್ಮ ಸಮಸ್ಯೆಗಳು ಎದುರಾಗುತ್ತಿವೆ.
ಗ್ರಾಮ ಪಂಚಾಯತಿಯಿಮದ ದಿನನಿತ್ಯ ಮನೆ ಮನೆಯಿಂದ ಕಸ ಸಂಗ್ರಹಿಸುವ ವಾಹನ ಗ್ರಾಮಕ್ಕೆ ಬರುವುದಿಲ್ಲ. ಇದರಿಂದ ಜನರು ಎಲ್ಲಂದರಲ್ಲಿ ಕಸ ಬಿಸಾಡುವುದರಿಂದ ನಾನಾ ರೋಗಗಳು ಉಂಟಾಗುತ್ತಿವೆ.
ಕೆಕೆಆರ್‌ಡಿಬಿ ಮ್ಯಾಕ್ರೋ ಯೋಜನೆಯಡಿ 2022-23 ನೇ ಸಾಲಿನಲ್ಲಿ 3 ಕೋಟಿ ವೆಚ್ಚದಲ್ಲಿ ಹೊಸ ಆರೋಗ್ಯ ಕೇಂದ್ರಗಳ ನಿರ್ಮಾಣಕ್ಕೆ ಮಂಜೂರಾತಿ ನೀಡಲಾಗಿತ್ತು. ಆದರೆ ಈವರೆಗೂ ಪ್ರಾಥಮಿಕ ಆರೋಗ್ಯ ಕೇಂದ್ರ ನಿರ್ಮಾಣವಾಗಿಲ್ಲ. ಜತೆಗೆ ಆರೋಗ್ಯ ಕೇಂದ್ರಕ್ಕೆ ವೈದ್ಯಾಧಿಕಾರಿಗಳು, ಸಿಬ್ಬಂದಿ, ಪೀಠೋಪಕರಣಕ್ಕಾಗಿ 9.50 ಕೋಟಿ ಅನುದಾನಕ್ಕೆ ಉಪ ಯೋಜನೆವಾರು ಮಂಜೂರಾತಿ ನೀಡಲಾಗಿತ್ತು ಆದರೆ ಈವರಗೆ ಕಾರ್ಯರೂಪಕ್ಕೆ ಬಂದಿಲ್ಲ.
ಕೂಡಲೇ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಎಚ್ಚೆತ್ತುಕೊಂಡು ತುಂಟಾಪುರ ಗ್ರಾಮಕ್ಕೆ ರಸ್ತೆ, ಆರೋಗ್ಯ ಕೇಂದ್ರ, ಚರಂಡಿ ಸ್ವಚ್ಛತೆ ಸೇರಿ ಇನ್ನಿತರ ಮೂಲಭೂತ ಸೌಲಭ್ಯಗಳನ್ನು ನೀಡಲು ಮುಂದಾಗಬೇಕಾಗಿದೆ.