

ರಾಯಚೂರು: ಕೋಲ್ಕತ್ತಾದ ವೈದ್ಯೆಯ ಮೇಲಿನ ಅತ್ಯಾಚಾರ ಹಾಗೂ ಕೊಲೆ ಖಂಡಿಸಿ ಶನಿವಾರ ಜಿಲ್ಲೆಯ ಎಲ್ಲ ಖಾಸಗಿ ಆಸ್ಪತ್ರೆಗಳಲ್ಲಿ ತುರ್ತು ಸೇವಗಳನ್ನು ಹೊರತುಪಡಿಸಿ ಉಳಿದೆಲ್ಲ ವೈದ್ಯಕೀಯ ಸೇವೆಗಳನ್ನು ಬಂದ್ ಮಾಡಲಾಯಿತು.
ಭಾರತೀಯ ವೈದ್ಯಕೀಯ ಸಂಘ(ಐಎಂಎ)ದ ಕರೆಯಾನುಸಾರ ಶನಿವಾರ ಬೆಳಿಗ್ಗೆ 6 ಗಂಟೆಯಿಂದ ಭಾನುವಾರ ಬೆಳಿಗ್ಗೆ 6 ಗಂಟೆಯವರೆಗೆ ವೈದ್ಯಕೀಯ ಸೇವೆಗಳನ್ನು ಬಹಿಷ್ಕರಿಸಲಾಯಿತು. ನಗರದ ಎಲ್ಲ ಖಾಸಗಿ ಕ್ಲಿನಿಕ್‌ಗಳು, ಆಸ್ಪತ್ರೆಗಳಲ್ಲಿ ಒಪಿಡಿ ಸೇವೆಗಳನ್ನು ಬಂದ್ ಮಾಡಲಾಯಿತು.
ಹೊರ ರೋಗಿಗಳ ತಪಾಸಣೆ ಮತ್ತು ಚಿಕಿತ್ಸೆಯನ್ನು ಬಂದ್ ಮಾಡಲಾದ ಪರಿಣಾಮ ದೂರದ ಊರಿನಿಂದ ಮುಷ್ಕರದ ಬಗ್ಗೆ ಮಾಹಿತಿಯಿಲ್ಲದೇ ಬಂದ ಜನರು ಆಸ್ಪತ್ರೆಗಳ ಮುಖ್ಯದ್ವಾರಕ್ಕೆ ಅಂಟಿಸಿದ ಮುಷ್ಕರದ ಪೋಸ್ಟರ್ ನೋಡಿ ನಿರಾಶೆಯಿಂದ ವಾಪಸ್ ಊರಿಗೆ ಹೋಗಬೇಕಾದ ಪರಿಸ್ಥಿತಿ ಉಂಟಾಯಿತು.
ನಗರದ ಭಂಡಾರಿ ಆಸ್ಪತ್ರೆ, ಶಿವಂ ಆಸ್ಪತ್ರೆ, ಬಾಲಂಕು, ನ್ಯೂ ಅಮೃತ ಆಸ್ಪತ್ರೆ ಸೇರಿದಂತೆ ಎಲ್ಲ ಖಾಸಗಿ ಆಸ್ಪತ್ರೆಗಳಲ್ಲಿ ಹೊರರೋಗಿಗಳ ಚಿಕಿತ್ಸೆಗೆ ಅವಕಾಶವಿರಲಿಲ್ಲ. ಡಾಕ್ಟರ್ಸ್ ಲೈನ್‌ನ ಎಲ್ಲ ಕ್ಲಿನಿಕ್‌ಗಳು ಮುಚ್ಚಿದ್ದರ ಪರಿಣಾಮ ಪೇಟ್ಲಾಬುರ್ಜ್‌ನ ರಸ್ತೆಗಳು ಬಿಕೋ ಎನ್ನುತ್ತಿದ್ದವು.