

ಮಂಗಳೂರು: ಪಶ್ಚಿಮ ಬಂಗಾಳದ ಕೋಲ್ಕತ್ತಾದ ಆರ್.ಜಿ. ಕಾರ್ ಮೆಡಿಕಲ್ ಕಾಲೇಜು ಆಸ್ಪತ್ರೆಯ ವೈದ್ಯೆಯಯನ್ನು ಸಾಮೂಹಿಕವಾಗಿ ಅತ್ಯಾಚಾರವೆಸಗಿ ಕೊಲೆ ಮಾಡಿರುವ ಘಟನೆಯನ್ನು ಖಂಡಿಸಿ ಇಂಡಿಯನ್ ಮೆಡಿಕಲ್ ಅಸೋಸಿಯೇಷನ್(ಐಎಂಎ) ದ.ಕ. ಜಿಲ್ಲಾ ಘಟಕದ ಆಶ್ರಯದಲ್ಲಿ ಶನಿವಾರ ಖಾಸಗಿ ಆಸ್ಪತ್ರೆ ಹಾಗೂ ಕ್ಲಿನಿಕ್ಗಳ ವೈದ್ಯರು ಹಾಗೂ ಸಿಬ್ಬಂದಿ ಹೊರರೋಗಿ ವಿಭಾಗ ಬಂದ್ ಮಾಡಿ 24 ಗಂಟೆಗಳ ಪ್ರತಿಭಟನೆ ನಡೆಸಿದರು.
ಆ.17ರ ಬೆಳಗ್ಗೆ 6 ಗಂಟೆಯಿಂದ ಆ.18 ರ ಬೆಳಗ್ಗೆ 6 ಗಂಟೆ ವರೆಗೆ ಪ್ರತಿಭಟನೆ ನಡೆಸಿದ್ದು, ಈ ವೇಳೆ ತುರ್ತು ಚಿಕಿತ್ಸೆ ಹೊರತುಪಡಿಸಿ ಬೇರೆ ಯಾವುದೇ ಹೊರ ರೋಗಿ ವಿಭಾಗದ ಸೇವೆಯನ್ನು ಸ್ಥಗಿತಗೊಳಿಸಲಾಗಿತ್ತು. ಇದರಿಂದಾಗಿ ಚಿಕಿತ್ಸೆಗೆ ಆಗಮಿಸಿದ ರೋಗಿಗಳು ಪರದಾಟ ನಡೆಸುವಂತಾಯಿತು. ವೈದ್ಯರ ಮುಷ್ಕರದ ಮಾಹಿತಿ ಇಲ್ಲದೆ ಆಗಮಿಸಿದ ರೋಗಿಗಳು ವಾಪಸ್ ಮನೆಗೆ ಮರಳುವಂತಾಯಿತು.
ಎಲ್ಲಾ ಖಾಸಗಿ ಆಸ್ಪತ್ರೆಗಳು, ಮೆಡಿಕಲ್ ಕಾಲೇಜು, ಕ್ಲಿನಿಕ್ ಬಂದ್ ಆಗಿದ್ದವು. ಹೊರರೋಗಿ ಸಹಿತ ಇತರ ಸೇವೆಗಳು ಇರಲಿಲ್ಲ. ವೈದ್ಯರು ಸೇವೆಗೆ ಸಿಗಲಿಲ್ಲ. ಎಕ್ಸ್ರೇ, ಸ್ಕಾೃನಿಂಗ್ ಸೆಂಟರ್ಗಳಿರಲಿಲ್ಲ. ಆಸ್ಪತ್ರೆಗಳಿಗೆ ದಾಖಲಾತಿ ನಡೆಯಲಿಲ್ಲ. ತುರ್ತು ಚಿಕಿತ್ಸೆ ಮಾತ್ರ ಲಭ್ಯವಿತ್ತು. ಕಪ್ಪು ಪಟ್ಟಿ ಧರಿಸಿ ವೈದ್ಯರು, ಸಿಬ್ಬಂದಿ ತುರ್ತು ಸೇವೆ ನೀಡಿದರು. ಸದಾ ಜನಜಂಗುಳಿಯಿಂದ ಕೂಡಿರುತ್ತಿದ್ದ ಖಾಸಗಿ ಆಸ್ಪತ್ರೆಗಳು ಬಿಕೋ ಎನ್ನುವಂತಿತ್ತು.
ಸರ್ಕಾರಿ ಸೇವೆಯಲ್ಲೂ ವ್ಯತ್ಯಯ: ತಾಲೂಕು ಆಸ್ಪತ್ರೆಗಳಲ್ಲಿ ಸಣ್ಣ ಮಟ್ಟದಲ್ಲಿ ಸಮಸ್ಯೆಯಾಗಿದ್ದು, ನಿರ್ವಹಣೆ ಮಾಡಿದ್ದೇವೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಚ್.ಆರ್.ತಿಮ್ಮಯ್ಯ ತಿಳಿಸಿದ್ದಾರೆ. ಸರ್ಕಾರಿ-ಖಾಸಗಿ ಸಹಭಾಗಿತ್ವದ ವೆನ್ಲಾಕ್ ಆಸ್ಪತ್ರೆಯಲ್ಲಿ ತುರ್ತು ಸೇವೆಗಳು ಮಾತ್ರ ಲಭ್ಯವಿತ್ತು. ಇಲ್ಲಿನ ಖಾಸಗಿ ವೈದ್ಯರು ಪ್ರತಿಭಟನೆಯಲ್ಲಿ ಭಾಗಿಯಾದ ಕಾರಣ ವೈದ್ಯಕೀಯ ಸೇವೆಯಲ್ಲಿ ವ್ಯತ್ಯಯ ಉಂಟಾಯಿತು. ಆಸ್ಪತ್ರೆಗೆ ಬಂದ ರೋಗಿಗಳಿಗೆ ಯಾವುದೇ ಸಮಸ್ಯೆ ಉಂಟಾಗದಂತೆ ಗರಿಷ್ಠ ಪ್ರಯತ್ನ ಕೈಗೊಂಡಿದ್ದೇವೆ ಎಂದು ವೆನ್ಲಾಕ್ ಅಧೀಕ್ಷಕಿ ಡಾ.ಜೆಸಿಂತಾ ಡಿಸೋಜ ತಿಳಿಸಿದ್ದಾರೆ.
ಮಂಗಳೂರಲ್ಲಿ ಬೃಹತ್ ಮೌನ ಪ್ರತಿಭಟನೆ:
ಮಂಗಳೂರಿನಲ್ಲಿ ಐಎಂಎ ವತಿಯಿಂದ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಯಿತು. ಈ ಮೆರವಣಿಗೆಯಲ್ಲಿ ಐಎಂಎ ಪದಾಧಿಕಾರಿಗಳು, ದಂತವೈದ್ಯಕೀಯ, ಆಯುಷ್, ರೆಡ್ಕ್ರಾಸ್ ಸೇರಿದಂತೆ ವಿವಿಧ ವೈದ್ಯಕೀಯ ಸಂಘಟನೆಗಳು, ನಸಿರ್ಂಗ್ ವೈದ್ಯಕೀಯ ವಿದ್ಯಾರ್ಥಿಗಳು
ಕಪ್ಪುಪಟ್ಟಿ ಧರಿಸಿ, ನ್ಯಾಯಕ್ಕಾಗಿ ಆಗ್ರಹದ ಫಲಕ ಹಿಡಿದುಕೊಂಡು ಪಾಲ್ಗೊಂಡಿದ್ದರು. ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಶಾಸಕರಾದ ವೇದವ್ಯಾಸ್ ಕಾಮತ್. ಡಾ.ಭರತ್ ಶೆಟ್ಟಿ ಬೆಂಬಲ ಸೂಚಿಸಿ ಮೆರವಣಿಗೆಯ ಮುಂಚೂಣಿಯಲ್ಲಿ ಭಾಗವಹಿಸಿದ್ದರು.
ನಗರದ ಐಎಂಎ ಹೌಸ್ನಿಂದ ಬೃಹತ್ ಮೌನ ಪ್ರತಿಭಟನಾ ಮೆರವಣಿಗೆ ಹೊರಟು ಜಿಲ್ಲಾಧಿಕಾರಿ ಕಚೇರಿ ಗೇಟಿನ ಬಳಿ ಕೊನೆಗೊಂಡಿತು. ಡಿಸಿ ಕಚೇರಿ ವರೆಗೆ ತೆರಳಲು ಮುಂದಾದರೂ ಪೊಲೀಸರು ಅನುಮತಿ ನೀಡಲಿಲ್ಲ. ಬಳಿಕ ಪ್ರತಿಭಟನಾಕಾರರ ಬಳಿಗೆ ಆಗಮಿಸಿದ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಮನವಿ ಸ್ವೀಕರಿಸಿ ರಾಜ್ಯಪಾಲರು ಹಾಗೂ ಕೇಂದ್ರ ಸರ್ಕಾರಕ್ಕೆ ಕಳುಹಿಸಿಕೊಡುವುದಾಗಿ ಹೇಳಿದರು.
ಸಿಬಿಐ ತನಿಖೆ, ನ್ಯಾಯಕ್ಕೆ ಆಗ್ರಹ:
ದಾರುಣವಾಗಿ ಅತ್ಯಾಚಾರಗೊಂಡು ಕೊಲೆಗೀಡಾದ ಕೋಲ್ಕತ್ತಾದ ವೈದ್ಯೆಯ ಕುಟುಂಬಕ್ಕೆ ನ್ಯಾಯ ಒದಗಿಸಬೇಕು. ಘಟನೆಯ ತನಿಖೆಯನ್ನು ಸಿಬಿಐ ವಹಿಸಿ ಅಪರಾಧಿಗೆ ಕಠಿಣ ಶಿಕ್ಷೆ ಆಗಬೇಕು ಎಂದು ಸರ್ಕಾರವನ್ನು ಒತ್ತಾಯಿಸಿ ಮನವಿ ಸಲ್ಲಿಸಲಾಯಿತು. ಈ ಸಂದರ್ಭ ಐಎಂಎ ಅಧ್ಯಕ್ಷ ಡಾ.ಅಶೋಕನ್, ನಿಯೋಜಿತ ಅಧ್ಯಕ್ಷೆ ಡಾ.ಜೆನ್ಸಿ ಮರಿಯಾ ಡಿಸೋಜ, ಡಾ.ರಂಜನ್ ಮತ್ತಿತರರಿದ್ದರು.