ಕಲ್ಯಾಣ ಕರ್ನಾಟಕ ಉತ್ಸವದ ಹಿಂದೆ ಹೋರಾಟಗಾರ ತ್ಯಾಗ ಬಲಿದಾನವಿದೆ: ಸಚಿವ ಡಾ.ಶರಣಪ್ರಕಾಶ ಪಾಟೀಲ್

raichur flag
Published on

ರಾಯಚೂರು: ಕಲ್ಯಾಣ ಕರ್ನಾಟಕ ಉತ್ಸವದ ಹಿನ್ನೆಲೆ ಮತ್ತು ಇತಿಹಾಸದ ಕುರಿತು ಯುವಕರು ತಿಳಿದುಕೊಳ್ಳುವುದು ಬಹಳ ಮುಖ್ಯ ಎಂದು ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಹೇಳಿದರು.

ನಗರದ ಮಹತ್ಮಾಗಾಂಧೀ ಜಿಲ್ಲಾ ಕ್ರೀಡಾಂಗಣದಲ್ಲಿ ಕಲ್ಯಾಣ ಕರ್ನಾಟಕ ಉತ್ಸವದ ಹಿನ್ನೆಲೆ ರಾಷ್ಟ್ರಧ್ವಜಾರೋಹಣ ನೆರವೇರಿಸಿ ಮಂಗಳವಾರ ಮಾತನಾಡಿ, ಕಲ್ಯಾಣ ಕರ್ನಾಟಕ ಭಾಗಕ್ಕೆ 371 ಜೆ ಕಾನೂನು ಅತ್ಯಂತ ವಿಶೇಷವಾದ ಸ್ಥಾನಮಾನವನ್ನು ತಂದುಕೊಟ್ಟಿದೆ. ಕಲ್ಯಾಣ ಕರ್ನಾಟಕ ಉತ್ಸವದ ಹಿಂದೆ ಅನೇಕ ಹೋರಾಟಗಾರರ ತ್ಯಾಗ ಬಲಿದಾನವಿದೆ ಎಂದರು.

ಹೋರಾಟಗಾರರ ಶ್ರಮದ ಫಲವಾಗಿ ಇಂದು ನಾವು ಸ್ವಾತಂತ್ರೃರಾಗಿದ್ದೇವೆ. ಈ ಎಲ್ಲ ವಿಚಾರಗಳನ್ನು ಇಂದಿನ ಯುವ ಪೀಳಿಗೆ ಅರಿತುಕೊಳ್ಳಬೇಕು. 371 ಜೆ ಕಾನೂನಿಂದ ಕಲ್ಯಾಣ ಭಾಗಕ್ಕೆ ಮೂರು ಲಾಭಗಳು ದೊರೆತಿವೆ. ಈ ಲಾಭಗಳಿಂದ ಈ ಭಾಗ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತಿದೆ ಎಂದು ಹೇಳಿದರು.
ವೈದ್ಯಕೀಯ ಹಾಗೂ ಇಂಜಿನಿಯರಿಂಗ್ ಸೀಟು ಪಡೆಯಲು 371 ಜೆ ಮೀಸಲಾತಿ ಸಹಕಾರಿಯಾಗಿದೆ.

960 ಎಂಬಿಬಿಎಸ್ ಸೀಟುಗಳನ್ನು ಕಲ್ಯಾಣ ಕರ್ನಾಟಕ ಭಾಗದ ವಿದ್ಯಾರ್ಥಿಗಳಿಗೆ ಮೀಸಲಾತಿ ಅನ್ವಯ ನೀಡುವ ಯೋಜನೆಯಿದೆ ಇದರಿಂದ ಮುಂದೆ ವಿದ್ಯಾರ್ಥಿಗಳಿಗೆ ಭವಿಷ್ಯವಿದೆ ಎಂದರು.

ರಾಜ್ಯ ಸರ್ಕಾರದ ಸಿ ಮತ್ತು ಡಿ ಗ್ರೂಪ್‌ಗಳಲ್ಲಿ ಹುದ್ದೆ ಪಡೆಯಲು ಕಲ್ಯಾಣ ಕರ್ನಾಟಕ ಭಾಗದ ಜನರಿಗೆ ವಿಶೇಷ ಅವಕಾಶವಿದ್ದು, 2014ರಿಂದ ಇಲ್ಲಿಯವರೆಗೆ 80 ಸಾವಿರ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗಿದೆ ಮುಂದಿನ ಮೂರು ವರ್ಷಗಳಲ್ಲಿ 40 ಸಾವಿರ ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳುವ ಸಂಕಲ್ಪವನ್ನು ರಾಜ್ಯ ಸರ್ಕಾರ ಹೊಂದಿದೆ. ಮುಂದಿನ ವರ್ಷದಲ್ಲಿ 15 ಸಾವಿರ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುವುದು ಎಂದರು.

ರಾಜ್ಯ ಸರ್ಕಾರ ಚುನಾವಣಾ ಪೂರ್ವದಲ್ಲಿ ಭರವಸೆ ನೀಡಿದಂತೆ ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗೆ ಐದು ಸಾವಿರ ಕೋಟಿ ರೂ.ಗಳನ್ನು ಕೆಕೆಆರ್‌ಡಿಬಿಗೆ ನೀಡಿ ಕ.ಕ ಭಾಗದ ಅಭಿವೃದ್ಧಿಗೆ ಬದ್ಧವಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್ ಬೋಸರಾಜು, ಸಂಸದ ಜಿ.ಕುಮಾರ್ ನಾಯಕ, ಗ್ರಾಮೀಣ ಶಾಸಕ ಬಸನಗೌಡ ದದ್ದಲ್, ವಿಧಾನ ಪರಿಷತ್ ಸದಸ್ಯ ಎ.ವಸಂತಕುಮಾರ್, ನಗರಸಭೆ ಅಧ್ಯಕ್ಷೆ ನರಸಮ್ಮ ಮಾಡಗಿರಿ, ಎಪಿಎಂಸಿ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ್, ಡಿಸಿ ಕೆ.ನಿತೀಶ್, ಜಿ.ಪಂ ಸಿಇಒ ರಾಹುಲ ತುಕಾರಾಮ್ ಪಾಂಡ್ವೆ, ಎಸ್ಪಿ ಎಂ.ಪುಟ್ಟಮಾದಯ್ಯ, ಎಸಿ ಗಜಾನನ ಬಾಲೆ, ಎಡಿಸಿ ಶಿವಾನಂದ ಭಜಂತ್ರಿ, ಎಎಸ್ಪಿ ಶಿವಕುಮಾರ ಸೇರಿದಂತೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net