ಆರು ತಿಂಗಳಾದರೂ ಎರಡೇ ಪಾಠ ಪೂರ್ಣ: ಕಲ್ಲೂರು ಪ್ರೌಢ ಶಾಲೆಯ ವಿದ್ಯಾರ್ಥಿಗಳ ಗೋಳು

Kallur highschool
Published on

ರಾಯಚೂರು: ಜಿಲ್ಲೆಯ ಸಿರವಾರ ತಾಲೂಕಿನ ಕಲ್ಲೂರು ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಪಠ್ಯಕ್ರಮದಾನುಸಾರ ಪಾಠಗಳಾಗದೇ ವಿದ್ಯಾರ್ಥಿಗಳು ಗೊಂದಲಕ್ಕೆ ಸಿಲುಕಿದ್ದು, ಶಾಲೆ ಆರಂಭವಾಗಿ ಆರು ತಿಂಗಳು ಕಳೆದಿದ್ದರೂ ಸಮಾಜ ವಿಜ್ಞಾನ ವಿಷಯದಲ್ಲಿ ಕೇವಲ ಎರಡು ಪಾಠಗಳಾಗಿವೆ.

ಪ್ರಸ್ತುತ ಮಧ್ಯವಾರ್ಷಿಕ ಪರೀಕ್ಷೆಗಳು ನಡೆಯುತ್ತಿದ್ದು, ಪಾಠಗಳು ಸರಿಯಾಗಿ ಆಗದೇ ಪರೀಕ್ಷೆಯಲ್ಲಿ ಹೇಗೆ ಬರೆಯುವುದು ಎಂಬ ಚಿಂತೆಯಲ್ಲಿ ವಿದ್ಯಾರ್ಥಿಗಳಿದ್ದಾರೆ. ಸಮಾಜ ವಿಜ್ಞಾನಕ್ಕೆ ಕೇವಲ ಒಬ್ಬ ಶಿಕ್ಷಕಿ ಇದ್ದು, ಎರಡು ತರಗತಿಗಳನ್ನು ತೆಗೆದುಕೊಳ್ಳಲು ನಿರಾಕರಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ಪ್ರತಿ ಬಾರಿಯೂ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಸಮಾಜ ವಿಜ್ಞಾನ ವಿಷಯದಲ್ಲಿ ಶಾಲೆಯ ಫಲಿತಾಶ ಕಡಿಮೆಯಾಗಿರುವುದು ಕಂಡುಬಂದಿದೆ.
ಸೆ.10ರಂದು ವಲಯ ಸಂಪನ್ಮೂಲ ಕೇಂದ್ರದ ಅಧಿಕಾರಿಗಳು ಶಾಲೆಗೆ ಭೇಟಿ ನೀಡಿ ಮುಖ್ಯಗುರುಗಳು, ಶಿಕ್ಷಕರೊಂದಿಗೆ ಸಂದರ್ಶನ ನಡೆಸಿದ್ದು, ಪಾಠಗಳು ಆಗದಿರುವ ಬಗ್ಗೆ ಯೋಜಿಸಿ ಕ್ರಮವಹಿಸುವಂತೆ ಸಂದರ್ಶನ ವರದಿಯನ್ನು ನೀಡಿದ್ದಾರೆ ಆದರೆ ಈವರೆಗೂ ಯಾವುದೇ ಕ್ರಮವಾಗಿಲ್ಲ.

ಶಿಕ್ಷಕರ, ಮುಖ್ಯಗುರು ಹಾಗೂ ಅಧಿಕಾರಿಗಳ ನಿರ್ಲಕ್ಷೃದಿಂದ ವಿದ್ಯಾರ್ಥಿಗಳು ಸೆ.30ರಂದು ನಡೆಯುವ ಮಧ್ಯವಾರ್ಷಿಕ ಪರೀಕ್ಷೆಯ ಸಮಾಜ ವಿಜ್ಞಾನ ವಿಷಯದ ಪರೀಕ್ಷೆಯಲ್ಲಿ ಹೇಗೆ ಬರೆಯುವುದು ಎಂಬ ಗೊಂದಲದಲ್ಲಿದ್ದಾರೆ.

ಸಮಾಜ ವಿಜ್ಞಾನ ಪಾಠ ತೆಗೆದುಕೊಳ್ಳಲು ಶಿಕ್ಷಕರಿಗೆ ಸಾಕಷ್ಟು ಬಾರಿ ತಿಳಿಸಲಾಗಿದೆ. ಆದರೂ ಶಿಕ್ಷಕರು ಮಾತು ಕೇಳುತ್ತಿಲ್ಲ. ಈ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೂ ತರಲಾಗಿದೆ. |ಮಹ್ಮದ್ ಪೀರಾನ್, ಮುಖ್ಯಗುರು, ಸರ್ಕಾರಿ ಪ್ರೌಢಶಾಲೆ ಕಲ್ಲೂರು.

ಇರುವ ಶಿಕ್ಷಕರು ಪಾಠ ತೆಗೆದುಕೊಳ್ಳಲು ಸೂಚಿಸಲಾಗಿದ್ದರೂ ತರಗತಿಗೆ ಹೋಗಿ ಪಾಠ ಹೇಳದೇ ವಿಷಯ ಶಿಕ್ಷಕರು ಸಹಕಾರ ನೀಡುತ್ತಿಲ್ಲ ಎಂಬುದರ ಬಗ್ಗೆ ಉಪನಿರ್ದೇಶಕರಿಗೆ ವರದಿ ಕಳಿಸಲು ಸೂಚಿಸಲಾಗಿದೆ. |ಚಂದ್ರಶೇಖರ ದೊಡ್ಡಮನಿ, ಬಿಇಒ, ಮಾನ್ವಿ

ಪಾಠಗಳಾಗದ ಬಗ್ಗೆ ಮಕ್ಕಳು ಹೇಳುತ್ತಿದ್ದು, ಈ ಬಗ್ಗೆ ಮುಖ್ಯಗುರುಗಳಾಗಲಿ, ಇಲಾಖೆಯ ಮೇಲಾಧಿಕಾರಿಗಳಾಗಲಿ ಸರಿಯಾದ ಸ್ಪಷ್ಟನೆ ನೀಡುತ್ತಿಲ್ಲ. ಮಕ್ಕಳಿಗೆ ಇದರಿಂದ ಗೊಂದಲ ಉಂಟಾಗುತ್ತಿದೆ. ಪಾಠಗಳೇ ಆಗದಿದ್ದಲ್ಲಿ ಪರೀಕ್ಷೆ ಹೇಗೆ ಬರೆಯುತ್ತಾರೆ. | ಗಂಗಣ್ಣ, ವಿದ್ಯಾರ್ಥಿ ಪಾಲಕ, ಕಲ್ಲೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net