

ರಾಯಚೂರು: ರಾಯಚೂರು ತಾಲೂಕಿನ ಗಿಲ್ಲೆಸುಗೂರು ಕೇಂದ್ರವನ್ನು ತಾಲೂಕು ಕೇಂದ್ರವನ್ನಾಗಿ ಘೋಷಿಸುವಂತೆ ಗಿಲ್ಲೆಸುಗೂರು ಗ್ರಾಮಸ್ಥರಿಂದ ಡಿಸಿ ಕಚೇರಿ ಆವರಣದಲ್ಲಿ ಕಚೇರಿಯ ಸ್ಥಾನಿಕ ಅಧಿಕಾರಿ ಪರಶುರಾಮ್‌ಗೆ ಶನಿವಾರ ಮನವಿ ಪತ್ರ ಸಲ್ಲಿಸಲಾಯಿತು.
ಗಿಲ್ಲೆಸುಗೂರು ಹೋಬಳಿ ವ್ಯಾಪ್ತಿಯಲ್ಲಿ 14-15 ಗ್ರಾಪಂ.ಗಳಿದ್ದು, ಸಮೀಪದಲ್ಲಿಯೇ ಮಂತ್ರಾಲಯ, ಪಂಚಮುಖಿ, ಬಿಚ್ಚಾಲಿಯ ಏಕಶಿಲಾ ಬೃಂದಾವನ ಸೇರಿದಂತೆ ಇನ್ನಿತರ ದೇವಸ್ಥಾನಗಳಿದ್ದು, ಪ್ರದೇಶವು ಪ್ರವಾಸಿ ತಾಣವಾಗಿ ಗುರುತಿಸಿಕೊಂಡಿದೆ. ನೀರಿನ ಸೌಲಭ್ಯ, ರಾಷ್ಟ್ರೀಯ ಹೆದ್ದಾರಿ. ಸಮೀಪದಲ್ಲಿಯೇ ರೈಲು ನಿಲ್ದಾಣ ಇರುವುದರಿಂದ ತಾಲೂಕು ಕೇಂದ್ರಕ್ಕೆ ಬೇಕಾದ ಎಲ್ಲ ಸೌಲಭ್ಯಗಳನ್ನು ಗಿಲ್ಲೆಸುಗೂರು ಗ್ರಾಮ ಒಳಗೊಂಡಿದೆ.
ಗಡಿನಾಡು ಪ್ರದೇಶವಾದ್ದರಿಂದ, ತಾಲೂಕು ಕೇಂದ್ರವನ್ನಾಗಿಸಿದರೆ ಈ ಭಾಗದಲ್ಲಿ ಹೆಚ್ಚಿನ ಅಭಿವೃದ್ಧಿ ಕಾರ್ಯಗಳಾಗಲಿವೆ. ಗಿಲ್ಲೆಸುಗೂರು ಪಕ್ಕದ ಚಿಕ್ಕ ಮಂಚಾಲಿ ಗ್ರಾಮದ ಬಳಿ ಬ್ರಿಜ್ ಕಂ ಬ್ಯಾರೆಜ್ ಆಗಿದ್ದು, ವಿದ್ಯುತ್ ಸ್ಥಾವರ ಸ್ಥಾಪಿಸಬಹುದಾಗಿರುತ್ತದೆ. ಸುಮಾರು 40-50 ಹಳ್ಳಿಗಳ ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ತುಂಬಾ ಅನುಕೂಲವಾಗುತ್ತದೆ ಎಂದು ಮನವಿ ಮಾಡಲಾಯಿತು.
ಈ ಸಂದರ್ಭದಲ್ಲಿ ಪ್ರಮುಖರಾದ ನಿಧಿರಾವ್ ಕಸ್ಬೆ, ಅಂಜು ಬೇಗಂ, ಚಂದ್ರಶೇಖರ, ಅಕ್ಬರ್, ಕೆ.ನಾಗರಾಜ, ರಾಜು, ವೀರೇಶ, ತಾಯಪ್ಪ, ಈಶ್ವರ ನವೀನ ಕುಮಾರ, ಉದಯ, ದಿಲೀಪ್, ಸೇರಿದಂತೆ ತರರಿದ್ದರು.