ರೈತರ ಸಮಸ್ಯೆಗಳ ಕುರಿತು ಡಿಸಿಎಂ ಅನುಚಿತ ವರ್ತನೆ: ಚಾಮರಸ ಮಾಲೀಪಾಟೀಲ್

IMG-20240924-WA0018
Published on

ರಾಯಚೂರು: ಕೊನೆ ಭಾಗದ ರೈತರಿಗೆ ನೀರು, ನೀರಿನ ನಿರ್ವಹಣೆ ಸೇರಿದಂತೆ ರೈತರ ಹಲವು ಸಮಸ್ಯೆಗಳಿಗೆ ಸರ್ಕಾರ ಪರಿಹಾರ ನೀಡಲು ಮುಂದಾಗಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ಚಾಮರಸ ಮಾಲೀಪಾಟೀಲ್ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿ, ಇತ್ತೀಚೆಗೆ ತುಂಗಭದ್ರಾ ಡ್ಯಾಂಗೆ ಬಾಗೀನ ಅರ್ಪಿಸಲು ಆಗಮಿಸಿದ್ದ ಡಿಸಿಎಂ ಡಿ.ಕೆ ಶಿವಕುಮಾರ ಅವರಿಗೆ ತುಂಗಭದ್ರಾ ಎಡದಂಡೆ ಕಾಲುವೆಯ ಕೊನೆ ಭಾಗದ ರೈತರು ನೀರಿಗಾಗಿ ಹೋರಾಟ ಮಾಡುತ್ತಿದ್ದಾರೆ ಎಂದು ತಿಳಿಸಿದಾಗ ‘ರೈತರು ಹೋರಾಟ ಮಾಡಲಿ, ಮೇಲ್ಭಾಗದಲ್ಲಿ ನೀರು ಯಾರು ಕದಿಯುತ್ತಿದ್ದಾರೆ ಎಂದು ತಿಳಿಯಲಿ’ ಎಂದು ಹೇಳುವ ಮೂಲಕ ಬೇಜವಾಬ್ದಾರಿ ವರ್ತನೆ ತೋರಿದ್ದಾರೆ ಎಂದು ಆರೋಪಿಸಿದರು.

ತುಂಗಭದ್ರಾ ಎಡದಂಡೆ ಕಾಲುವೆಯ ಕೊನೆ ಭಾಗದ ರೈತರಿಗೆ ಸಮರ್ಪಕ ನೀರು ಹರಿಸಲು, ನೀರಿನ ನಿರ್ವಹಣೆ, ಸಿಬ್ಬಂದಿ ಕೊರತೆ, ಕಾಲುವೆ ಹೂಳು ತೆಗೆಯುವ ಬಗ್ಗೆ ಹಾಗೂ ಅನಧೀಕೃತ ನೀರಾವರಿಯಿಂದ ಅಚ್ಚುಕಟ್ಟು ಪ್ರದೇಶದ ಅಧಿಕೃತ ರೈತರಿಗೆ ನೀರು ದೊರೆಯದೇ ಇರುವ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಲಾಗಿದ್ದು, ರಾಯಚೂರು ಹಾಗೂ ಕೊಪ್ಪಳ ಉಸ್ತುವಾರಿ ಸಚಿವರು ಹಾಗೂ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ ಎಂದರು.

ಪ್ರತಿಭಟನೆ ಮಾಡಿಯೇ ರೈತರು ನೀರು ಪಡೆದುಕೊಳ್ಳುವಂತಹ ಸ್ಥಿತಿ ನಿರ್ಮಾಣವಾಗಿದ್ದು, ಅಕ್ರಮ ನೀರಾವರಿಯನ್ನು ತಡೆಯಲು ಕಾಯ್ದೆ ರೂಪಿಸಿದರೂ ಅದು ಸಮರ್ಪಕವಾಗಿ ಜಾರಿಯಾಗಿಲ್ಲ. ಕಾಲುವೆ ಕೊನೆ ಭಾಗದ ರೈತರಿಗೆ ನೀರು ತಲುಪದೇ ಹೋದಲ್ಲಿ ಮುಂದೆ ಜಿಲ್ಲೆಗೆ ಆಗಮಿಸುವ ಸಿಎಂ, ಡಿಸಿಎಂ ಹಾಗೂ ಎಲ್ಲ ಸಚಿವರಿಗೆ ಘೆರಾವ್ ಹಾಕಿ ಉಗ್ರ ಪ್ರತಿಭಟನೆ ಮಾಡುವುದಾಗಿ ಎಚ್ಚರಿಸಿದರು.

ಈ ಸಂದರ್ಭದಲ್ಲಿ ಪ್ರಮುಖರಾದ ಪ್ರಭಾಕರ್ ಪಾಟೀಲ್, ಬೂದಯ್ಯ ಸ್ವಾಮಿ, ಅಮರಣ್ಣ ಗುಡಿಹಾಳ, ದೇವರಾಜ್ ನಾಯಕ, ಮಲ್ಲಣ್ಣ ದಿನ್ನಿ ಸೇರಿದಂತೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net