ಆರಂಭವಾದ ಹಿಂಗಾರು ಕೃಷಿ: ಜಿಲ್ಲೆಯಲ್ಲಿ ಶೇ.10.51 ರಷ್ಟು ಬಿತ್ತನೆ

15 Shashi 01
Published on

ರಾಯಚೂರು: ಜಿಲ್ಲೆಯಲ್ಲಿ ಕಳೆದ ಮುಂಗಾರು ಹಂಗಾಮಿನ ವೇಳೆ ಅತಿವೃಷ್ಠಿಯಿಂದ ಬೆಳೆಹಾನಿ ಸಂಭವಿಸಿ, ಫಸಲಿಗೆ ಬಂದ ಬೆಳೆಯು ಅತಿಯಾದ ಮಳೆಯ ಕಾರಣದಿಂದ ಹಾಳಾಗಿತ್ತು. ಪ್ರಸ್ತುತ ಹಿಂಗಾರು ಹಂಗಾಮು ಆರಂಭವಾಗಿದ್ದು, ಹಿಂಗಾರಿನ ಕೃಷಿಗೆ ಮಳೆ ರಾಯ ಕೃಪೆ ತೋರುವನೇ ಎಂಬುವುದನ್ನು ಕಾದು ನೋಡಬೇಕಾಗಿದೆ.

ರಾಯಚೂರು ಜಿಲ್ಲೆಗೆ ಹಿಂಗಾರು ಹಂಗಾಮಿನ ಬಿತ್ತನೆ ಗುರಿ 1,27,128 ಹೆಕ್ಟರ್‌ಗಳಷ್ಟಿದ್ದು, ಅ.14ರವರೆಗೆ ಜಿಲ್ಲೆಯಲ್ಲಿ 13,356 ಹೆಕ್ಟರ್ ಪ್ರದೇಶ ಬಿತ್ತನೆಯಾಗಿದ್ದು, ಶೇ.10.51 ರಷ್ಟು ಸಾಧನೆಯಾಗಿದೆ. ಆದರೆ ರಾಯಚೂರು ತಾಲೂಕಿನ ಹಿಂಗಾರು ಹಂಗಾಮಿನ ಗುರಿ ಕೇವಲ 6835 ಹೆಕ್ಟರ್ ನಷ್ಟಿದೆ. ರಾಯಚೂರು ತಾಲೂಕಿನಲ್ಲಿ ಹತ್ತಿ ಬೆಳೆಯನ್ನು ಹೆಚ್ಚಾಗಿ ಬೆಳೆಯುವುದರಿಂದ ಹತ್ತಿ ದೀರ್ಘಾವಧಿಯ ಬೆಳೆಯಾಗಿದ್ದು, ಹಿಂಗಾರಿನಲ್ಲಿ ಭೂಮಿ ಲಭ್ಯತೆ ಕಡಿಮೆ ಇರುತ್ತದೆ.

ಮುಂಗಾರಿನಲ್ಲಿ ಬಿತ್ತನೆ ಮಾಡಿದ ಬೆಳೆಗೆ ಮಾರು ಹೋಗಿರುವ ರೈತರು ಜನವರಿ ಫೆಬ್ರವರಿ ತಿಂಗಳಿನವರೆಗೂ ಕಟಾವು ಮಾಡುವುದರಿಂದ ಹಿಂಗಾರು ಗುರಿಯನ್ನು ರಾಯಚೂರು ತಾಲೂಕು ಕಡಿಮೆ ಹೊಂದಿದೆ.
ಜಿಲ್ಲೆಯಲ್ಲಿ ಉಳಿದ ಹಿಂಗಾರು ಬಿತ್ತನೆ ಗುರಿಯನ್ನು ಮುಟ್ಟಲು ಕೃಷಿ ಇಲಾಖೆ ಸಿದ್ಧತೆ ಮಾಡಿಕೊಳ್ಳಬೇಕಾಗಿದ್ದು, ರೈತರಿಗೆ ಬೇಕಾದ ಬಿತ್ತನೆ ಬೀಜ, ರಸಗೊಬ್ಬರಗಳನ್ನು ದಾಸ್ತಾನು ಮಾಡಿಕೊಳ್ಳುವ ಅಗತ್ಯತೆ ಇದೆ. ರೈತರಿಗೆ ಸಮರ್ಪಕವಾಗಿ ಬಿತ್ತನೆ ಬೀಜ ಮತ್ತು ರಸಗೊಬ್ಬರ ದೊರೆತಲ್ಲಿ ಉತ್ತಮ ರೀತಿ ಫಸಲನ್ನು ರೈತರು ಹಿಂಗಾರಿನಲ್ಲಿ ಪಡೆಯಬಹುದಾಗಿದೆ.

ಜೋಳ, ಕಡಲೆ ಬೆಳೆಗಳನ್ನು ಬೆಳೆಯುವಲ್ಲಿ ರೈತರು ಹೆಚ್ಚಿನ ಆಸಕ್ತಿ ತೋರಿದ್ದು, ಹಿಂಗಾರು ಹಂಗಾಮು ರೈತರ ಸಾಥ್ ನೀಡುತ್ತಿದೆ. 49,900 ಹೆಕ್ಟರ್ ಹಿಂಗಾರಿ ಜೋಳ ಹಾಗೂ 869 ಹೆಕ್ಟರ್ ಮುಸುಕಿನ ಜೋಳದ ಗುರಿಯನ್ನು ಹೊಂದಲಾಗಿದ್ದು, ಈಗಾಗಲೇ 7242 ಹೆಕ್ಟರ್ ಹಿಂಗಾರಿ ಜೋಳವನ್ನು ಬಿತ್ತನೆ ಮಾಡಲಾಗಿದೆ.

45,416 ಹೆಕ್ಟರ್ ಕಡಲೇ ಬೆಳೆಯ ಗುರಿಯನ್ನು 2024-25ನೇ ಸಾಲಿನ ಹಿಂಗಾರು ಹಂಗಾಮಿನಲ್ಲಿ ಇಲಾಖೆ ಇಟ್ಟುಕೊಮಡಿದ್ದು, ಈವರೆಗೆ 5759 ಹೆಕ್ಟರ್ ಪ್ರದೇಶದಲ್ಲಿ ಕಡಲೇ ಬಿತ್ತನೆ ಮಾಡಲಾಗಿದೆ. ಅಲ್ಪ ಪ್ರಮಾಣದಲ್ಲಿ ಗೋದಿ, ಹುರುಳಿ, ಕುಸುಬೆ, ಶೇಂಗಾ ಬೆಳೆಯನ್ನು ಬಿತ್ತಲಾಗಿದೆ.
ಮಾನವಿ ತಾಲೂಕಿನಲ್ಲಿ 1410 ಹೆಕ್ಟರ್, ಸಿರವಾರ 1055, ದೇವದುರ್ಗ 15, ಲಿಂಗಸುಗೂರು 4502, ಮಸ್ಕಿ 1254, ಸಿಂಧನೂರು 5120 ಹೆಕ್ಟರ್‌ನಷ್ಟು ಹಿಂಗಾರು ಬೆಳೆಗಳ ಬಿತ್ತನೆ ಮಾಡಲಾಗಿದ್ದು, ರಾಯಚೂರು ತಾಲೂಕಿನಲ್ಲಿ ಇನ್ನೂ ಬಿತ್ತನೆ ಆರಂಭವಾಗಿಲ್ಲ.

ಜಿಲ್ಲೆಯಲ್ಲಿ 13,340 ಕ್ವಿ. ಕಡಲೆ, 11,500 ಕ್ವಿ. ಶೇಂಗಾ, 170 ಕ್ವಿ. ಹಿಂಗಾರಿ ಜೋಳದ ಬಿತ್ತನೆ ಬೀಜಗಳನ್ನು ಎಲ್ಲ ರೈತ ಸಂಪರ್ಕ ಕೇಂದ್ರಗಳಲ್ಲಿ ದಾಸ್ತಾನು ಮಾಡಲಾಗಿದೆ. ಒಟ್ಟಾರೆಯಾಗಿ ಜಿಲ್ಲೆಯಲ್ಲಿ ಬಿತ್ತನೆ ಬೀಜಕ್ಕೆ ಯಾವುದೇ ಕೊರತೆ ಕಂಡುಬರುವಂತೆ ಕಾಣುತ್ತಿಲ್ಲವಾದರೂ. ರೈತರಿಗೆ ಅಗತ್ಯಕ್ಕೆ ತಕ್ಕಂತೆ ಬಿತ್ತನೆ ಬೀಜ ಮತ್ತು ರಸಗೊಬ್ಬರ ಒದಗಿಸಲು ಇಲಾಖೆ ಸಿದ್ಧತೆ ಮಾಡಿಕೊಳ್ಳಬೇಕಾಗಿದೆ.

ಈಗಾಗಲೇ ಮುಂಗಾರಿನಲ್ಲಿ ಬೆಳೆದ ಹತ್ತಿ ಬೆಳೆ ಸಂಪೂರ್ಣವಾಗಿ ಹಾನಿಗೊಳಗಾಗಿದ್ದು, ಈ ಬಾರಿ ರೈತರು ಜೋಳ, ಕಡಲೆ, ಶೇಂಗಾ ಸೇರಿದಂತೆ ಇತರೆ ಹಿಂಗಾರು ಬೆಳೆಗಳನ್ನು ಬೆಳೆಯಲು ಆಸಕ್ತಿ ತೋರುವರೇ. ಹಿಂಗಾರು ಬೆಳೆಗೆ ವರುಣರಾಯ ರೈತರ ಕೈ ಹಿಡಿಯುವನೇ ಎಂಬುವುದನ್ನು ಕಾದು ನೋಡಬೇಕಾಗಿದೆ.

ಮುಂಗಾರಿನಲ್ಲಿ ಕೈಗೆ ಸಿಗದ ಹತ್ತಿ: ಜಿಲ್ಲೆಯಲ್ಲಿ ಅತಿ ಹೆಚ್ಚಾಗಿ ಮುಂಗಾರು ಬೆಳೆಗಳನ್ನು ಬೆಳೆಯಲಾಗುತ್ತದೆ. ಖುಷ್ಕಿ ಪ್ರದೇಶವೆಲ್ಲ ಹತ್ತಿಮಯವಾಗಿದೆ. ಬೆಳೆದ ಹತ್ತಿಯೂ ಕೈಗೆ ಸಿಗದೇ ಅತಿವೃಷ್ಠಿಯಿಂದ ಹಾಳಾಗಿದೆ. ಮುಂಗಾರಿನಲ್ಲಿ ಅತಿಯಾದ ಮಳೆಯಿಂದ ಹಾನಿಯಾದ ಪ್ರದೇಶದ ಬೆಳೆ ಸಮೀಕ್ಷಿಯನ್ನು ತ್ವರಿತವಾಗಿ ಮಾಡಬೇಕೆನ್ನುವ ಕೂಗು ರೈತರಿಂದ ಕೇಳಿ ಬರುತ್ತಿದೆ.

ಜಿಲ್ಲೆಯಲ್ಲಿರುವ ಹಿಂಗಾರು ಹಂಗಾಮಿನ ಗುರಿಯನ್ನು ಪೂರ್ಣಗೊಳಿಸುವಷ್ಟು ಸಮರ್ಪಕವಾದ ಬಿತ್ತನೆ ಬೀಜ ಮತ್ತು ರಸಗೊಬ್ಬರವನ್ನು ದಾಸ್ತಾನು ಮಾಡಲಾಗಿದೆ. ರೈತರ ಅಗತ್ಯಕ್ಕೆ ತಕ್ಕಂತೆ ಪೂರೈಸಲು ಸಹ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. | ಜಯಪ್ರಕಾಶ, ಕೃಷಿ ಇಲಾಖೆ ಪ್ರಭಾರಿ ಜಂಟಿ ನಿರ್ದೇಶಕ, ರಾಯಚೂರು

ಅಲ್ಪ ಪ್ರಮಾಣದಲ್ಲಿ ಜಿಲ್ಲೆಯಲ್ಲಿ ಜೋಳ, ಶೇಂಗಾ, ಕಡಲೇ ಬೆಳೆಯಲಾಗುತ್ತದೆ. ಹಿಂಗಾರಿಗೆ ಒಂದು ಮಳೆಯ ಅವಶ್ಯಕತೆ ತುಂಬಾ ಇದೆ. ಒಂದು ಮಳೆಯಾದಲ್ಲಿ ಹಿಂಗಾರಿಗೆ ತುಂಬಾ ಅನುಕೂಲವಾಗಲಿದೆ. | ಚಾಮರಸ ಮಾಲೀಪಾಟೀಲ್, ರಾಜ್ಯ ಗೌರವಾಧ್ಯಕ್ಷ, ಕರ್ನಾಟಕ ರೈತ ಸಂಘ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net