

ರಾಯಚೂರು: ದುರ್ಬಲ ಮನಸ್ಸಿನಿಂದಾಗಿ ಶೇ.80 ರೋಗಗಳು ಬರುತ್ತಿದ್ದು ದೈಹಿಕ, ಮಾನಸಿಕ, ಸಾಮಾಜಿಕ ಮತ್ತು ಆಧ್ಯಾತ್ಮಿಕವಾಗಿ ಸದೃಢರಾದಾಗ ಪರಿಪೂರ್ಣ ಆರೋಗ್ಯ ಹೊಂದಿರಲು ಸಾಧ್ಯ ಎಂದು ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸ್ಥಳೀಯ ಘಟಕದ ಮುಖ್ಯಸ್ಥೆ ಸ್ಮಿತಾ ಅಕ್ಕ ಹೇಳಿದರು.
ನಗರದ ಬ್ರಹ್ಮಕುಮಾರಿ ಈಶ್ವರೀಯ ವಿದ್ಯಾಲಯದಲ್ಲಿ ರಾಷ್ಟ್ರೀಯ ವೈದ್ಯರ ದಿನ ಕಾರ್ಯಕ್ರಮದಲ್ಲಿ ಭಾನುವಾರ ಮಾತನಾಡಿ, ಅಧ್ಯಾತ್ಮದಲ್ಲಿ ತೊಡಗುವುದರಿಂದ ಹಲವಾರು ರೋಗ, ರುಜಿನಗಳಿಂದ ದೂರ ಇರಬಹುದು ಎಂದರು.
ಇದನ್ನೂ ಓದಿ: ಪ್ರಜಾಪಿತ ಈಶ್ವರೀಯ ವಿವಿ ಶಿವ ಸಂಸ್ಕೃತಿಯ ಪ್ರತೀಕ
ವೈದ್ಯ ಶೈಲೇಶ ಅಮರಖೇಡ ಮಾತನಾಡಿ, ಡಾ.ಬಿ.ಸಿ.ರಾಯ್ ಗೌರವಾರ್ಥ ಪ್ರತಿ ವರ್ಷ ಜು.1 ಅನ್ನು ರಾಷ್ಟ್ರೀಯ ವೈದ್ಯರ ದಿನವಾಗಿ ಆಚರಿಸಲಾಗುತ್ತಿದೆ. ವಿದ್ಯಾಲಯದಿಂದ ರಾಜಸ್ಥಾನದಲ್ಲಿ ನಡೆಯಲಿರುವ ಮೈಂಡ್ ಬಾಡಿ ಮೆಡಿಸಿನ್ ಕಾನ್ಫರೆನ್ಸ್‌ಗೆ ಜಿಲ್ಲೆಯ ತಂಡವನ್ನು ಕಳಿಸಲಾಗುವುದು ಎಂದರು.
ಡಾ.ರಮೇಶ ಮಾತನಾಡಿ, ಸಕಾರಾತ್ಮಕ ಆಲೋಚನೆಗಳಿಂದ ಜೀವಿಸಿದಾಗ ಅನೇಕ ರೋಗಗಳಿಂದ ಮುಕ್ತರಾಗಬಹುದಾಗಿದೆ. ಮಾನಸಿಕವಾಗಿ ಸದೃಢವಾಗಿದ್ದಾಗ ಮಾತ್ರ ಸಂತೃಪ್ತಿಯಿಂದ ಜೀವಿಸಬಹುದಾಗಿದೆ ಎಂದು ಹೇಳಿದರು. ವೈದ್ಯರಾದ ತಾನಾಜಿ ಕಲ್ಯಾಣಕರ್, ಕಿರಣ ನಾಯಕ, ಚಂದ್ರಶೇಖರ, ಜ್ಯೋತಿ, ರಾಕೇಶ, ಜೆ.ಸತ್ಯನಾಥ ಉಪಸ್ಥಿತರಿದ್ದರು.