

ರಾಯಚೂರು: ನಗರಸಭೆ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲಾಧಿಕಾರಿ ಹಾಗೂ ನಗರಸಭೆ ಆಡಳಿತಾಧಿಕಾರಿ ಕೆ.ನಿತೀಶ್ ಅಧ್ಯಕ್ಷತೆಯಲ್ಲಿ ವಿಧಾನ ಪರಿಷತ್ ಸದಸ್ಯ ಎ.ವಸಂತಕುಮಾರ ಉಪಸ್ಥಿತಿಯಲ್ಲಿ ಸಾಮಾನ್ಯ ಸಭೆ ಜರುಗಿತು.
ನಗರಸಭೆಯಿಂದ ನಿರ್ವಹಣೆಯಾಗುತ್ತಿರುವ ಕೆಲಸಗಳ ಬಗ್ಗೆ ಹಾಗೂ ನಗರದ ಸ್ವಚ್ಛತೆಯ ಬಗ್ಗೆ ಡಿಸಿ ತೀವ್ರ ಅಸಮಧಾನ ವ್ಯಕ್ತ ಪಡಿಸಿದರು. ನಗರ ಅಸ್ವಚ್ಛತೆಯಿಂದ ಕೂಡಿದ್ದು, ರಾಯಚೂರು ನಗರಸಭೆಯನ್ನು ರಾಜ್ಯದ ಅತ್ಯುತ್ತಮ ನಗರಸಭೆಯನ್ನಾಗಿಸಲು ಪ್ರತಿಯೊಬ್ಬರು ಶ್ರಮಿಸೋಣ ಎಂದು ಕರೆ ನೀಡಿದರು.
ಅನೇಕ ಜಿಲ್ಲೆಗಳಲ್ಲಿ ಕೆಲಸ ಮಾಡಿದ್ದು, ಆದರೆ ರಾಯಚೂರಿನಲ್ಲಿ ಸ್ವಚ್ಛತೆ ತೀರಾ ಕಡಿಮೆಯಿದೆ ಎಂದು ನೇರ ನುಡಿಗಳನ್ನಾಡಿದರು. ನಗರಸಭೆಯಿಂದ ಜನರಿಗೆ ದಿನದ 24 ಗಂಟೆ ಶುದ್ಧ ಕುಡಿಯುವ ನೀರು ಪೂರೈಸಲು ನಗರಸಭೆಯ ಹಿರಿಯ ಸದಸ್ಯರು, ಇಂಜಿನಿಯರ್‌ಗಳನ್ನೊಳಗೊಂಡ ಸಮಿತಿ ರಚಿಸಿ ನೀರು ಪೂರೈಕೆಯ ಕಾರ್ಯ ನಿರ್ವಹಿಸುವಂತೆ ತಿಳಿಸಿದರು.
ವಿಧಾನ ಪರಿಷತ್ ಸದಸ್ಯ ಎ.ವಸಂತಕುಮಾರ ಮಾತನಾಡಿ, ಜಿಲ್ಲೆಯಲ್ಲಿ ಕುಡಿಯುವ ಸರಬರಾಜಿಗಿರುವ ತಾಂತ್ರಿಕ ಸಮಸ್ಯೆಗಳ ಬಗ್ಗೆ ಅಧಿಕಾರಿಗಳು ಎಲ್ಲ ಮಾಹಿತಿಗಳನ್ನು ಪಡೆದುಕೊಂಡಿರಬೇಕು. ಎಷ್ಟು ವಾರ್ಡ್‌ಗಳು ಹಾಗೂ ಗ್ರಾಮಗಳಿಗೆ ನೀರು ಸರಬರಾಜು ಮಾಡಲಾಗುತ್ತಿದೆ. ನಿರಂತವಾಗಿ ನೀರು ಪೂರೈಕೆ ಮಾಡಲು ಇರುವ ಸಮಸ್ಯೆಗಳೇನು ಎಂಬುವುದರ ಬಗ್ಗೆ ತಿಳಿದುಕೊಂಡಿರಬೇಕು ಎಂದರು.
ಕೈಗಾರಿಕೆಗಳಿಗೆ ಕಚ್ಚಾ ನೀರು ಪೂರೈಕೆಯಾಗಬೇಕು ಆದರೆ ಶುದ್ಧಿಕರಿಸಿದ ನೀರು ಪೂರೈಕೆಯಾಗುತ್ತಿರುವುದರಿಂದ ನಗರದ ಜನರಿಗೆ ಕುಡಿಯುವ ನೀರಿನಲ್ಲಿ ವ್ಯತ್ಯಯ ಕಂಡುಬರುತ್ತಿದ್ದು, ಈ ಬಗ್ಗೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.
ಹಿರಿಯ ನಗರಸಭೆ ಸದಸ್ಯ ಜಯಣ್ಣ ಮಾತನಾಡಿ, ನಗರದಲ್ಲಿ ಕೃಷ್ಣಾ ನದಿ ಹಾಗೂ ತುಂಗಭದ್ರಾ ನದಿಯಿಂದ ನೀರು ಸರಬರಾಜು ಮಾಡಲಾಗುತ್ತದೆ ಆದರೂ 3 ದಿನಗಳಿಗೊಮ್ಮೆ ನೀರು ಪೂರೈಕೆ ಮಾಡಲಾಗುತ್ತಿದೆ. ಈ ಹಿಂದೆ ನೀರಿನ ಸಮಸ್ಯೆಯಿದ್ದಾಗಲೂ ದಿನಕ್ಕೆ ಎರಡು ಬಾರಿ ನೀರು ಪೂರೈಸಲಾಗುತ್ತಿತ್ತು ನೀರು ಸರಬರಾಜಿಗೆ ಅಧಿಕಾರಿಗಳ ಆಂತರಿಕ ಯೋಚನೆ ಅಗತ್ಯವಾಗಿದೆ ಎಂದರು.
ನಗರದಲ್ಲಿ ಬೀದಿ ದೀಪಗಳ ನಿರ್ವಹಣೆಗೆ ಸಂಬಂಧಿಸಿದಂತೆ ಸರಕು ಮತ್ತು ಮಾನವಶಕ್ತಿ(ಕಾರ್ಯ ನಿರ್ವಹಣೆಗೆ ಸಿಬ್ಬಂದಿ) ಒಂದೇ ಏಜೆನ್ಸಿ ಪೂರೈಕೆ ಮಾಡುತಿತ್ತು. ಇದರಿಂದ ನಿರ್ವಹಣೆ ಕಷ್ಟವಾಗಿತ್ತು. ಸರಕನ್ನು ನಗರಸಭೆಯಿಂದಲೇ ನೀಡಲಾಗುವುದು ಮತ್ತು ಮಾನವಶಕ್ತಿಗಳನ್ನು ಏಜೆನ್ಸಿಯಿಂದ ಪಡೆಯಲಾಗುವುದು. 7 ದಿನಗಳಲ್ಲಿ ಅಲ್ಪಾವಧಿ ಟೆಂಡರ್ ಕರೆದು ಬೀದಿ ದೀಪಗಳ ನಿರ್ವಹಣೆಗೆ ಸಿಬ್ಬಂದಿಗಳನ್ನು ನಿಯೋಜಿಸುವಂತೆ ಮತ್ತು ನಿರ್ವಹಣೆ ಸರಿಯಾಗಿ ಆಗುವಂತೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಡಿಸಿ ಕೆ.ನಿತೀಶ್ ಸಭೆಯಲ್ಲಿ ಸೂಚಿಸಿದರು.
ಸಭೆಯಲ್ಲಿ ನಾಮನಿರ್ದೇಶಿತ ಸದಸ್ಯರನ್ನು ಒಳಗೊಂಡು ಕೇವಲ 15 ಸದಸ್ಯರು ಮಾತ್ರ ಇದ್ದರು. ಬಹುತೇಕ ಚುನಾಯಿತ ನಗರಸಭೆ ಸದಸ್ಯರು ಸಾಮಾನ್ಯ ಸಭೆಗೆ ಗೈರಾಗಿದ್ದರು. ಡಿಸಿ ನಿತೀಶ್ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ಪ್ರಥಮ ಸಭೆ ಇದಾಗಿರುವುದರಿಂದ ನಗರದ ವಾರ್ಡ್‌ಗಳ ಸಮಸ್ಯೆ ಹೇಳುವ ಸದಸ್ಯರೇ ಗೈರಾಗಿರುವುದು ಹಲವರ ಬೇಸರಕ್ಕೆ ಕಾರಣವಾಯಿತು.
ಈ ಸಂದರ್ಭದಲ್ಲಿ ನಗರಸಭೆ ಪೌರಾಯುಕ್ತ ಗುರುಸಿದ್ದಯ್ಯ ಹಿರೆಮಠ, ಸದಸ್ಯರಾದ ಶಶಿರಾಜ್, ನಾಗರಾಜ್, ಶ್ರೀನಿವಾಸರೆಡ್ಡಿ, ಬಸವರಾಜ್ ದರೂರ್, ಸಾಜಿದ್ ಸಮೀರ್, ನರಸಮ್ಮ ಮಾಡಗಿರಿ, ಶರಣಗೌಡ ಇದ್ದರು.