

ರಾಯಚೂರು: ಕುಲಾಂತರಿ ಬೀಜಗಳಿಗೆ ಬಹುರಾಷ್ಟ್ರೀಯ ಕಂಪನಿಗಳಿಂದ ಮಾರುಕಟ್ಟೆ ಸೃಷ್ಠಿ ಮಾಡಲಾಗುತ್ತಿದ್ದು, ಇದರಿಂದ ಪರಿಸರ ಮತ್ತು ಆರೋಗ್ಯದ ಮೇಲೆ ದುಷ್ಪರಿಣಾಮಗಳು ಎದುರಾಗುವ ಸಾಧ್ಯತೆಯಿದೆ. ಸರ್ಕಾರ ಇದಕ್ಕೆ ಅವಕಾಶ ಮಾಡಿಕೊಡಬಾರದು ಎಂದು ಕರ್ನಾಟಕ ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ಚಾಮರಸ ಮಾಲೀಪಾಟೀಲ್ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿ, ಆಧುನಿಕ ತಂತ್ರಜ್ಷಾನವು ಅತ್ಯಂತ ದುಬಾರಿ ಹಾಗೂ ಅಸುರಕ್ಷತೆಯಿಂದ ಕೂಡಿದ್ದು, ಇಡೀ ಕೃಷಿ ವ್ಯವಸ್ಥೆಯನ್ನು ಕಪಿಮುಷ್ಠಿಯಲ್ಲಿ ಹಿಡಿದುಕೊಳ್ಳುವ ಹುನ್ನಾರ ನಡೆದಿದೆ. ಬೇಸಾಯ ಪದ್ದತಿಯಲ್ಲಿ ಕುಲಾಂತರಿ ಬೀಜ(ಜೀನ್ ಮಾಡಿಫೈಡ್ ಸೀಡ್ಸ್)ಗಳನ್ನು ತರಲು ಹೊರಟಿರುವ ಬಹುರಾಷ್ಟ್ರೀಯ ಕಂಪನಿಗಳ ಒತ್ತಡಕ್ಕೆ ಸರ್ಕಾರ ಮಣಿಯಬಾರದು ಎಂದು ತಿಳಿಸಿದರು.
ಇದನ್ನೂ ಓದಿ: ಕುಲಾಂತರಿ ತಳಿಗಳ ಪ್ರಯೋಗಕ್ಕೆ ರೈತರ ವಿರೋಧ
ಆ.22ರಂದು ಪಂಜಾಬ್ನ ಚಂಡಿಗಢದಲ್ಲಿ 18 ರಾಜ್ಯಗಳ ರೈತ ಮುಖಂಡರು, ರೈತ ಹಕ್ಕುಗಳ ಕಾರ್ಯಕರ್ತರು ಹಾಗೂ ರೈತರು ಸೇರಿ ಕುಲಾಂತರಿ ಬೆಳೆಗಳ ಕುರಿತು ಸಮಾಲೋಚನೆಯನ್ನು ನಡೆಸಲಾಗಿದೆ. ದೇಶದ ಆಹಾರ ಉತ್ಪಾಧನೆ ಪದ್ದತಿ ಹಾಗೂ ಕೃಷಿ ಪದ್ದತಿಯಲ್ಲಿ ಕುಲಾಂತರಿ ಬೀಜಗಳ ಪ್ರವೇಶದಿಂದ ಜನರ ಆರೋಗ್ಯ ಹಾಗೂ ಪರಿಸರದ ಮೇಲೆ ಕೆಟ್ಟ ಪರಿಣಾಮ ಬೀರುವ ಬಗ್ಗೆ ಚರ್ಚೆಗಳು ನಡೆದಿವೆ ಎಂದರು.
ಕುಲಾಂತರಿ ಬೆಳೆಗಳ ಕುರಿತು ರಾಷ್ಟ್ರೀಯ ನೀತಿಯನ್ನು ರೂಪಿಸಲು ಕೇಂದ್ರ ಸರ್ಕಾರದ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯಕ್ಕೆ ನ್ಯಾಯಾಲಯವು ಸೂಚನೆ ನೀಡಿದ್ದು, ರೈತ ಪ್ರತಿನಿಧಿಗಳನ್ನು ಒಳಗೊಂಡಂತೆ ಭಾಗೀದಾರರನ್ನು ಆಹ್ವಾನಿಸಿ ಸಾರ್ವಜನಿಕ ಸಮಾಲೋಚನೆ ನಡೆಸಲು ಆದೇಶ ನೀಡಿದೆ.
ಮುಂದುವರೆದ ದೇಶಗಳಲ್ಲಿ ಕುಲಾಂತರಿ ಬೆಳೆಗಳನ್ನು ನಿಷೇಧಿಸಲಾಗಿದೆ. ಆದರೆ ಭಾರತದಲ್ಲಿ ಬಹುರಾಷ್ಟ್ರೀಯ ಕಂಪನಿಗಳ ಒತ್ತಡಕ್ಕೆ ಮಣಿದು ಸರ್ಕಾರ ಈ ಬೆಳೆಗೆ ಮಾರುಕಟ್ಟೆ ಸೃಷ್ಠಿ ಮಾಡಲು ಹೊರಟಿರುವುದು ಖಂಡನೀಯ ಎಂದು ದೂರಿದರು.
ಕೇಂದ್ರದ ಪರಿಸರ, ಅರಣ್ಯ ಮತ್ತು ಹವಾಮಾನ ಸಚಿವಾಲಯ ಸಾರ್ವಜನಿಕ ಹಿತಾಸಕ್ತಿಗೆ ವಿರುದ್ಧವಾಗಿ ರಾಜ್ಯ ಸರ್ಕಾರಗಳು ರಾಜಿ ಎನಿಸಬಹುದಾದ ನಿಲುವುಗಳನ್ನು ಸಮಾಲೋಚನೆಯಲ್ಲಿ ತೆಗೆದುಕೊಳ್ಳಬಾರದು, ರೈತರಿಗೆ ಅಪಾಯ ಮತ್ತು ಅನಗತ್ಯ ಎನಿಸುವ ತಂತ್ರಜ್ಞಾನವನ್ನು ಬಲವಂತವಾಗಿ ಹೇರಬಾರದು. ರೈತರ ಸಮಸ್ಯೆಗಳ ಬಗ್ಗೆ ಕೇಂದ್ರ ಸರ್ಕಾರ ಪರಿಶೀಲನೆ ನಡೆಸಿ, ನೈಸರ್ಗಿಕ ಹಾಗೂ ಸಾವಾಯುವ ಕೃಷಿ ಪದ್ದತಿಯ ಅನುಷ್ಠಾನಕ್ಕಾಗಿ ಹೊಸ ರೂಪುರೇಷೆಗಳನ್ನು ಅನ್ವೇಷಣೆಗೆ ಮುಂದಾಗಬೇಕು ಎಂದು ಒತ್ತಾಯಿಸಿದರು.
ತುಂಗಭದ್ರಾ ಜಲಾಶಯದಲ್ಲಿರುವ ನೀರನ್ನು ಸರಿಯಾಗಿ ನಿರ್ವಹಣೆ ಮಾಡಿ, ಕೊನೆ ಭಾಗದ ರೈತರಿಗೆ ಸಮರ್ಪಕವಾಗಿ ನೀರೊದಗಿಸುವ ಕಾರ್ಯಕ್ಕೆ ರಾಜ್ಯ ಸರ್ಕಾರ ಹಾಗೂ ಅಧಿಕಾರಿಗಳು ಮುಂದಾಗಬೇಕು ಎಂದರು. ಈ ಸಂದರ್ಭದಲ್ಲಿ ಪ್ರಮುಖರಾದ ಮಲ್ಲಣ್ಣ ದಿನ್ನಿ, ಬೂದಯ್ಯ ಸ್ವಾಮಿ, ಯಂಕಪ್ಪ ಕಾರಭಾವಿ, ಗೋವಿಂದ ನಾಯಕ ಸೇರಿದಂತೆ ಇತರರಿದ್ದರು.